ತೆಲಂಗಾಣ ಎಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ: ಅಂದಾಜು ₹150 ಕೋಟಿ ಮೌಲ್ಯದ ಆಸ್ತಿ ಪತ್ತೆ

ಹೈದರಾಬಾದ್ : ತೆಲಂಗಾಣದಲ್ಲಿ ಆದಾಯಕ್ಕಿಂತ ಅಧಿಕ ಆಸ್ತಿ (Disproportionate Assets–DA) ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬುಧವಾರ ನಡೆಸಿದ ದಾಳಿಯಲ್ಲಿ ಸರ್ಕಾರಿ ಎಂಜಿನಿಯರ್ ಒಬ್ಬರ ಬಳಿ ಅಂದಾಜು ₹100ರಿಂದ ₹150 ಕೋಟಿ ಮೌಲ್ಯದ ಆಸ್ತಿಪಾಸ್ತಿಗಳು ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪತ್ತೆಯಾದ ಆಸ್ತಿಗಳಲ್ಲಿ ವಸತಿ ಫ್ಲ್ಯಾಟ್‌ಗಳು, ವಾಣಿಜ್ಯ ಕಟ್ಟಡಗಳು, ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್, ಚಿನ್ನಾಭರಣ, ಬ್ಯಾಂಕ್ ಠೇವಣಿಗಳು, ವಾಹನಗಳು ಹಾಗೂ ಇತರೆ ಬೆಲೆಬಾಳುವ ವಸ್ತುಗಳು ಸೇರಿವೆ.
ಎಸಿಬಿ ಅಧಿಕಾರಿಗಳು ತೆಲಂಗಾಣ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ (REDCO) ಖೈರತಾಬಾದ್, ಹೈದರಾಬಾದ್ ವಿಭಾಗದ ವಿಭಾಗೀಯ ಎಂಜಿನಿಯರ್ ಮುತ್ಯಂ ವೆಂಕಟ ರಮಣ ವಿರುದ್ಧ ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಪ್ರಕರಣ ದಾಖಲಿಸಿ, ಅವರ ನಿವಾಸ, ಕಚೇರಿ ಹಾಗೂ ಸಂಬಂಧಿಕರು, ಆಪ್ತರು ಮತ್ತು ಆರೋಪಿತ ಬೇನಾಮಿ ವ್ಯಕ್ತಿಗಳಿಗೆ ಸೇರಿದ ಒಟ್ಟು ಏಳು ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು.

ಶೋಧದ ವೇಳೆ ಅಧಿಕಾರಿಯ ಕಾನೂನುಬದ್ಧ ಆದಾಯದ ಮೂಲಗಳನ್ನು ಮೀರಿದ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವುದು ಕಂಡುಬಂದಿದೆ ಎಂದು ಎಸಿಬಿ ತಿಳಿಸಿದೆ. ಸೇವಾ ಅವಧಿಯಲ್ಲಿ ಭ್ರಷ್ಟಾಚಾರದ ಮೂಲಕ ಅಪಾರ ಪ್ರಮಾಣದ ಆಸ್ತಿ ಸಂಪಾದಿಸಿರುವ ಕುರಿತು ಸಾಕ್ಷ್ಯಾಧಾರಗಳು ದೊರೆತ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫ್ಲ್ಯಾಟ್‌ಗಳು, ವಾಣಿಜ್ಯ ಕಟ್ಟಡಗಳು ಪತ್ತೆ
ಶೋಧದ ವೇಳೆ ಸೇರಿಲಿಂಗಂಪಳ್ಳಿ ಮತ್ತು ಕುಕಟ್‌ಪಳ್ಳಿಯಲ್ಲಿ ನಾಲ್ಕು ವಸತಿ ಫ್ಲ್ಯಾಟ್‌ಗಳು ಪತ್ತೆಯಾಗಿದ್ದು, ಅವುಗಳ ಅಧಿಕೃತ ನೋಂದಣಿ ಮೌಲ್ಯ ₹1.23 ಕೋಟಿ ಎಂದು ತಿಳಿಸಲಾಗಿದೆ. ಕುಕಟ್‌ಪಳ್ಳಿಯ ಅಂಜನೇಯ ನಗರದಲ್ಲಿ 160 ಚದರಗಜ ಪ್ರದೇಶದಲ್ಲಿ ನಿರ್ಮಿಸಿರುವ ಜಿ+3 ವಾಣಿಜ್ಯ ಕಟ್ಟಡ ಪತ್ತೆಯಾಗಿದ್ದು, ಇದರ ಅಧಿಕೃತ ಮೌಲ್ಯ ₹1.82 ಕೋಟಿ ಎಂದು ಅಂದಾಜಿಸಲಾಗಿದೆ.
ಇದೇ ರೀತಿ ಸೇರಿಲಿಂಗಂಪಳ್ಳಿಯ ಗುಟ್ಟಾಲ ಬೇಗಂಪೇಟೆಯಲ್ಲಿ 250 ಚದರಗಜ ಪ್ರದೇಶದಲ್ಲಿ ನಿರ್ಮಿಸಲಾದ ಜಿ+5 ವಾಣಿಜ್ಯ ಕಟ್ಟಡವೂ ಪತ್ತೆಯಾಗಿದ್ದು, ಅದರ ಅಧಿಕೃತ ಮೌಲ್ಯ ₹2.90 ಕೋಟಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಭಾರತದಿಂದ ದಕ್ಷಿಣ ಕೊರಿಯಾ ವರೆಗೆ 10000 ಕಿಮೀ ವ್ಯಾಪಿಸಿದ ಮಳೆಮೋಡಗಳ ಬೃಹತ್‌ ಪಟ್ಟಿ ; ದೇಶದಲ್ಲಿ ಭರ್ಜರಿ ಮಳೆಯ ಮುನ್ಸೂಚನೆ

ಪತ್ನಿಯ ಹೆಸರಲ್ಲಿ ನಾಲ್ಕು ನಿರ್ಮಾಣ ಸಂಸ್ಥೆಗಳು
ರಮಣ ಅವರು ತಮ್ಮ ಪತ್ನಿಯ ಹೆಸರಲ್ಲಿ ನೋಂದಾಯಿಸಿರುವ ನಾಲ್ಕು ನಿರ್ಮಾಣ ಸಂಸ್ಥೆಗಳ ಮೂಲಕ ರಿಯಲ್ ಎಸ್ಟೇಟ್ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಭಾರಿ ಹೂಡಿಕೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆಂಜನೇಯ ನಗರ ಮತ್ತು ಮೂಸಾಪೇಟೆ ಪ್ರದೇಶಗಳಲ್ಲಿ ನಿರ್ಮಾಣ ಹಂತದಲ್ಲಿರುವ 10 ವಸತಿ ಅಪಾರ್ಟ್‌ಮೆಂಟ್‌ಗಳನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕೆ ಸುಮಾರು ₹20 ಕೋಟಿ ಹೂಡಿಕೆ ಮಾಡಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಚಿನ್ನ, ಬ್ಯಾಂಕ್ ಠೇವಣಿ, ವಾಹನಗಳು ವಶಕ್ಕೆ
ಸ್ಥಿರಾಸ್ತಿಗಳ ಜೊತೆಗೆ ₹52.02 ಲಕ್ಷ ಬ್ಯಾಂಕ್ ಠೇವಣಿಗಳು, ಸುಮಾರು ₹4 ಕೋಟಿ ಮೌಲ್ಯದ 2.094 ಕೆ.ಜಿ. ಚಿನ್ನಾಭರಣ, ಸುಮಾರು ₹45 ಲಕ್ಷ ಮೌಲ್ಯದ ಕಿಯಾ, ಮಹೀಂದ್ರ ಹಾಗೂ ಮಾರುತಿ ಬಲೆನೊ ಸೇರಿದಂತೆ ಮೂರು ವಾಹನಗಳು ಪತ್ತೆಯಾಗಿವೆ.
ಇದಲ್ಲದೆ ₹30 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳು, ಸುಮಾರು ₹2.5 ಲಕ್ಷ ಮೌಲ್ಯದ 20 ಮದ್ಯದ ಬಾಟಲಿಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇಲ್ಲಿವರೆಗೆ ಪತ್ತೆಯಾದ ಆಸ್ತಿಗಳ ಅಧಿಕೃತ ಮೌಲ್ಯ ₹27.65 ಕೋಟಿ ಎಂದು ಎಸಿಬಿ ಅಂದಾಜಿಸಿದ್ದು, ಇನ್ನಷ್ಟು ಆಸ್ತಿಗಳು ಹಾಗೂ ಹೂಡಿಕೆಗಳ ಬಗ್ಗೆ ಪರಿಶೀಲನೆ ಮುಂದುವರಿದಿದೆ ಎಂದು ತಿಳಿಸಿದೆ.
ಆದರೆ ರಿಯಲ್ ಎಸ್ಟೇಟ್ ತಜ್ಞರ ಪ್ರಕಾರ, ಪ್ರಸ್ತುತ ಮಾರುಕಟ್ಟೆ ದರದ ಆಧಾರದ ಮೇಲೆ ಈ ಎಲ್ಲಾ ಆಸ್ತಿಗಳ ಮೌಲ್ಯ ಸುಮಾರು ₹100ರಿಂದ ₹150 ಕೋಟಿವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.

ಪ್ರಮುಖ ಸುದ್ದಿ :-   ನೀಟ್‌ ಹೋರಾಟ : ಯುವ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕ್ರಮವಿಲ್ಲ ಎಂದು ಭರವಸೆ ನೀಡಿದ್ರೆ ಉಪವಾಸ ಅಂತ್ಯ ; ಕೇಂದ್ರಕ್ಕೆ ವಾಂಗ್ಚುಕ್ ಷರತ್ತು

ಈ ಹಿಂದೆಯೂ ಲಂಚ ಪ್ರಕರಣದಲ್ಲೂ ಸಿಕ್ಕಿಬಿದ್ದಿದ್ದ ಅಧಿಕಾರಿ
ಇವರು ಈ ಹಿಂದೆ 2019ರ ಡಿಸೆಂಬರ್ 12ರಂದು ಹೈದರಾಬಾದ್‌ನ ಸೈಬರ್ ಸಿಟಿ ವಲಯದ ಸೂಪರಿಂಟೆಂಡಿಂಗ್ ಎಂಜಿನಿಯರ್ (ಆಪರೇಷನ್ಸ್) ಕಚೇರಿಯಲ್ಲಿ ವಿಭಾಗೀಯ ಎಂಜಿನಿಯರ್ (ತಾಂತ್ರಿಕ) ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದರು.
ಅಂತಿಮ ಅಂದಾಜು ಅನುಮೋದನೆ ಪ್ರಕ್ರಿಯೆಗೆ ₹25,000 ಲಂಚ ಸ್ವೀಕರಿಸುತ್ತಿದ್ದ ವೇಳೆ ಅವರನ್ನು ಬಂಧಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಿದ ಶೋಧದಲ್ಲಿ ₹26.52 ಲಕ್ಷ ನಗದು ಹಾಗೂ ₹22.60 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಅವರ ವಿರುದ್ಧ ಆರೋಪಪಟ್ಟಿಯನ್ನೂ ಸಲ್ಲಿಸಲಾಗಿತ್ತು. ಪ್ರಸ್ತುತ ಪ್ರಕರಣದಲ್ಲಿ ಆರೋಪಿಯನ್ನು ಹೈದರಾಬಾದ್‌ನ ವಿಶೇಷ ಎಸಿಬಿ ಮತ್ತು ಎಸ್‌ಪಿಇ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದಾಯಕ್ಕಿಂತ ಅಧಿಕ ಆಸ್ತಿ ಪ್ರಕರಣದ ತನಿಖೆ ಮುಂದುವರಿದಿದ್ದು, ಹಣಕಾಸು ವ್ಯವಹಾರಗಳು, ಬೇನಾಮಿ ಆಸ್ತಿಗಳು ಹಾಗೂ ಅಧಿಕಾರಿ ಮತ್ತು ಅವರ ಆಪ್ತರಿಗೆ ಸಂಬಂಧಿಸಿದ ಇನ್ನಷ್ಟು ಹೂಡಿಕೆಗಳ ಕುರಿತು ಅಧಿಕಾರಿಗಳು ಸಮಗ್ರ ತನಿಖೆ ನಡೆಸುತ್ತಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement