ನವದೆಹಲಿ: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚು ಪಾರದರ್ಶಕತೆ ಹಾಗೂ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಯುವ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂಬ ಸ್ಪಷ್ಟ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿದರೆ ತಾವು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಲು ಸಿದ್ಧ ಎಂದು ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ತಿಳಿಸಿದ್ದಾರೆ. ಅಂತಹ ಭರವಸೆ ಸಿಗದಿದ್ದರೆ ತಮ್ಮ ಉಪವಾಸವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದುವರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಈ ಕುರಿತು ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರಿಗೆ ಪತ್ರ ಬರೆದಿರುವ ವಾಂಗ್ಚುಕ್, “ಪ್ರತಿಭಟನೆಯಲ್ಲಿ ಭಾಗವಹಿಸಿರುವ ಯಾವುದೇ ಯುವ ಪ್ರತಿಭಟನಾಕಾರರ ವಿರುದ್ಧ ದಂಡನಾತ್ಮಕ ಅಥವಾ ಪ್ರತೀಕಾರಾತ್ಮಕ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂಬ ಭರವಸೆಯನ್ನು ಸರ್ಕಾರ ನೀಡಬೇಕು” ಎಂದು ಅವರು ಹೇಳಿದ್ದಾರೆ. “ಈ ಯುವಕರು ನ್ಯಾಯಸಮ್ಮತ ಹಾಗೂ ಜವಾಬ್ದಾರಿಯುತ ಶಿಕ್ಷಣ ವ್ಯವಸ್ಥೆಗಾಗಿ ಮಾತ್ರ ಧ್ವನಿ ಎತ್ತುತ್ತಿದ್ದಾರೆ” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
59 ವರ್ಷದ ವಾಂಗ್ಚುಕ್, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಂಗ್ಯಾತ್ಮಕ ರಾಜಕೀಯ ಸಂಘಟನೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸುತ್ತಿರುವ ಪ್ರತಿಭಟನೆಯ ಭಾಗವಾಗಿ ಜಂತರ್ ಮಂತರ್ನಲ್ಲಿ ಮೂರು ವಾರಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಕಳೆದ ಶನಿವಾರ ಅವರನ್ನು ಪೊಲೀಸರು ಪ್ರತಿಭಟನಾ ಸ್ಥಳದಿಂದ ಆಸ್ಪತ್ರೆಗೆ ಸ್ಥಳಾಂತರಿಸಿದ್ದರೂ ಅವರು ಉಪವಾಸವನ್ನು ಅಂತ್ಯಗೊಳಿಸಲು ನಿರಾಕರಿಸಿದ್ದರು.
ಪ್ರಸ್ತುತ ಅವರು ಗುರುಗ್ರಾಮದ ಖಾಸಗಿ ಆಸ್ಪತ್ರೆ ಮೆದಾಂತದಲ್ಲಿ 25ನೇ ದಿನದ ಉಪವಾಸ ಮುಂದುವರಿಸಿದ್ದಾರೆ. ಆಸ್ಪತ್ರೆಯ ಹಾಸಿಗೆಯಿಂದ ಬಿಡುಗಡೆ ಮಾಡಿದ ವಿಡಿಯೊ ಸಂದೇಶದಲ್ಲಿ, “ನಾನು ಇನ್ನೂ ಜೀವಂತವಾಗಿದ್ದೇನೆ (ಮೈ ಅಭಿ ಜಿಂದಾ ಹೂಂ)” ಎಂದು ಹೇಳಿದ ಅವರು, ಉಪವಾಸದಿಂದ 11 ಕೆ.ಜಿ. ತೂಕ ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಸೋಮವಾರ ಸಂಭವಿಸಿದ “ಪ್ರಚೋದನೆಗಳ” ನಡುವೆಯೂ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಯುವಕರನ್ನು ಅವರು ಶ್ಲಾಘಿಸಿದ್ದಾರೆ. ಹಾಗೂ ಜೆ.ಪಿ. ನಡ್ಡಾ ಹಾಗೂ ಜಿತೇಂದ್ರ ಸಿಂಗ್ ಸೋಮವಾರ ರಾತ್ರಿ ಮೆದಾಂತ ಆಸ್ಪತ್ರೆಗೆ ಭೇಟಿ ನೀಡಿದ್ದಕ್ಕಾಗಿ ಅವರಿಗೆ ವಾಂಗ್ಚುಕ್ ಪತ್ರದಲ್ಲಿ ಧನ್ಯವಾದ ತಿಳಿಸಿದ್ದಾರೆ.
ಈ ವೇಳೆ, ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನೀಟ್ ಅಭ್ಯರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವ ಕುರಿತು ಸರ್ಕಾರ ಪರಿಶೀಲನೆ ನಡೆಸುವುದಾಗಿ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವನ್ನು ಸಂಸತ್ತಿನಲ್ಲಿ ಚರ್ಚೆಗೆ ತರಲು ಸರ್ಕಾರ ಸಿದ್ಧವಿದೆ ಎಂದು ಸಚಿವರು ಭರವಸೆ ನೀಡಿರುವುದಾಗಿ ಅವರು ಹೇಳಿದ್ದಾರೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಂಬಂಧಿಸಿದ ಬೇಡಿಕೆಯನ್ನೂ ಪರಿಗಣಿಸಲಾಗುವುದು ಎಂದು ಸಚಿವರು ತಿಳಿಸಿರುವುದಾಗಿ ವಾಂಗ್ಚುಕ್ ಉಲ್ಲೇಖಿಸಿದ್ದಾರೆ.
ಸೋಮವಾರ ಸಂಸತ್ ಚಲೋ ಪ್ರತಿಭಟನೆ “ಪೊಲೀಸರ ಅತಿರೇಕದ ಕ್ರಮಗಳ” ನಡುವೆಯೂ ಅತ್ಯಂತ ಶಾಂತಿಯುತವಾಗಿ ನಡೆದಿತ್ತು ಎಂದು ಅವರು ಹೇಳಿದ್ದಾರೆ. ಕಳೆದ ಕೆಲ ಗಂಟೆಗಳಲ್ಲಿ ಸುಮಾರು 65 ಮಂದಿ ಸಂಸದರು ಉಪವಾಸವನ್ನು ಕೊನೆಗೊಳಿಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿರುವ ವಾಂಗ್ಚುಕ್, ತಾವೂ ಸಹ ತಮ್ಮ ಶಿಕ್ಷಣ ಕ್ಷೇತ್ರದ ಕಾರ್ಯಗಳಿಗೆ ಮರಳಲು ಬಯಸುತ್ತಿರುವುದಾಗಿ ಹೇಳಿದ್ದಾರೆ. ಆದರೆ, ಈ ಚಳವಳಿಯ ಕೇಂದ್ರಬಿಂದುವಾಗಿರುವ ಯುವಕರ ಹಿತಾಸಕ್ತಿಗೆ ಧಕ್ಕೆಯಾಗುವ ರೀತಿಯಲ್ಲಿ ಉಪವಾಸ ಅಂತ್ಯಗೊಳಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ಯುವ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ ಭರವಸೆ ನೀಡಿದರೆ, ಸರ್ಕಾರ ನನ್ನ ಮನವಿಯಷ್ಟೇ ಅಲ್ಲ, ಲಕ್ಷಾಂತರ ಭಾರತೀಯ ಯುವಕರ ಆಶಯಗಳನ್ನೂ ಆಲಿಸಿದೆ ಎಂಬ ನಂಬಿಕೆಯಿಂದ ನಾನು ಉಪವಾಸವನ್ನು ಕೊನೆಗೊಳಿಸುತ್ತೇನೆ” ಎಂದು ಅವರು ಹೇಳಿದ್ದಾರೆ. ಇದೇ ಅಭಿಪ್ರಾಯವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ವಿಡಿಯೊ ಸಂದೇಶದಲ್ಲಿಯೂ ಅವರು ಪುನರುಚ್ಚರಿಸಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸರ್ಕಾರದ ಹೊಣೆಗಾರಿಕೆಗೆ ಆಗ್ರಹಿಸಿ ವಾಂಗ್ಚುಕ್ ಜೂನ್ 28ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಎರಡು ದಿನಗಳ ಹಿಂದೆ ಅವರನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಿಂದ ಗುರುಗ್ರಾಮದ ಮೆದಾಂತ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಈ ಹಿಂದೆ ಲಡಾಖ್ಗೆ ರಾಜ್ಯದ ಸ್ಥಾನಮಾನ ನೀಡುವ ಬೇಡಿಕೆಯನ್ನು ಮುಂದಿಟ್ಟುಕೊಂಡು ಅವರು ಹೋರಾಟ ನಡೆಸಿದ್ದರು. ಕಳೆದ ವರ್ಷ ಲೇಹ್ನಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕವಾಗಿ ತಿರುಗಿ ನಾಲ್ವರು ಸಾವಿಗೀಡಾದ ಬಳಿಕ, ವಾಂಗ್ಚುಕ್ ಅವರನ್ನು ಸುಮಾರು ಆರು ತಿಂಗಳ ಕಾಲ ಬಂಧನದಲ್ಲಿ ಇರಿಸಲಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ