ಬೆಂಗಳೂರು : ದೇಶದ ವಿವಿಧೆಡೆ ಹಾಗೂ ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇವಸ್ಥಾನಗಳ ಹುಂಡಿಗಳಲ್ಲಿ ಕಳ್ಳತನ ಮತ್ತು ಎಣಿಕೆ ಸಂದರ್ಭದಲ್ಲಿ ಹಣ ದುರುಪಯೋಗ ಆಗುತ್ತಿರುವ ಪ್ರಕರಣಗಳನ್ನು ತಡೆಗಟ್ಟಲು ಕರ್ನಾಟಕ ಸರ್ಕಾರವು ಕ್ರಮಕ್ಕೆ ಮುಂದಾಗಿದೆ. ದೇವಸ್ಥಾನಗಳ ಹುಂಡಿಗಳಲ್ಲಿ ಆಗುತ್ತಿರುವ ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ಹುಂಡಿ ಹಣ ಎಣಿಕೆಗೆ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಕಠಾರಿಯಾ ಅವರು ಹುಂಡಿ ನಗದು, ಚಿನ್ನ, ಬೆಳ್ಳಿ, ಭದ್ರತೆಗೆ ಸಂಬಂಧಿಸಿದಂತೆ ರಾಜ್ಯದ ಧಾರ್ಮಿಕ ದತ್ತಿ, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.
ದೇವಾಲಯಗಳ ವಿವಿಧ ಸೂಕ್ತ ಜಾಗಗಳನ್ನು ಗುರುತಿಸಿ, ಎಲ್ಲರಿಗೂ ಕಾಣುವಂತೆ ಹುಂಡಿಗಳನ್ನು ಅಳವಡಿಸಿ, ಸೂಕ್ತ ಭದ್ರತೆ ಒದಗಿಸುವುದು. ದೇವಾಲಯದಲ್ಲಿ ಅಳವಡಿಸುವ ಹುಂಡಿಗಳಿಗೆ ನಾಲ್ಕು ದಿಕ್ಕುಗಳಿಂದ ಕಾಣುವಂತೆ ಸಿಸಿಟಿವಿ ಕ್ಯಾಮರಾ ಕಡ್ಡಾಯವಾಗಿ ಅಳವಡಿಸಿ, ಸರ್ವರ್ನಲ್ಲಿ ಸಂರಕ್ಷಿಸುವುದು. ಜಿಲ್ಲಾಧಿಕಾರಿಗಳ/ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿನ ಮುಜರಾಯಿ ವಿಭಾಗದಲ್ಲಿ ಈ ಕ್ಯಾಮರಾಗಳನ್ನು ಮಾನಿಟರ್ ಮಾಡುವುದು. ದೇವಾಲಯಗಳಲ್ಲಿ ಹಾಲಿ ಅಳವಡಿಸಿರುವ ಸಿಸಿಟಿವಿಗಳು, ಡಿವಿಆರ್ಗಳನ್ನು ಕಳ್ಳತನ, ನಿಷ್ಕ್ರೀಯ, ಧ್ವಂಸ ಮಾಡುತ್ತಿರುವುದರಿಂದ ಹಾಗೂ ಕರ್ಪೂರವನ್ನು ಹಚ್ಚಿ ಅದರಿಂದ ಬರುವ ಕಾರ್ಬನ್ನಿಂದ ಕ್ಯಾಮೆರಾ ಲೆನ್ಸ್ ಗ್ಲಾಸ್ ಕಾಣದಂತೆ ಮಾಡಿ ಕಳ್ಳತನ ಮಾಡುವುದನ್ನು ತಡೆಗಟ್ಟುವ ದೃಷ್ಟಿಯಿಂದ ಸಿಸಿಟವಿ ವೆಬ್ ಕ್ಯಾಮರಾಗಳನ್ನು ಅಳವಡಿಸಲು ಸೂಚಿಸಲಾಗಿದೆ.
ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಸರ್ವರ್ ಅಳವಡಿಸಿ, ವಸತಿ ಕೋಶದ ವತಿಯಿಂದ ವೆಬ್ ಕ್ಯಾಮೆರಾಗಳ ಮೂಲಕ ಎಲ್ಲಾ ದೇವಾಲಯಗಳಲ್ಲಿ ಅಳವಡಿಸಿರುವ ಕ್ಯಾಮರಾಗಳ ಮೇಲ್ವಿಚಾರಣೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
ಭದ್ರತಾ ದೃಷ್ಟಿಯಿಂದ ದೇವಾಲಯಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳ ಸಂಪರ್ಕವನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ಪೊಲೀಸ್ ಅಧೀಕ್ಷಕರು ಮತ್ತು ಪೊಲೀಸ್ ಠಾಣೆಯ ಕಚೇರಿಗಳಿಗೆ ಸಂಪರ್ಕ ಕಲ್ಪಿಸಿ, ಅವುಗಳ ವೀಕ್ಷಣೆಗಾಗಿ ಸಂಚಾರ ನಿಯಂತ್ರಣ ಕೊಠಡಿಯಲ್ಲಿರುವಂತೆ ಡ್ಯಾಶ್ಬೋರ್ಡ್ಗಳ ವ್ಯವಸ್ಥೆ ಕಲ್ಪಿಸಲು ತಿಳಿಸಲಾಗಿದೆ.
ಎಲ್ಲಾ ದೇವಾಲಯಗಳಲ್ಲಿ ಭಕ್ತರು ನಗದು ಅಥವಾ ಚೀಲವನ್ನು ಹೊತ್ತು ಬಂದಾಗ ಜನಸಂದಣಿಯಲ್ಲಿ ಜೇಬು ಕಳ್ಳತನದಂತಹ ಘಟನೆಗಳನ್ನು ಕಡಿಮೆ ಮಾಡಲು ಡಿಜಿಟಲ್ ಪಾವತಿ ವ್ಯವಸ್ಥೆಗೆ ಹೆಚ್ಚಿನ ಉತ್ತೇಜನ ನೀಡಲು ಕ್ಯೂಆರ್ ಕೋಡ್ ಅಳವಡಿಸುವುದು ಹಾಗೂ ಅದರ ಅಡಿಯಲ್ಲಿ ಸಂಬಂಧಪಟ್ಟ ಬ್ಯಾಂಕ್ನ ವಿವರಗಳನ್ನು ಅಳವಡಿಸಲು ಸೂಚಿಸಲಾಗಿದೆ.
ಡಿಜಿಟಲ್ ದೇಣಿಗೆ ಮತ್ತು ನಗದು ರಹಿತ ಪಾವತಿಗಳನ್ನು ಸುಗಮಗೊಳಿಸಲು, ಭಕ್ತರು ಮತ್ತು ಸಂದರ್ಶಕರು ದೇಣಿಗೆ ನೀಡಲು, ಪ್ರಸಾದ, ಸೇವಾ ಟಿಕೆಟ್ಗಳು ಮತ್ತು ಇತರ ದೇವಾಲಯ ಸೇವೆಗಳನ್ನು ನಗದು ರಹಿತ ವಿಧಾನಗಳ ಮೂಲಕ ಖರೀದಿಸಲು ದೇವಾಲಯಗಳಲ್ಲಿ ಸುರಕ್ಷಿತ ಯುಪಿಐ, ಭೀಮ್, ಕ್ಯೂಆರ್ ಕೋಡ್ ಮತ್ತು ಇತರ ಡಿಜಿಟಲ್ ಪಾವತಿ ಸೌಲಭ್ಯಗಳನ್ನು ಒದಗಿಸಬೇಕು. ದೇವಾಲಯಗಳಲ್ಲಿ ಪಾರದರ್ಶಕತೆ, ಬಳಕೆಯ ಸುಲಭತೆ, ಸರಿಯಾದ ಲೆಕ್ಕಪರಿಶೋಧನಾ ಮಾರ್ಗ ಮತ್ತು ಸುಧಾರಿತ ಹಣಕಾಸು ನಿರ್ವಹಣೆ ಖಚಿತಪಡಿಸಿಕೊಳಲು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ದೇವಾಲಯದ ಲೆಕಪತ್ರ ವ್ಯವಸ್ಥೆಯೊಂದಿಗೆ ಸಂಯೋಜಿಸಬೇಕು ಎಂದು ಹೇಳಲಾಗಿದೆ.
ಹುಂಡಿ ಇರುವ ಕಡೆ ಮಾತ್ರ ಕ್ಯೂಆರ್ ಕೋಡ್ ಅಳವಡಿಸಬೇಕು. ಹುಂಡಿ ಎಣಿಕೆಯಲ್ಲಿ ಕಂದಾಯ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಲು ಹುಂಡಿ ಎಣಿಕೆ ದಿನಾಂಕಗಳನ್ನು ಮುಂಚಿತವಾಗಿಯೇ ಕ್ಯಾಲೆಂಡರ್ನಲ್ಲಿ `ಹುಂಡಿ ಎಣಿಕೆ’ ದಿನ ಎಂದು ನಿಗದಿಪಡಿಸಬೇಕು. ಹೆಚ್ಚು ದೇಣಿಗೆ/ಕಾಣಿಕೆ ಬರುವ ದೇವಾಲಯಗಳಲ್ಲಿ ವಾರಕ್ಕೆ ಒಂದು ದಿವಸ ಹಾಗೂ ಸಾಧಾರಣ ದೇಣಿಗೆ/ಕಾಣಿಕೆ ಬರುವ ದೇವಾಲಯಗಳಲ್ಲಿ ಎರಡು ವಾರಕ್ಕೆ ಒಂದು ದಿವಸ ಕಡ್ಡಾಯವಾಗಿ ಹುಂಡಿ ಎಣಿಕೆ ದಿನಾಂಕಗಳನ್ನು ಮುಂಚಿತವಾಗಿಯೇ ಕ್ಯಾಲೆಂಡರ್ನಲ್ಲಿ `ಹುಂಡಿ ಎಣಿಕೆ’ ದಿನ ಎಂದು ನಿಗದಿಪಡಿಸಬೇಕು. ಹುಂಡಿ ಎಣಿಕೆಯನ್ನು ಸಂಬಂಧಪಟ್ಟ ತಹಶೀಲ್ದಾರ್ರವರ ಮೇಲ್ವಿಚಾರಣೆಯಲ್ಲಿ ನಡೆಸಬೇಕು ಎಂದು ಸೂಚಿಸಲಾಗಿದೆ.
ಹುಂಡಿ ಎಣಿಕೆ ಸಂದರ್ಭದಲ್ಲಿ ಸ್ವೀಕೃತವಾಗಬಹುದಾದ ಚಿನ್ನ/ ಬೆಳ್ಳಿ ಇತ್ಯಾದಿ ವಸ್ತುಗಳನ್ನು ಎಣಿಕೆ ದಿನದಂದೇ ಕಡ್ಡಾಯವಾಗಿ ಮೌಲ್ಯಮಾಪನ ಮಾಡಿಸಿ, ಅಂದೇ ಸಂಬಂಧಪಟ್ಟ ಜಿಲ್ಲಾ ಉಪಖಜಾನೆಯಲ್ಲಿ, ಸೂಕ್ತ ಮೇಲ್ವಿಚಾರಣೆಯೊಂದಿಗೆ ಜಮಾ ಮಾಡಬೇಕು. ಹುಂಡಿ ಎಣಿಕೆ ಸಮಯದಲ್ಲಿ ಹಾಜರಿರುವ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಖಚಿತ ಪಡಿಸಿಕೊಳ್ಳಲು ಫೇಸ್ ರೆಕಗ್ನೀಶನ್ ಅಳವಡಿಸಬೇಕು ಮತ್ತು ಈ ಸಿಬ್ಬಂದಿ ಮತ್ತು ಅಧಿಕಾರಿಗಳು ಎಣಿಕೆಗೆ ಪ್ರವೇಶಿಸುವ ಸಂದರ್ಭದಲ್ಲಿ ಕ್ಯಾಶ್ ಇನ್ ಹ್ಯಾಂಡ್ ಘೋಷಿಸಬೇಕು. ಹುಂಡಿ ತೆರೆಯುವುದರಿಂದ ಹಿಡಿದು ಹುಂಡಿ ಎಣಿಕೆ ಮಾಡಿ ಬ್ಯಾಂಕಿನವರಿಗೆ ಹಸ್ತಾಂತರಿಸುವ ವರೆಗೆ ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣದ ವೇಳೆ ದಿನಾಂಕ ಮತ್ತು ಸಮಯ ದಾಖಲೆಯಾಗುವಂತೆ ಕಡ್ಡಾಯವಾಗಿ ಚಿತ್ರೀಕರಿಸಬೇಕು. ಹುಂಡಿ ಎಣಿಕೆ ಪ್ರಕ್ರಿಯೆಯ ಸಂದರ್ಭದಲ್ಲಿ, ಸ್ಥಳಾಂತರಿಸಬಹುದಾದ ಹುಂಡಿಯನ್ನು ಸ್ಥಳಾಂತರಿಸುವುದರಿಂದ ಪ್ರಾರಂಭಿಸಿ, ಹುಂಡಿ ಹಣವನ್ನು ಹುಂಡಿಯಿಂದ ಹೊರ ತೆಗೆಯುವ ಹಾಗೂ ಹುಂಡಿ ಎಣಿಕೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸಿಬ್ಬಂದಿಗೆ ಎಣಿಕೆ ಮಾಡಲು ನೀಡುವ ಹಣ ಮತ್ತು ಅವರು ಎಣಿಕೆ ಮಾಡಿದ ನಂತರ ಹಿಂದಿರುಗಿಸುವವರೆಗಿನ ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣವನ್ನು ದಿನಾಂಕ ಮತ್ತು ಸಮಯ ದಾಖಲೆಯಾಗುವಂತೆ ಕಡ್ಡಾಯವಾಗಿ ಚಿತ್ರೀಕರಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಅಲ್ಲದೆ, ಹುಂಡಿ ಎಣಿಕೆಗೆ ಸಾರ್ವಜನಿಕರ ಸೇವೆ ಪಡೆಯುವುದರ ಬದಲಿಗೆ ಕಡ್ಡಾಯವಾಗಿ ಗೃಹ ರಕ್ಷಕದಳದ ಸಿಬ್ಬಂದಿ/ ಬ್ಯಾಂಕ್ ಸಿಬ್ಬಂದಿ/ಸರ್ಕಾರಿ ನೌಕರರ ಸೇವೆಯನ್ನು ಪಡೆಯಬೇಕು. ಹಾಗೂ ಹುಂಡಿ ಎಣಿಕೆಗೆ ಖಾಸಗಿ/ಸಾರ್ವಜನಿಕರ ಸೇವೆ ಪಡೆಯುವಂತಿಲ್ಲ. ಹುಂಡಿಗಳ ಎಣಿಕೆ ಸಮಯದಲ್ಲಿ ಮತ್ತು ಹುಂಡಿಗಳಲ್ಲಿ ಕಳ್ಳತನದ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟ ದೇವಾಲಯದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ