ವಿಡಿಯೊ | ಹಾಡಹಗಲೇ ಶಸ್ತ್ರಸಜ್ಜಿತರಿಂದ ಚಿನ್ನಾಭರಣ ಅಂಗಡಿ ದರೋಡೆ ; ಚಿನ್ನ-ನಗದು ಲೂಟಿ, ಹಲವು ಸುತ್ತು ಗುಂಡು ಹಾರಿಸಿ ಪರಾರಿ…!

ಪಾಲ್ಘರ್ : ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ದಹಾನು ಪಟ್ಟಣದ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿರುವ ಪ್ರಮುಖ ಆಭರಣ ಅಂಗಡಿಯೊಂದಕ್ಕೆ ಮಾಸ್ಕ್‌ ಧರಿಸಿದ್ದಮೂವರು ಶಸ್ತ್ರಸಜ್ಜಿತ ದರೋಡೆಕೋರರು ಸೋಮವಾರ ಮಧ್ಯಾಹ್ನ ನುಗ್ಗಿ ಚಿನ್ನಾಭರಣ ಹಾಗೂ ನಗದು ದೋಚಿ, ಹಲವು ಸುತ್ತು ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದರೋಡೆ ದೃಶ್ಯಗಳು ಆಭರಣ ಅಂಗಡಿಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಹಾನುವಿನ ಹೆಚ್ಚು ಜನಸಂಚಾರವಿರುವ ಇರಾನಿ ರಸ್ತೆ ಪ್ರದೇಶದಲ್ಲಿರುವ ‘ಲಕ್ಷ್ಮೀ ಜುವೆಲ್ಲರ್ಸ್’ ಅಂಗಡಿಯಲ್ಲಿ ಸಂಜೆ ಸುಮಾರು 4:30ರ ವೇಳೆಗೆ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆ ಹಾಗೂ ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮೂವರು ಅಪರಿಚಿತ ಮಾಸ್ಕ್‌ ಧರಿಸಿದ್ದ ಆರೋಪಿಗಳು ಬೈಕ್‌ನಲ್ಲಿ ಅಂಗಡಿಗೆ ಬಂದಿದ್ದರು. ಅವರ ಬಳಿ ಬಂದೂಕುಗಳು ಹಾಗೂ ಹರಿತವಾದ ಆಯುಧಗಳಿದ್ದವು.
ದರೋಡೆಕೋರರು ಜನರಿಂದ ಕಿಕ್ಕಿರಿದಿದ್ದ ಆಭರಣ ಮಳಿಗೆಗೆ ನುಗ್ಗಿ, ಸಿಬ್ಬಂದಿ ಹಾಗೂ ಗ್ರಾಹಕರಿಗೆ ಬಂದೂಕು ತೋರಿಸಿ ಬೆದರಿಸಿದ್ದಾರೆ. ಬಳಿಕ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳುವಾಗಿರುವ ಚಿನ್ನಾಭರಣ ಹಾಗೂ ನಗದು ಮೊತ್ತದ ನಿಖರ ಮೌಲ್ಯ ಇನ್ನೂ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.
ಸುಲಭವಾಗಿ ಪರಾರಿಯಾಗಲು ಹಾಗೂ ಜನನಿಬಿಡ ಮಾರುಕಟ್ಟೆಯಲ್ಲಿದ್ದ ಸಾರ್ವಜನಿಕರು ತಮ್ಮ ದಾರಿಗೆ ಅಡ್ಡಬರದಂತೆ ತಡೆಯುವ ಉದ್ದೇಶದಿಂದ ಆರೋಪಿಗಳು ಹಲವು ಸುತ್ತು ಗುಂಡು ಹಾರಿಸಿ, ಬಳಿಕ ಬೈಕ್‌ನಲ್ಲಿ  ಸ್ಥಳದಿಂದ ಪರಾರಿಯಾಗಿದ್ದಾರೆ.
https://x.com/jaijagannath081/status/2079229271546249553
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ದಹಾನು ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಪರಾರಿಯಾಗುತ್ತಿದ್ದ ದರೋಡೆಕೋರರನ್ನು ಪೊಲೀಸರು ಬೆನ್ನಟ್ಟಿದರೂ, ಆರೋಪಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ತನಿಖಾಧಿಕಾರಿಗಳು ಆಭರಣ ಅಂಗಡಿ ಹಾಗೂ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಗುರುತು ಪತ್ತೆ ಹಾಗೂ ಬಂಧನಕ್ಕಾಗಿ ವಿಧಿವಿಜ್ಞಾನ (ಫೊರೆನ್ಸಿಕ್) ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಹಾಡಹಗಲೇ ನಡೆದ ಈ ದರೋಡೆ ಹಾಗೂ ಗುಂಡಿನ ದಾಳಿಯಿಂದ ನಿವಾಸಿಗಳು ಮತ್ತು ವ್ಯಾಪಾರಸ್ಥರಲ್ಲಿ ಆತಂಕ ನಿರ್ಮಾಣವಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement