ನವದೆಹಲಿ: ಅತ್ಯಂತ ನಾಟಕೀಯ ಘಟನೆಗಳಿಗೆ ದೇಶದ ರಾಜಧಾನಿ ಮಂಗಳವಾರ ಸಾಕ್ಷಿಯಾಯಿತು. ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವಿದ್ಯಾರ್ಥಿಗಳ ಮೇಲಿನ “ದೌರ್ಜನ್ಯ”ವನ್ನು ಖಂಡಿಸಿ, ಲೋಕಸಭೆ ವಿಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸಕ್ಕೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಪೊಲೀಸರು ರಾಹುಲ್ ಗಾಂಧಿ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ವಶಕ್ಕೆ ಪಡೆದಿದ್ದಾರೆ.
ಸೋಮವಾರ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಸತ್ತಿಗೆ ನಡೆಸಿದ್ದ ಮೆರವಣಿಗೆಯ ನಂತರ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಿಸಲು ಕಾಂಗ್ರೆಸ್ ಮುಂದಾಯಿತು. ಮಂಗಳವಾರ ಮಧ್ಯಾಹ್ನ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸವಾದ 10, ರಾಜಾಜಿ ಮಾರ್ಗದಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಒಗ್ಗೂಡಿದರು. ಅಲ್ಲಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸಕ್ಕೆ ಪಾದಯಾತ್ರೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಪ್ರಧಾನಿ ಕಾರ್ಯಾಲಯದ (PMO) ರಾಜ್ಯ ಸಚಿವ ಜಿತೇಂದ್ರ ಸಿಂಗ್ ಭೇಟಿ ನೀಡಿ ರಾಹುಲ್ ಗಾಂಧಿ ಜೊತೆ ಸುದೀರ್ಘ ಚರ್ಚೆ ನಡೆಸಿದರು. ಆದರೆ, ಕೆಲವು ಗಂಟೆಗಳ ನಂತರ ಪೊಲೀಸರು ಪ್ರತಿಭಟನೆಯನ್ನು ಚದುರಿಸಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವರನ್ನು ವಶಕ್ಕೆ ಪಡೆದರು.
ರಸ್ತೆಯಲ್ಲೇ ಕುಳಿತ ರಾಹುಲ್
ಪ್ರತಿಭಟನೆ ವೇಳೆ ರಾಹುಲ್ ಗಾಂಧಿ ರಸ್ತೆಯಲ್ಲೇ ಕುಳಿತು ಸ್ಥಳ ಬಿಡಲು ನಿರಾಕರಿಸಿದರು. ನಂತರ ಪೊಲೀಸರು ಅವರನ್ನು ಬಲವಂತವಾಗಿ ಎತ್ತುಕೊಂಡು ಹೋದರು. ಈ ಸಂದರ್ಭದಲ್ಲಿ ರಾಹುಲ್ ಅವರ ಮೂಗಿನಿಂದ ರಕ್ತ ಬರುತ್ತಿರುವುದು ಕಂಡುಬಂದಿದೆ.
ರಸ್ತೆಯಲ್ಲಿ ಮಲಗಿದ್ದ ಸ್ಥಿತಿಯಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ಭಾರತದಲ್ಲಿ ಪ್ರಜಾಪ್ರಭುತ್ವ ಎನ್ನುವುದು ಈಗ ಇಲ್ಲೇ ಜೀವಂತವಾಗಿ ನಡೆಯುತ್ತಿದೆ” ಎಂದರು.
ಸಂಜೆ ಪ್ರತಿಭಟನಾಕಾರರನ್ನು ಚದುರಿಸುವ ಮೊದಲು, ರಾಹುಲ್ ಗಾಂಧಿ ಇಡೀ ರಾತ್ರಿ ಧರಣಿ ನಡೆಸಲು ಯೋಜಿಸಿದ್ದರು ಮತ್ತು ಪ್ರಧಾನಿ ನಿವಾಸದ ಹೊರಗೆ ಪ್ರತಿಭಟನೆಗೆ ಸೇರಿಕೊಳ್ಳುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದರು.
ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿದ್ದ ಅವರು, “ವಿದ್ಯಾರ್ಥಿಗಳ ಮೇಲಿನ ದಾಳಿಯು ಪ್ರತಿಯೊಂದು ಭಾರತೀಯ ಕುಟುಂಬದ ಮೇಲಿನ ದಾಳಿಯಾಗಿದೆ. ಪ್ರಧಾನಿ ಮೋದಿ ಅವರು ಯಾವುದೇ ಉತ್ತರ ನೀಡದೆ ತಪ್ಪಿಸಿಕೊಳ್ಳಬಹುದು ಎಂದು ಭಾವಿಸಿದ್ದಾರೆ. ಆದರೆ ಈ ಬಾರಿ ಅದು ಸಾಧ್ಯವಿಲ್ಲ. ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು ಎಂದು ಬಯಸುವ ಪ್ರತಿಯೊಬ್ಬ ದೇಶಪ್ರೇಮಿ ಭಾರತೀಯನೂ ಪ್ರಧಾನಿ ನಿವಾಸದ ಎದುರು ನಡೆಯುತ್ತಿರುವ ಧರಣಿಯಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿಸುತ್ತೇನೆ “ಎಂದು ಹೇಳಿದ್ದಾರೆ.
ಸಚಿವ ಜಿತೇಂದ್ರ ಸಿಂಗ್ ಮಾತುಕತೆ ವಿಫಲ
ಪ್ರಧಾನಿ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಮತ್ತು ರಾಹುಲ್ ಗಾಂಧಿ ನಡುವಿನ ಮಾತುಕತೆ ವಿಫಲವಾಯಿತು ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
“ನಮ್ಮ ಬೇಡಿಕೆಗಳು ಈಡೇರದ ಕಾರಣ ಪ್ರತಿಭಟನೆ ಹಿಂಪಡೆಯಲು ನಾವು ಒಪ್ಪಲಿಲ್ಲ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಮತ್ತು ಸಂಸತ್ತಿನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಚರ್ಚೆ ನಡೆಯಬೇಕು ಎಂಬುದು ನಮ್ಮ ಆಗ್ರಹ. ಮತ್ತಷ್ಟು ಸಂಸದರು, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರು ಈ ಧರಣಿಗೆ ಸೇರಲಿದ್ದಾರೆ ಎಂದು ಕಾಂಗ್ರೆಸ್ ಸಂಸದ ನಾಸಿರ್ ಹುಸೇನ್ ಹೇಳಿದರು.
ಸಚಿವ ಜಿತೇಂದ್ರ ಸಿಂಗ್ ಆರೋಪ
ರಾಹುಲ್ ಗಾಂಧಿ ತಮ್ಮ ಮಾತು ಬದಲಾಯಿಸಿದ್ದಾರೆ ಎಂದು ಸಚಿವ ಜಿತೇಂದ್ರ ಸಿಂಗ್ ‘X’ ನಲ್ಲಿ ಹೇಳಿದ್ದಾರೆ. “ನೀಟ್ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಸರ್ಕಾರ ಒಪ್ಪಿದರೆ ಪ್ರತಿಭಟನೆ ಹಿಂಪಡೆಯುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದರು. ಆದರೆ ನಂತರ, ‘ಈಗ ನನಗೆ ಎರಡು ಬೇಡಿಕೆಗಳಿವೆ: ಸಂಸತ್ತಿನಲ್ಲಿ ಚರ್ಚೆ ಮತ್ತು ಶಿಕ್ಷಣ ಸಚಿವರ ರಾಜೀನಾಮೆ’ ಎಂದು ತಮ್ಮ ನಿಲುವು ಬದಲಾಯಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಸಚಿವರ ಈ ಹೇಳಿಕೆ ಹೊರಬಿದ್ದ ಬೆನ್ನಲ್ಲೇ, ಸಂಜೆ ಸುಮಾರು 6:40ಕ್ಕೆ ಪೊಲೀಸರು ಪ್ರತಿಭಟನಾಕಾರರನ್ನು ತೆರವುಗೊಳಿಸಲು ಪ್ರಾರಂಭಿಸಿದರು.
ಪೊಲೀಸ್ ಕಾರ್ಯಾಚರಣೆ
ಸೋಮವಾರ ಸಂಸತ್ತಿಗೆ ನಡೆಸಿದ್ದ ಮೆರವಣಿಗೆಯಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಮತ್ತು ರ‍್ಯಾಪಿಡ್ ಆಕ್ಷನ್ ಫೋರ್ಸ್ (RAF) ಲಾಠಿಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗಿಸಿದವು, ಅನೇಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಆರೋಪಿಸಿತ್ತು.
ಮತ್ತೊಂದೆಡೆ ದೆಹಲಿ ಪೊಲೀಸರು, ಪ್ರತಿಭಟನಾಕಾರರು ಹಿಂಸಾತ್ಮಕವಾಗಿ ವರ್ತಿಸಿ, ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ, ವಾಹನಗಳನ್ನು ಜಖಂಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿಂಸಾಚಾರದಲ್ಲಿ ಹಿರಿಯ ಅಧಿಕಾರಿಗಳು ಸೇರಿದಂತೆ 118 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಮತ್ತು 70 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ