ನವದೆಹಲಿ: ಬಹುನಿರೀಕ್ಷಿತ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೇಂದ್ರ ಸಂಘಟನೆಯ ಪುನರ್ರಚನೆಗೆ ಶೀಘ್ರದಲ್ಲೇ ಅಂತಿಮ ರೂಪ ಸಿಗುವ ಸಾಧ್ಯತೆಗಳು ದಟ್ಟವಾಗಿವೆ. ಈ ಸಂಬಂಧ ಬುಧವಾರ ತಡರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಮಹತ್ವದ ಸಭೆ ನಡೆಸಿದ್ದಾರೆ.
ಪ್ರಧಾನಿ ಮೋದಿ ಅವರು ಜುಲೈ 17ರಂದು ಪಂಜಾಬ್‌ಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಹಾಗೂ ಇತ್ತೀಚಿನ ವಿದೇಶ ಪ್ರವಾಸದಿಂದ ಹಿಂದಿರುಗಿದ ಕೆಲವೇ ದಿನಗಳಲ್ಲೇ ಈ ಸಭೆ ನಡೆದಿರುವುದು ಮಹತ್ವ ಪಡೆದುಕೊಂಡಿದೆ. ಇದಕ್ಕೂ ಒಂದು ದಿನ ಮುನ್ನ, ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಸಿದ್ಧತೆ ಮತ್ತು ಪಕ್ಷದ ಸಂಘಟನಾ ಚಟುವಟಿಕೆಗಳ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.
ಮೂಲಗಳ ಪ್ರಕಾರ, ಬಿಜೆಪಿ ಕೇಂದ್ರ ಸಂಘಟನೆಯ ಹೊಸ ಪದಾಧಿಕಾರಿಗಳ ಆಯ್ಕೆಗೆ ಅಂತಿಮ ರೂಪ ನೀಡುವ ಉದ್ದೇಶದಿಂದಲೇ ಈ ಉನ್ನತ ಮಟ್ಟದ ಸಭೆ ನಡೆದಿರಬಹುದು. ಹಲವು ಗಂಟೆಗಳ ಕಾಲ ನಡೆದ ಚರ್ಚೆಯ ಬಳಿಕ, ನಿತಿನ್ ನಬಿನ್ ನೇತೃತ್ವದ ಹೊಸ ಸಂಘಟನಾ ತಂಡವನ್ನು ಇದೇ ವಾರ ಘೋಷಿಸುವ ಸಾಧ್ಯತೆ ಇದೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ದಟ್ಟವಾಗಿದೆ.
ಕಳೆದ ಕೆಲವು ವಾರಗಳಿಂದ ಪಕ್ಷದ ಸಂಘಟನಾ ರಚನೆಯ ಪುನರ್‌ವ್ಯವಸ್ಥೆ ಹಾಗೂ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಹಲವು ಸುತ್ತಿನ ಸಮಾಲೋಚನೆಗಳು ನಡೆದಿದ್ದವು. ಆದರೆ ಪ್ರಧಾನಿ ಮೋದಿ ಅವರ ವಿದೇಶ ಪ್ರವಾಸದ ಹಿನ್ನೆಲೆಯಲ್ಲಿ ಅವರ ಜೊತೆ ನಡೆಯಬೇಕಿದ್ದ ಅಂತಿಮ ಹಂತದ ಸಮಾಲೋಚನೆ ಬಾಕಿ ಉಳಿದಿತ್ತು.
ಮೂಲಗಳ ಪ್ರಕಾರ, ಈ ಬಾರಿಯ ಸಂಘಟನಾ ಪುನರ್ರಚನೆಯಲ್ಲಿ ಅನುಭವಿ ನಾಯಕರ ಜೊತೆಗೆ ಹಲವು ಹೊಸ ಮುಖಗಳಿಗೂ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಪಕ್ಷದ ಕೇಂದ್ರ ಮಾಧ್ಯಮ ಘಟಕ ಸೇರಿದಂತೆ ವಿವಿಧ ಸಂಘಟನಾ ವಿಭಾಗಗಳಿಗೆ ಹೊಸ ಪದಾಧಿಕಾರಿಗಳನ್ನು ನೇಮಿಸುವ ನಿರೀಕ್ಷೆಯಿದೆ.
ಇದೇ ವೇಳೆ, ಸಂಘಟನಾ ಪುನರ್ರಚನೆಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲೂ ಮಹತ್ವದ ಬದಲಾವಣೆಗಳು ನಡೆಯುವ ಸಾಧ್ಯತೆಗಳಿವೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ. ವಿವಿಧ ರಾಜ್ಯಗಳಲ್ಲಿ ಪಕ್ಷದ ಸಂಘಟನಾ ಜವಾಬ್ದಾರಿ ವಹಿಸಿಕೊಂಡಿರುವ ಕಾರಣ ಕೆಲವು ರಾಜ್ಯ ಸಚಿವರ ಹುದ್ದೆಗಳು ಖಾಲಿಯಾಗಿದ್ದು, ಆ ಸ್ಥಾನಗಳಿಗೆ ಹೊಸ ನೇಮಕಾತಿಗಳು ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪಕ್ಷದ ಉನ್ನತ ನಾಯಕತ್ವವು ಮಹಿಳೆಯರು ಮತ್ತು ಯುವ ನಾಯಕರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಜೊತೆಗೆ, ವಿವಿಧ ಕ್ಷೇತ್ರಗಳ ತಜ್ಞರು ಹಾಗೂ ಸಂಘಟನಾ ಅನುಭವ ಹೊಂದಿರುವ ನಾಯಕರಿಗೂ ಅವಕಾಶ ಕಲ್ಪಿಸುವತ್ತ ವಿಶೇಷ ಗಮನ ಹರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಜುಲೈ 20ರಿಂದ ಆಗಸ್ಟ್ 13ರವರೆಗೆ ನಡೆಯಲಿರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನವೇ ಸಂಘಟನಾ ಪುನರ್ರಚನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಉದ್ದೇಶ ಪಕ್ಷದ ನಾಯಕತ್ವಕ್ಕಿದೆ. “2027ರಲ್ಲಿ ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ, ಪಕ್ಷದ ಕೇಂದ್ರ ನಾಯಕತ್ವವು ಎಲ್ಲ ನಿರ್ಧಾರಗಳನ್ನು ವ್ಯಾಪಕ ಸಮಾಲೋಚನೆಯ ಬಳಿಕ ಅತ್ಯಂತ ಎಚ್ಚರಿಕೆಯಿಂದ ಕೈಗೊಳ್ಳಲಿದೆ” ಎಂದು ಮೂಲಗಳು ತಿಳಿಸಿವೆ.


ನಿಮ್ಮ ಕಾಮೆಂಟ್ ಬರೆಯಿರಿ