ನವದೆಹಲಿ: ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ಆರೋಗ್ಯ ಹಾಗೂ ವೈದ್ಯಕೀಯ ಸ್ಥಿತಿಯನ್ನು ಪ್ರತಿದಿನ ಸರ್ಕಾರಿ ವೈದ್ಯರು ಪರಿಶೀಲಿಸಬೇಕು ಮತ್ತು ಅವರ ಜೀವ ರಕ್ಷಿಸಲು ಅಗತ್ಯವಿರುವ ಎಲ್ಲ ವೈದ್ಯಕೀಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ದೆಹಲಿ ಹೈಕೋರ್ಟ್ ಗುರುವಾರ ಕೇಂದ್ರ ಹಾಗೂ ದೆಹಲಿ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ದೇವೇಂದ್ರಕುಮಾರ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಆದೇಶವನ್ನು ನೀಡಿದೆ.
ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ವಾಂಗ್ಚುಕ್ ಅವರ ಆರೋಗ್ಯವನ್ನು ಪ್ರತಿದಿನ ಸರ್ಕಾರಿ ವೈದ್ಯರು ಪರಿಶೀಲಿಸಲಿದ್ದು, ವೈದ್ಯರ ಅಭಿಪ್ರಾಯದ ಆಧಾರದ ಮೇಲೆ ಅವರ ಆರೋಗ್ಯ ಹದಗೆಟ್ಟರೆ ಅಗತ್ಯವಿರುವ ಎಲ್ಲ ವೈದ್ಯಕೀಯ ಚಿಕಿತ್ಸೆ ಹಾಗೂ ಮಧ್ಯಸ್ಥಿಕೆ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.
ಈ ಹಿನ್ನೆಲೆಯಲ್ಲಿ ನ್ಯಾಯಾಲಯ, “ಯಾವುದೇ ನಾಗರಿಕನ ಜೀವ ಅಮೂಲ್ಯವಾಗಿದೆ. ಆ ಜೀವವನ್ನು ಉಳಿಸಲು ಸರ್ಕಾರದ ಎಲ್ಲಾ ಅಧಿಕಾರಿಗಳು ಅಗತ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಬೇಕು. ಸಾಲಿಸಿಟರ್ ಜನರಲ್ ಅವರು ತೆಗೆದುಕೊಂಡಿರುವ ನಿಲುವನ್ನು ನಾವು ಶ್ಲಾಘಿಸುತ್ತೇವೆ. ಆದ್ದರಿಂದ ವಾಂಗ್ಚುಕ್ ಅವರ ವೈದ್ಯಕೀಯ ಹಾಗೂ ಕ್ಲಿನಿಕಲ್ ಆರೋಗ್ಯ ಸ್ಥಿತಿಯನ್ನು ಪ್ರತಿದಿನ ನಿಯಮಿತವಾಗಿ ಸರ್ಕಾರಿ ವೈದ್ಯರು ಪರಿಶೀಲಿಸುವಂತೆ ನಿರ್ದೇಶಿಸುತ್ತೇವೆ” ಎಂದು ಆದೇಶದಲ್ಲಿ ತಿಳಿಸಿದೆ.
ಜಂತರ್ ಮಂತರ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಂ ವಾಂಗ್ಚುಕ್ ಅವರ ಜೀವ ಉಳಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂದು ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ವಿಚಾರಣೆ ವೇಳೆ ನ್ಯಾಯಾಲಯವು ಈ ಆದೇಶ ಮಾಡಿದೆ.
ವಾಂಗ್ಚುಕ್ ಅವರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಜೂನ್ 28ರಿಂದ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ್ದಾರೆ. ಅವರು ಕಾಕ್ರೋಚ್ ಜನತಾ ಪಾರ್ಟಿ (Cockroach Janta Party – CJP) ಆಯೋಜಿಸಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಶಿಕ್ಷಣ ವ್ಯವಸ್ಥೆಯಲ್ಲಿನ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳ ವಿರುದ್ಧ ಧ್ವನಿ ಎತ್ತಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿ (CJP) ಮೂಲತಃ ಸಾಮಾಜಿಕ ಜಾಲತಾಣದ ವ್ಯಂಗ್ಯಾತ್ಮಕ ಆನ್ಲೈನ್ ಚಳವಳಿಯಾಗಿದೆ. ವಿಶೇಷವಾಗಿ ಯುವಜನರಲ್ಲಿ ಇದು ಹೆಚ್ಚು ಜನಪ್ರಿಯತೆ ಗಳಿಸಿದೆ. ಅಮೆರಿಕದ ಬೋಸ್ಟನ್ ನಿವಾಸಿ ದೀಪ್ಕೆ (Dipke) ಇದನ್ನು ಆರಂಭಿಸಿದ್ದಾರೆ. ನಿರುದ್ಯೋಗ, ಸಂಸ್ಥೆಗಳ ಹೊಣೆಗಾರಿಕೆ ಹಾಗೂ ಮಾಧ್ಯಮ ಸ್ವಾತಂತ್ರ್ಯದಂತಹ ವಿಷಯಗಳ ಕುರಿತು ರಾಜಕೀಯ ವ್ಯಂಗ್ಯದ ಮೂಲಕ ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಈ ಸಂಘಟನೆ ಜೂನ್ 20ರಿಂದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದೆ.
ಈ ಪ್ರಕರಣದಲ್ಲಿ ಅರ್ಜಿದಾರರಾಗಿರುವ ವಕೀಲ ರಾಕೇಶಕುಮಾರ ಸೈನಿ ಅವರು, ಸೋನಂ ವಾಂಗ್ಚುಕ್ ಅವರನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಬೇಕು. ಅಗತ್ಯವಿದ್ದರೆ ಬಲವಂತವಾಗಿ ಆಹಾರ ನೀಡುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಗಳಿಗೆ ನಿರ್ದೇಶನ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದ್ದರು.
ಅರ್ಜಿಯಲ್ಲಿ, ವಾಂಗ್ಚುಕ್ ಅವರ ಆರೋಗ್ಯ ವೇಗವಾಗಿ ಹದಗೆಟ್ಟಿದ್ದು, ಅವರು ಈಗಾಗಲೇ ಸುಮಾರು 8.5 ಕೆ.ಜಿ. ತೂಕ ಕಳೆದುಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇದೇ ರೀತಿ ಉಪವಾಸ ಮುಂದುವರಿದರೆ ಮುಂದಿನ ಎರಡು ದಿನಗಳೊಳಗೆ ಅವರ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಅರ್ಜಿಯಲ್ಲಿ ಸರ್ಕಾರವು ವಾಂಗ್ಚುಕ್ ಅವರನ್ನು “ಭಯೋತ್ಪಾದಕ, ದೇಶದ್ರೋಹಿ ಅಥವಾ ಅಪಾಯಕಾರಿ ಅಪರಾಧಿಯಂತೆ ನಡೆಸಿಕೊಳ್ಳುತ್ತಿದೆ” ಎಂದು ಆರೋಪಿಸಲಾಗಿದೆ. ಅವರ ಆರೋಗ್ಯದ ಬಗ್ಗೆ ಸರ್ಕಾರ ಯಾವುದೇ ಕಾಳಜಿ ತೋರಿಸುತ್ತಿಲ್ಲ ಎಂದು ದೂರಲಾಗಿದೆ.
“ಕನಿಷ್ಠ ಪಕ್ಷ ಸರ್ಕಾರವು ಅವರಿಗೆ ಸಮರ್ಪಕ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು. ಅಗತ್ಯವಿದ್ದರೆ ಬಲವಂತವಾಗಿಯಾದರೂ ಅವರ ಜೀವ ಉಳಿಸುವ ಕ್ರಮ ಕೈಗೊಳ್ಳಬೇಕು” ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
ಅರ್ಜಿಯಲ್ಲಿ, “ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ದ್ರವಾಹಾರದ ರೂಪದಲ್ಲಿ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶ, ವಿಟಮಿನ್ ಹಾಗೂ ಖನಿಜಾಂಶಗಳನ್ನು ಬಲವಂತವಾಗಿ ನೀಡುವುದು ಅತ್ಯಂತ ಸರಳ ಪರಿಹಾರವಾಗಿದೆ” ಎಂದು ಹೇಳಲಾಗಿದೆ.
ವಿಚಾರಣೆ ವೇಳೆ ಕೇಂದ್ರ ಮತ್ತು ದೆಹಲಿ ಸರ್ಕಾರಗಳ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ವಾಂಗ್ಚುಕ್ ಅವರ ಆರೋಗ್ಯವನ್ನು ಪ್ರತಿದಿನ ವೈದ್ಯರು ಪರಿಶೀಲಿಸುತ್ತಿದ್ದಾರೆ. ಅವರು ಸರ್ಕಾರಿ ವೈದ್ಯರಿಗೆ ಅವಕಾಶ ನೀಡಿದಾಗಲೆಲ್ಲಾ ಆರೋಗ್ಯ ತಪಾಸಣೆ ನಡೆಸಲಾಗಿದೆ. ಕೆಲವೊಮ್ಮೆ ಖಾಸಗಿ ವೈದ್ಯರೂ ಬಂದು ಅವರನ್ನು ಪರೀಕ್ಷಿಸುತ್ತಿದ್ದಾರೆ” ಎಂದು ನ್ಯಾಯಾಲಯಕ್ಕೆ ತಿಳಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ