ಮುಂಬೈ: ಶಿವಸೇನಾ (ಉದ್ಧವ್ ಠಾಕ್ರೆ) ಪಕ್ಷಕ್ಕೆ ಮತ್ತೊಂದು ದೊಡ್ಡ ರಾಜಕೀಯ ಹಿನ್ನಡೆಯಾಗಿದ್ದು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಶಿವಸೇನಾ (ಯುಬಿಟಿ)ಯಿಂದ ಬಂಡಾಯವೆದ್ದು ಹೊರಬಂದ ಆರು ಲೋಕಸಭಾ ಸದಸ್ಯರು ಏಕನಾಥ ಶಿಂಧೆ ನೇತೃತ್ವದ ಶಿವಸೇನೆಯಲ್ಲಿ ವಿಲೀನಗೊಳ್ಳಲು ಅನುಮೋದನೆ ನೀಡಿದ್ದಾರೆ.
ಈ ನಿರ್ಧಾರದಿಂದ ಬಂಡಾಯ ಸಂಸದರ ಪಕ್ಷಾಂತರವು ಸಂವಿಧಾನದ ಪಕ್ಷಾಂತರ ನಿಷೇಧ ಕಾಯ್ದೆ (Anti-Defection Law) ಅಡಿಯಲ್ಲಿ ಕಾನೂನುಬದ್ಧ ಮಾನ್ಯತೆ ಪಡೆದಿದ್ದು, ಜುಲೈ 20ರಿಂದ ಆರಂಭವಾಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೂ ಮುನ್ನ ಶಿಂಧೆ ಬಣದ ಬಲ ಮತ್ತಷ್ಟು ಹೆಚ್ಚಿದೆ.
ಕಳೆದ ಜೂನ್ 22ರಂದು ಶಿವಸೇನಾ (ಯುಬಿಟಿ)ಯ ಆರು ಸಂಸದರು ಉದ್ಧವ್ ಠಾಕ್ರೆ ಅವರ ಪಕ್ಷವನ್ನು ತೊರೆದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಿದ್ದರು. ಇದೀಗ ಸ್ಪೀಕರ್ ನೀಡಿರುವ ಅಧಿಕೃತ ಮಾನ್ಯತೆಯಿಂದ ಲೋಕಸಭೆಯಲ್ಲಿ ಶಿಂಧೆ ಬಣದ ಸದಸ್ಯರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಶಿಂಧೆ ಬಣ ಸೇರಿರುವ ಸಂಸದರು:
ಸಂಜಯ ದೀನಾ ಪಾಟೀಲ – ಮುಂಬೈ ಉತ್ತರ-ಪೂರ್ವ, ಓಂಪ್ರಕಾಶ್ ರಾಜೇ ನಿಂಬಾಳ್ಕರ – ಧಾರಾಶಿವ್, ಸಂಜಯ ದೇಶಮುಖ್ – ಯವತ್ಮಾಳ್-ವಾಶಿಂ, ಸಂಜಯ ಜಾಧವ್ – ಪರ್ಭಾನಿ, ಭಾವುಸಾಹೇಬ್ ವಾಕ್ಚೌರೆ – ಶಿರ್ಡಿ, ನಾಗೇಶ ಪಾಟೀಲ ಅಷ್ಟೀಕರ್ – ಹಿಂಗೋಲಿ ಅವರು ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಸೇರಿದ್ದಾರೆ.
ಟಿಎಂಸಿ ಬಂಡಾಯ ಸಂಸದರಿಗೂ ಪ್ರತ್ಯೇಕ ಮಾನ್ಯತೆ
ಇದರ ಜೊತೆಗೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ತೊರೆದು ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (NCPI) ರಚಿಸಿರುವ 20 ಸಂಸದರಿಗೆ ಲೋಕಸಭೆಯಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆಗೆ ಸ್ಪೀಕರ್ ಅನುಮೋದನೆ ನೀಡಿದ್ದಾರೆ. ಇದರಿಂದ ಆ ಗುಂಪಿಗೂ ಸದನದಲ್ಲಿ ಪ್ರತ್ಯೇಕ ಅಸ್ತಿತ್ವಕ್ಕೆ ಅಧಿಕೃತ ಮಾನ್ಯತೆ ದೊರೆತಿದೆ.
ಠಾಕ್ರೆ-ಶಿಂಧೆ ಸಂಘರ್ಷಕ್ಕೆ ಹೊಸ ತಿರುವು
2022ರಲ್ಲಿ ಶಿವಸೇನಾ ವಿಭಜನೆಯಾದ ಬಳಿಕ ಉದ್ಧವ್ ಠಾಕ್ರೆ ಮತ್ತು ಏಕನಾಥ ಶಿಂಧೆ ಬಣಗಳ ನಡುವೆ ನಾಯಕತ್ವ, ಪಕ್ಷದ ಸಂಘಟನೆ, ಚುನಾವಣಾ ಚಿಹ್ನೆ ಹಾಗೂ ಅಧಿಕಾರದ ವಿಚಾರವಾಗಿ ರಾಜಕೀಯ ಮತ್ತು ಕಾನೂನು ಹೋರಾಟ ಮುಂದುವರಿದಿದೆ. ಇದೀಗ ಆರು ಸಂಸದರ ವಿಲೀನಕ್ಕೆ ಸ್ಪೀಕರ್ ನೀಡಿರುವ ಅನುಮೋದನೆ ಶಿಂಧೆ ಬಣಕ್ಕೆ ಮತ್ತಷ್ಟು ಬಲ ತುಂಬಿದ್ದು, ಉದ್ಧವ್ ಠಾಕ್ರೆ ಬಣಕ್ಕೆ ಮತ್ತೊಂದು ದೊಡ್ಡ ರಾಜಕೀಯ ಹಿನ್ನಡೆಯಾಗಿ ಪರಿಣಮಿಸಿದೆ.
ಜುಲೈ 20ರಿಂದ ಆರಂಭವಾಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೂ ಮುನ್ನ ಈ ಬೆಳವಣಿಗೆ ರಾಷ್ಟ್ರೀಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ಎಂದು ಪರಿಗಣಿಸಲಾಗಿದೆ


ನಿಮ್ಮ ಕಾಮೆಂಟ್ ಬರೆಯಿರಿ