ಶಿರಸಿ | ಈಜಲು ತೆರಳಿದ್ದ ಇಬ್ಬರು ನೀರುಪಾಲು

ಶಿರಸಿ :ಈಜಲು ತೆರಳಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಉಂಚಳ್ಳಿ ಸಮೀಪದ ಮಾಸ್ತಿಜಡ್ಡಿ ಹಳ್ಳದಲ್ಲಿ ಭಾನುವಾರ ನಡೆದಿದೆ ಎಂದು ವರದಿಯಾಗಿದೆ.
ಮಾಸ್ತಿಜಡ್ಡಿ ಗ್ರಾಮದ ಮದನ ಗಜಾನನ ನಾಯ್ಕ (೧೬) ಹಾಗೂ ಹೊನ್ನಾವರ ತಾಲೂಕಿನ ಹರ್ಷ ಮಂಜುನಾಥ ನಾಯ್ಕ(೧೯) ಮೃತ ಬಾಲಕರಾಗಿದ್ದು, ಇಬ್ಬರೂ ಮಾಸ್ತಿಜಡ್ಡಿಯಲ್ಲಿರುವ ಸುಮಾರು ೧೫ ಅಡಿ ಆಳ ಹೊಂದಿರುವ ಬಾಂದಾರದಲ್ಲಿ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.
ಭಾನುವಾರ ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಹರ್ಷ, ಮದನ  ಉಂಚಳ್ಳಿ ಸಮೀಪದ ಮಾಸ್ತಿಜಡ್ಡಿ ಹಳ್ಳದ ಬಾಂದಾರ್ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಹರ್ಷ ಮತ್ತು ಮದನ ಈಜಲು ಕೆಳಗೆ ಇಳಿದಿದ್ದಾರೆ.  ನೀರಿನ ರಭಸಕ್ಕೆ ಇವರು ಮುಳುಗಿ ಕಣ್ಮರೆಯಾಗಿದ್ದಾರೆ.
ಮಾಹಿತಿ ತಿಳಿದ  ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ ಎನ್ನಲಾಗಿದೆ.  ಆದರೆ ಅವರಿಗೆ ಇಬ್ಬರು ಪತ್ತೆಯಾಗಲಿಲ್ಲ. ಬಳಿಕ ಶ್ರೀ ಮಾರಿಕಾಂಬ ಆಪತ್ಬಾಂಧವ ಸೇವಾ ತಂಡದ ಗೋಪಾಲ ಗೌಡ ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ನಡೆಸಿ ಇಬ್ಬರ ಮೃತದೇಹಗಳನ್ನು ಹುಡುಕಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬನವಾಸಿ ಪೊಲೀಸ್ ಠಾಣೆಯ ಪಿಎಸ್‌ಐ ಮಹಾಂತಪ್ಪ ಕುಂಬಾರ ಹಾಗೂ ತನಿಖಾ ಪಿಎಸ್‌ಐ ರವೀಂದ್ರ ಬಿರಾದಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement