ಉತಾಹ್ (ಅಮೆರಿಕ): ಅಮೆರಿಕದ ಉತಾಹ್ ರಾಜ್ಯದ ಶಾಪಿಂಗ್ ಮಾಲ್‌ನಲ್ಲಿ ಭಾರತೀಯ ಮೂಲದ ಕಿಯೋಸ್ಕ್ (Kiosk) ಉದ್ಯೋಗಿಯೊಬ್ಬರಿಗೆ ಅವರ ಧರ್ಮವನ್ನು ಕೇಳಿದ ನಂತರ ಚಾಕುವಿನಿಂದ ಇರಿದಿರುವ ಆಘಾತಕಾರಿ ಘಟನೆ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಆರೋಪಿಯು ಮೊದಲು ವ್ಯಕ್ತಿ ಮುಸ್ಲಿಮ್ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕವೇ ಚಾಕುವಿನಿಂದ ಇರಿದಿದ್ದಾನೆ.
ನ್ಯಾಯಾಲಯದ ದಾಖಲೆಗಳ ಪ್ರಕಾರ, 48 ವರ್ಷದ ಪೀಟರ್ ಮೈಕಲ್ ಲಾರ್ಸನ್ (Peter Michael Larsen) ವಿಚಾರಣೆ ವೇಳೆ ತಾನು ಸಂತ್ರಸ್ತನನ್ನು ಉದ್ದೇಶಪೂರ್ವಕವಾಗಿ ಮುಸ್ಲಿಮ್ ಎಂಬ ಕಾರಣಕ್ಕೆ ಇರಿದಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.
ಈ ಪ್ರಕರಣದಲ್ಲಿ ಲಾರ್ಸನ್ ವಿರುದ್ಧ ಕೊಲೆ ಯತ್ನ (Attempted Murder) ಹಾಗೂ ನಿಷೇಧಿತ ಅಪಾಯಕಾರಿ ಆಯುಧ ಹೊಂದಿದ್ದ ಆರೋಪ (Prohibited Dangerous Weapon Conduct) ಸೇರಿದಂತೆ ಹಲವು ಆರೋಪಗಳನ್ನು ದಾಖಲಿಸಲಾಗಿದೆ. ಸದ್ಯ ಆತ ಸಾಲ್ಟ್ ಲೇಕ್ ಕೌಂಟಿ ಜೈಲಿನಲ್ಲಿ(Salt Lake County Jail) ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಧರ್ಮ ಕೇಳಿದ ಬಳಿಕ ದಾಳಿ
ಈ ಘಟನೆ ಸೋಮವಾರ ವೆಸ್ಟ್ ವ್ಯಾಲಿ ಸಿಟಿಯ ವ್ಯಾಲಿ ಫೇರ್ ಮಾಲ್ (Valley Fair Mall)ನಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಲಾರ್ಸನ್ ಕಿಯೋಸ್ಕ್‌ನಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಉದ್ಯೋಗಿ ಸೊಹೈಲ್ (Sohail) ಅವರ ಬಳಿ ತೆರಳಿ ಮೊದಲು ಸಹಜವಾಗಿ ಮಾತುಕತೆ ಆರಂಭಿಸಿದ್ದಾನೆ. ಬಳಿಕ ಸೊಹೈಲ್ ಬಳಿ ನೀವು ಯಾವ ದೇಶದವರು ಮತ್ತು ಯಾವ ಧರ್ಮದವರು ಎಂದು ಪ್ರಶ್ನಿಸಿದ್ದಾನೆ.
ಸಮೀಪದ ಆಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಲೂನಾ ನುನೆಸ್ (Luna Nunez) ಅವರು ಎಬಿಸಿ ಸಾಲ್ಟ್ ಲೇಕ್ ಸಿಟಿಗೆ ನೀಡಿದ ಮಾಹಿತಿಯ ಪ್ರಕಾರ, ಲಾರ್ಸನ್ ಮೊದಲು, “ನೀವು ಎಲ್ಲಿಯವರು?” ಎಂದು ಕೇಳಿದ್ದಾನೆ. ಅದಕ್ಕೆ ಸೊಹೈಲ್, “ನಾನು ಭಾರತದವನು, ನನ್ನ ಹೆಸರು ಸೊಹೈಲ್” ಎಂದು ಉತ್ತರಿಸಿದ್ದಾರೆ. ನಂತರ “ನೀವು ಮುಸ್ಲಿಮರೇ?” ಎಂದು ಕೇಳಿದಾಗ, ಸೊಹೈಲ್ “ಹೌದು” ಎಂದು ಉತ್ತರಿಸುತ್ತಿದ್ದಂತೆಯೇ ಲಾರ್ಸನ್ ಏಕಾಏಕಿ ಚಾಕು ತೆಗೆದು ಇರಿಯಲು ಆರಂಭಿಸಿದ್ದಾನೆ.
ದಿ ಸಾಲ್ಟ್ ಲೇಕ್ ಟ್ರಿಬ್ಯೂನ್ ವರದಿ ಪ್ರಕಾರ, ಉಟಾ ಇಸ್ಲಾಮಿಕ್ ಸೆಂಟರಿನ ಇಮಾಮ್ ಶುವೈಬ್ ದಿನ್ ಅವರು, ದಾಳಿ ನಡೆಸುವ ಮೊದಲು ದಾಳಿಕೋರ ಸೊಹೈಲ್ ಅವರ ಬಳಿ ಒಂದು ನೀರಿನ ಬಾಟಲಿ ಕೇಳಿದ್ದಾನೆ ಎಂದು ತಿಳಿಸಿದ್ದಾರೆ. ಸೊಹೈಲ್ ನೀರು ತರಲು ಹಿಂದಿರುಗಿದ ಕ್ಷಣದಲ್ಲೇ ಲಾರ್ಸನ್ ಚಾಕು ಹೊರತೆಗೆದು ದಾಳಿ ನಡೆಸಿದ್ದಾನೆ ಎನ್ನಲಾಗಿದೆ.
15 ಬಾರಿ ಚಾಕು ಇರಿತ; ಗಂಭೀರ ಸ್ಥಿತಿ
ಲೂನಾ ನುನೆಸ್ ಆರಂಭಿಸಿರುವ ಗೋ ಫಂಡ್‌ಮಿ (GoFundMe) ನಿಧಿ ಸಂಗ್ರಹ ಅಭಿಯಾನದ ಪ್ರಕಾರ, ಸೊಹೈಲ್ ಅವರಿಗೆ 15 ಬಾರಿ ಚಾಕುವಿನಿಂದ ಇರಿಯಲಾಗಿದೆ. ಅವರಿಗೆ ಈಗಾಗಲೇ ಹಲವು ಶಸ್ತ್ರಚಿಕಿತ್ಸೆಗಳು ನಡೆದಿದ್ದು, ಅವರು ಇನ್ನೂ ಅತ್ಯಂತ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿ ಹಿಡಿದ ಸ್ಥಳೀಯರು
ಘಟನೆಯ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸುವ ಮುನ್ನವೇ ಅಲ್ಲಿದ್ದ ಹಲವಾರು ನಾಗರಿಕರು ಧೈರ್ಯದಿಂದ ಮುಂದೆ ಬಂದು ಲಾರ್ಸನ್‌ನನ್ನು ನೆಲಕ್ಕುರುಳಿಸಿ ಹಿಡಿದುಕೊಂಡು, ಪೊಲೀಸರು ಬರುವವರೆಗೆ ಆತನನ್ನು ತಪ್ಪಿಸಿಕೊಳ್ಳದಂತೆ ತಡೆದರು.
ತನಿಖಾಧಿಕಾರಿಗಳ ಪ್ರಕಾರ, ಲಾರ್ಸನ್‌ನ ಹಿಂಸಾತ್ಮಕ ಕೃತ್ಯಗಳು, ತೀವ್ರವಾದ ಸಿದ್ಧಾಂತಗಳು ಹಾಗೂ ಪೂರ್ವಯೋಜಿತ ಸಾಮೂಹಿಕ ಹತ್ಯೆಯ ಉದ್ದೇಶಗಳು ಸಾರ್ವಜನಿಕರಿಗೆ ದೊಡ್ಡ ಅಪಾಯವನ್ನುಂಟು ಮಾಡುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆರೋಪಿಯನ್ನು ಸಾರ್ವಜನಿಕರು ಹಿಡಿದಿಡುವಾಗ ಉಂಟಾದ ಗಾಯಗಳಿಗೆ ಚಿಕಿತ್ಸೆ ನೀಡಿದ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.
‘ಇಡೀ ಕುಟುಂಬವೇ ಸೊಹೈಲ್ ಅವರನ್ನೇ ಅವಲಂಬಿಸಿದೆ’
ಸೊಹೈಲ್ ಅವರ ಸ್ನೇಹಿತರು ಹಾಗೂ ಸಹೋದ್ಯೋಗಿಗಳು ಅವರನ್ನು ಅತ್ಯಂತ ಶ್ರಮಜೀವಿ ಹಾಗೂ ಕುಟುಂಬದ ಏಕೈಕ ಸಂಪಾದನೆ ಮಾಡುವ ವ್ಯಕ್ತಿ ಎಂದು ಹೇಳಿದ್ದಾರೆ. ಲೂನಾ ನುನೆಸ್ ಕೆಎಸ್‌ಎಲ್‌ಗೆ ನೀಡಿದ ಸಂದರ್ಶನದಲ್ಲಿ, “ಅವರಿಗೆ ಯಾವುದೇ ಆರೋಗ್ಯ ವಿಮೆ ಇಲ್ಲ. ಅವರ ಕುಟುಂಬದಲ್ಲಿ ದುಡಿಯುತ್ತಿರುವ ಏಕೈಕ ವ್ಯಕ್ತಿ ಅವರೇ. ಅವರಿಗೆ ಇಬ್ಬರು ಪುಟ್ಟ ಮಕ್ಕಳು ಮತ್ತು ಪತ್ನಿಯಿದ್ದಾರೆ. ಸದ್ಯ ಅವರ ಪತ್ನಿಯೂ ಕೆಲಸ ಮಾಡುತ್ತಿಲ್ಲ” ಎಂದು ತಿಳಿಸಿದ್ದಾರೆ.
‘ದ್ವೇಷಕ್ಕೆ ಯಾವುದೇ ಸ್ಥಾನವಿಲ್ಲ’
ಸೊಹೈಲ್ ಅವರ ವ್ಯವಸ್ಥಾಪಕ ಅದ್ನಾನ್ ಮೊಹಮ್ಮದ್ (Adnan Mohammed) ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ಇದು ನಿಜಕ್ಕೂ ಭಯಾನಕ ಘಟನೆ. ದ್ವೇಷದ ಅಪರಾಧಗಳಿಗೆ ಸಮಾಜದಲ್ಲಿ ಯಾವುದೇ ಸ್ಥಾನವಿಲ್ಲ” ಎಂದು ಅವರು ಫಾಕ್ಸ್ 13ಗೆ ತಿಳಿಸಿದ್ದಾರೆ.
“(ಸೊಹೈಲ್) ಅವರು ಯಾವಾಗಲೂ ನಗುತ್ತಾ, ಎಲ್ಲರೊಂದಿಗೆ ಬೆರೆತು ತುಂಬಾ ಶ್ರಮಪಟ್ಟು ಕೆಲಸ ಮಾಡುತ್ತಿದ್ದರು. ಅವರ ಸಾಮರ್ಥ್ಯವನ್ನು ನೋಡಿ ನಾನು ಅವರಿಗೆ ಮ್ಯಾನೇಜರ್ ಆಗಿ ಬಡ್ತಿ ನೀಡಿದ್ದೆ. ಒಬ್ಬ ವ್ಯಕ್ತಿಯನ್ನು ಕೊಲ್ಲುವುದು ಎಂದರೆ ಕೇವಲ ಒಬ್ಬನ ಜೀವ ತೆಗೆಯುವುದಲ್ಲ; ಇಡೀ ಕುಟುಂಬವನ್ನೇ ನಾಶ ಮಾಡಿದಂತಾಗುತ್ತದೆ” ಎಂದು ಭಾವುಕರಾಗಿ ಹೇಳಿದ್ದಾರೆ.
ಘಟನೆಯ ಭೀಕರತೆಯನ್ನು ವಿವರಿಸಿದ ಲೂನಾ ನುನೆಸ್, “ನನ್ನ ಕೈಗೆ ಸಿಕ್ಕಿದ್ದನ್ನೆಲ್ಲಾ — ಶೂಗಳು, ಕುರ್ಚಿ ಸೇರಿದಂತೆ ಎಲ್ಲವನ್ನೂ ಆರೋಪಿಯ ಕಡೆಗೆ ಎಸೆದೆ. ಆತ ಸೊಹೈಲ್‌ಗೆ ಅತ್ಯಂತ ಕ್ರೂರವಾಗಿ ಚಾಕು ಇರಿಯುತ್ತಿದ್ದ. ಅವರ ಜೀವ ಉಳಿಯುತ್ತದೆಯೋ ಇಲ್ಲವೋ ಎಂಬ ಭಯಗೊಂಡಿದ್ದೆ ಎಂದು ಹೇಳಿದ್ದಾರೆ.
ಅಲ್ಲದೆ, ನಂತರ ಮಾಲ್‌ನ ಇತರ ಉದ್ಯೋಗಿಗಳು ತನಗೆ ಹೇಳಿದ್ದೇನೆಂದರೆ, ದಾಳಿಗೆ ಮುನ್ನ ಲಾರ್ಸನ್ ಮಾಲ್‌ನಲ್ಲಿ ಹಲವರ ಬಳಿ ತೆರಳಿ ‘ನೀವು ಯಾವ ಧರ್ಮದವರು?’ ಎಂದು ಕೇಳುತ್ತಾ ಓಡಾಡುತ್ತಿದ್ದನೆಂದು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ