ವಿಡಿಯೊ | ಕಾರವಾರದಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಸ್ವದೇಶಿ ನಿರ್ಮಿತ ಯುದ್ಧ ನೌಕೆ ಮಾಲ್ವನ್

ಕಾರವಾರ: ಭಾರತೀಯ ನೌಕಾಪಡೆಯ ಸಮುದ್ರ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ಜಲಾಂತರ್ಗಾಮಿ ವಿರೋಧಿ ಸ್ವದೇಶಿ ನಿರ್ಮಿತ ಯುದ್ಧನೌಕೆ ಐಎನ್‌ಎಸ್‌ ಮಾಲ್ವನ್ ಅನ್ನು ಕಾರವಾರದಲ್ಲಿರುವ ಐಎನ್‌ಎಸ್‌ ಕದಂಬ ನೌಕಾನೆಲೆಯಲ್ಲಿ ಅಧಿಕೃತವಾಗಿ ಸೇವೆಗೆ ಸೇರ್ಪಡೆಗೊಳಿಸಲಾಗಿದೆ.
ಭಾರತದ ಸ್ವದೇಶಿ ಹಡಗು ನಿರ್ಮಾಣ ಯೋಜನೆಯಡಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿರುವ ಐಎನ್‌ಎಸ್‌ ಮಾಲ್ವನ್, ಕರಾವಳಿ ಹಾಗೂ ಆಳ ಸಮುದ್ರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಶತ್ರು ಜಲಾಂತರ್ಗಾಮಿಗಳನ್ನು ಪತ್ತೆಹಚ್ಚುವುದು, ಅವುಗಳನ್ನು ಹಿಂಬಾಲಿಸಿ ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಹೊಂದಿದೆ.
ಸುಮಾರು 80 ಮೀಟರ್ ಉದ್ದ ಹಾಗೂ 1,100 ಟನ್‌ಗಳಷ್ಟು ಸ್ಥಳಾಂತರ ಸಾಮರ್ಥ್ಯ (ಡಿಸ್‌ಪ್ಲೇಸ್‌ಮೆಂಟ್) ಹೊಂದಿರುವ ಈ ಯುದ್ಧನೌಕೆ, ಭಾರತೀಯ ನೌಕಾಪಡೆಯ ಅತ್ಯಾಧುನಿಕ ಯುದ್ಧನೌಕೆಗಳಲ್ಲಿ ಒಂದಾಗಿದೆ. ಐಎನ್‌ಎಸ್‌ ಮಾಲ್ವನ್‌ನಲ್ಲಿ ಜಲಾಂತರ್ಗಾಮಿ ವಿರೋಧಿ ರಾಕೆಟ್‌ಗಳು, ಸುಧಾರಿತ ಸೋನಾರ್ ವ್ಯವಸ್ಥೆಗಳು ಮತ್ತು ಆಧುನಿಕ ರಾಡಾರ್ ತಂತ್ರಜ್ಞಾನ ಅಳವಡಿಸಲಾಗಿದೆ. ಇದರಿಂದ ನೀರಿನಡಿಯ ನಿಗಾವಹಿಸುವಿಕೆ ಹಾಗೂ ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗಳನ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗಲಿದೆ. ಈ ನೌಕೆಯ ಸೇರ್ಪಡೆಯಿಂದ ಭಾರತದ ಕರಾವಳಿ ರಕ್ಷಣೆ ಮತ್ತು ಸಮುದ್ರ ಭದ್ರತಾ ಕಣ್ಗಾವಲು ಸಾಮರ್ಥ್ಯ ಮತ್ತಷ್ಟು ವೃದ್ಧಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರಮುಖ ಸುದ್ದಿ :-   ಮೈಸೂರು : ಪತ್ನಿ ಇಬ್ಬರು ಮಕ್ಕಳನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪತಿ

ಈ ಯುದ್ಧನೌಕೆಗೆ ಮಹಾರಾಷ್ಟ್ರದ ಐತಿಹಾಸಿಕ ಕರಾವಳಿ ಪಟ್ಟಣ ಮಾಲ್ವನ್ ಹೆಸರಿಡಲಾಗಿದೆ. ಭಾರತದ ಪಶ್ಚಿಮ ಕರಾವಳಿಯ ರಕ್ಷಣೆ ಹಾಗೂ ಸಮುದ್ರ ವ್ಯಾಪಾರದ ನಿಯಂತ್ರಣಕ್ಕಾಗಿ ಛತ್ರಪತಿ ಶಿವಾಜಿ ಮಹಾರಾಜರು ನಿರ್ಮಿಸಿದ್ದ ಪ್ರಸಿದ್ಧ ಸಿಂಧುದುರ್ಗ ಕೋಟೆ ಈ ಪ್ರದೇಶದ ಹೆಗ್ಗುರುತಾಗಿದೆ. ಈ ಐತಿಹಾಸಿಕ ಪರಂಪರೆಯನ್ನು ಪ್ರತಿಬಿಂಬಿಸುವಂತೆ ನೌಕೆಯ ಚಿಹ್ನೆಯಲ್ಲಿ (ಕ್ರೆಸ್ಟ್) ಶಿವಾಜಿ ಮಹಾರಾಜರೊಂದಿಗೆ ಸಂಬಂಧ ಹೊಂದಿರುವ ಪ್ರಸಿದ್ಧ ‘ವಾಗ್ ನಖ್’ (ಹುಲಿಯ ಉಗುರು) ಆಯುಧದ ರೂಪವನ್ನು ಅಳವಡಿಸಲಾಗಿದೆ.
ನೌಕೆಯ ಸೇವಾ ಸೇರ್ಪಡೆ ಸಮಾರಂಭದಲ್ಲಿ ವಾಯುಪಡೆಯ ಮುಖ್ಯಸ್ಥ ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್, ರಿಯರ್ ಅಡ್ಮಿರಲ್ ಎಫ್‌ಒಕೆ ವಿಕ್ರಮ್ ಮೆನನ್, ಐಎನ್‌ಎಸ್‌ ಮಾಲ್ವನ್‌ನ ಕಮಾಂಡಿಂಗ್ ಅಧಿಕಾರಿ ಕಮಾಂಡರ್ ಪ್ರವೀಣಕುಮಾರ ತಿವಾರಿ ಹಾಗೂ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜೋಶ್ ವಿಜೆ ಸೇರಿದಂತೆ ಹಲವು ಹಿರಿಯ ರಕ್ಷಣಾ ಮತ್ತು ನೌಕಾಪಡೆ ಅಧಿಕಾರಿಗಳು ಉಪಸ್ಥಿತರಿದ್ದರು.
ಐಎನ್‌ಎಸ್‌ ಮಾಲ್ವನ್‌ನ ಸೇರ್ಪಡೆ ಭಾರತದ ರಕ್ಷಣಾ ಸ್ವಾವಲಂಬನೆಯತ್ತದ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದ್ದು, ಹಿಂದೂ ಮಹಾಸಾಗರ ಪ್ರದೇಶದಲ್ಲಿ ದೇಶದ ಸಮುದ್ರ ಹಿತಾಸಕ್ತಿಗಳನ್ನು ಕಾಪಾಡುವ ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸಿದೆ.

ಪ್ರಮುಖ ಸುದ್ದಿ :-   ವಿಡಿಯೊ | ನೀಟ್ ಜಟಾಪಟಿ : ಬಿಜೆಪಿಯಿಂದ ಕೆಪಿಸಿಸಿ ಕಚೇರಿ ಮುತ್ತಿಗೆ ಯತ್ನ; ಬಿಜೆಪಿ ಶಾಸಕ ಬಿಪಿ ಹರೀಶ ಮೇಲೆ ಮೊಟ್ಟೆ ಎಸೆತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement