ಹುಬ್ಬಳ್ಳಿ: ನಗರದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು, ಅತ್ಯಾಚಾರದಿಂದ ಜನಿಸಿದ ನವಜಾತ ಶಿಶುವನ್ನು ಬಾಲಕಿಯ ಪೋಷಕರು ಮತ್ತೊಂದು ಕುಟುಂಬಕ್ಕೆ ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ. ಇದರ ನಡುವೆಯೇ ಬಾಲಕಿ ಇದೀಗ ಮತ್ತೊಮ್ಮೆ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಅತ್ಯಾಚಾರದ ಆರೋಪಿ, ಬಾಲಕಿಯ ಪೋಷಕರು ಹಾಗೂ ಇಬ್ಬರು ಖಾಸಗಿ ವೈದ್ಯರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.
14 ವರ್ಷದ ಮತ್ತೊಬ್ಬ ಅಪ್ರಾಪ್ತ ಬಾಲಕಿ ಮಗುವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿರುವ ನಡುವೆಯೇ ಈ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕ (District Child Protection Unit) ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಪೊಲೀಸ್ ಮಾಹಿತಿಯ ಪ್ರಕಾರ, ಆರೋಪಿಯು ಅಪ್ರಾಪ್ತ ಬಾಲಕಿಗೆ ಹಲವು ಬಾರಿ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರ ಪರಿಣಾಮವಾಗಿ ಆಕೆ ಗರ್ಭಿಣಿಯಾಗಿದ್ದಳು. ಆದರೆ ಬಾಲಕಿಯ ಪೋಷಕರು ಈ ವಿಷಯವನ್ನು ಮುಚ್ಚಿಟ್ಟಿದ್ದು, ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡದೆ ತಮ್ಮ ಕಾನೂನುಬದ್ಧ ಜವಾಬ್ದಾರಿಯನ್ನು ನಿರ್ಲಕ್ಷಿಸಿರುವ ಆರೋಪವೂ ಅವರ ಮೇಲಿದೆ.
ಪ್ರಕರಣದ ಕುರಿತು ಮಾತನಾಡಿದ ಹುಬ್ಬಳ್ಳಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, “ನಾವು ನೋಟಿಸ್ ಜಾರಿ ಮಾಡಿದ್ದು, ಈ ಕುರಿತು ವಿಚಾರಣೆ ನಡೆಸುತ್ತಿದ್ದೇವೆ. ಜನಿಸಿದ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಆಕೆಯನ್ನು ಸಂಬಂಧಿಕರೊಬ್ಬರ ಬಳಿ ಚಿಕಿತ್ಸೆಗೆ ಇರಿಸಲಾಗಿದೆ ಎಂದು ಹೇಳಿದ್ದಾರೆ. ಈ ಮಾಹಿತಿಯನ್ನೂ ಪರಿಶೀಲಿಸಲಾಗುವುದು. ಪ್ರಕರಣದ ಹಲವು ಅಂಶಗಳು ಇನ್ನೂ ಸ್ಪಷ್ಟವಾಗಿಲ್ಲ. ಆದ್ದರಿಂದ ಸಮಗ್ರ ತನಿಖೆಯ ಅಗತ್ಯವಿದೆ” ಎಂದು ತಿಳಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಬಾಲಕಿ ಮಗುವಿಗೆ ಜನ್ಮ ನೀಡಿದ ಬಳಿಕ ಆ ನವಜಾತ ಶಿಶುವನ್ನು ಆಕೆಯ ಪೋಷಕರು ಮತ್ತೊಂದು ಕುಟುಂಬಕ್ಕೆ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಬಾಲಕಿ ಇದೀಗ ಮತ್ತೆ ಗರ್ಭಿಣಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಇಬ್ಬರು ಖಾಸಗಿ ವೈದ್ಯರ ಮೇಲೂ ಗಂಭೀರ ಆರೋಪಗಳು ಕೇಳಿಬಂದಿವೆ. ಅಪ್ರಾಪ್ತೆಗೆ ಚಿಕಿತ್ಸೆ ನೀಡುವ ವೇಳೆ ಕಾನೂನಿನಲ್ಲಿ ಕಡ್ಡಾಯವಾಗಿರುವ ವಿಧಾನಗಳನ್ನು ಪಾಲಿಸದೇ, ಅಪ್ರಾಪ್ತ ಬಾಲಕಿಗೆ ಸಂಬಂಧಿಸಿದ ಪ್ರಕರಣದ ಬಗ್ಗೆ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡದೆ ಚಿಕಿತ್ಸೆ ನೀಡಿರುವ ಆರೋಪ ಅವರ ಮೇಲಿದೆ.
ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಪ್ರಕಾಶ ಕೊಡ್ಲಿವಾಡ ಅವರು, “ಬಾಲಕಿ ಅಪ್ರಾಪ್ತಳಾಗಿರುವುದು ಗೊತ್ತಿದ್ದರೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಪ್ರಾಪ್ತೆಗೆ ಚಿಕಿತ್ಸೆ ನೀಡಿದರೂ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡದ ಕಾರಣ ಆಸ್ಪತ್ರೆಯ ವೈದ್ಯರ ವಿರುದ್ಧವೂ ಪ್ರಕರಣ ದಾಖಲಿಸಿದ್ದೇವೆ. ಬಾಲಕಿಯ ಹೇಳಿಕೆಯ ಪ್ರಕಾರ, ಮಗುವನ್ನು ಬೇರೆಯವರಿಗೆ ನೀಡಲಾಗಿದೆ. ಮಗು ಮಾರಾಟವಾಗಿರುವ ಶಂಕೆಯಿದ್ದು, ಪೊಲೀಸ್ ತನಿಖೆಯಲ್ಲಿ ಸತ್ಯಾಂಶ ಹೊರಬರಲಿದೆ,” ಎಂದು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ (BNS), ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಕಾಯ್ದೆ (POCSO) ಹಾಗೂ ಇತರೆ ಅನ್ವಯವಾಗುವ ಕಾನೂನುಗಳ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಸಂಪೂರ್ಣ ಕಾಲಕ್ರಮ, ಆರೋಪಿಗಳ ಪಾತ್ರ ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಪತ್ತೆಹಚ್ಚುವ ಉದ್ದೇಶದಿಂದ ಪೊಲೀಸರು ವ್ಯಾಪಕ ತನಿಖೆ ಕೈಗೊಂಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ