ಪರೀಕ್ಷೆಯಲ್ಲಿ ಉತ್ತರ ಪಡೆಯಲು ಚಾಟ್‌ಜಿಪಿಟಿ ಬಳಕೆ: ಪ್ರಾಧ್ಯಾಪಕರಿಗೆ ಸಿಕ್ಕಿಬಿದ್ದ ಐಐಟಿ ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ

ಮುಂಬೈ: ಪರೀಕ್ಷೆಯ ವೇಳೆ ಮೊಬೈಲ್‌ ಫೋನ್‌ ಬಳಸಿ ಚಾಟ್‌ಜಿಪಿಟಿ (ChatGPT) ಮೂಲಕ ಉತ್ತರಗಳನ್ನು ಪಡೆಯಲು ಯತ್ನಿಸಿದ ಆರೋಪಕ್ಕೆ ಒಳಗಾಗಿದ್ದ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ಬಾಂಬೆಯ ದ್ವಿತೀಯ ವರ್ಷದ ವಿದ್ಯಾರ್ಥಿಯೊಬ್ಬರು ಶುಕ್ರವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಳೆದ ಏಳು ತಿಂಗಳ ಅವಧಿಯಲ್ಲಿ ಐಐಟಿ ಪವಾಯಿ ಕ್ಯಾಂಪಸ್‌ನಲ್ಲಿ ವರದಿಯಾದ ಮೂರನೇ ಆತ್ಮಹತ್ಯೆ ಪ್ರಕರಣ ಇದಾಗಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಎನರ್ಜಿ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದ ಸಾಹಿಲ್ ವಾಕೋಡೆ ಎಂದು ಗುರುತಿಸಲಾಗಿದೆ. ಸಂಸ್ಥೆಯ ಮಾಹಿತಿಯ ಪ್ರಕಾರ, ಪರೀಕ್ಷೆ ನಡೆಯುತ್ತಿದ್ದ ವೇಳೆ ಸಾಹಿಲ್ ಪ್ರಶ್ನೆಪತ್ರಿಕೆಯನ್ನು ಚಾಟ್‌ಜಿಪಿಟಿಗೆ ಅಪ್‌ಲೋಡ್ ಮಾಡಿ ಅದರಿಂದ ಉತ್ತರಗಳನ್ನು ಪಡೆಯಲು ಯತ್ನಿಸಿರುವ ಬಗ್ಗೆ ಆರೋಪಿಸಲಾಗಿದೆ.
ಐಐಟಿ ಬಾಂಬೆ ಅಧಿಕಾರಿಗಳ ಪ್ರಕಾರ, ಈ ಘಟನೆಗೆ ಸಂಬಂಧಿಸಿ ವಿದ್ಯಾರ್ಥಿಯ ವಿರುದ್ಧ ಯಾವುದೇ ಶಿಸ್ತು ಕ್ರಮವನ್ನು ಕೈಗೊಂಡಿರಲಿಲ್ಲ. ವಿಷಯವನ್ನು ಸಂಬಂಧಿತ ಬೋಧಕ ಹಾಗೂ ವಿಭಾಗದ ಮುಖ್ಯಸ್ಥರು ವಿದ್ಯಾರ್ಥಿ ಜೊತೆ ಚರ್ಚಿಸಿದ್ದರು. ಈ ವೇಳೆ ಅವರಿಗೆ ಸಮಾಲೋಚನೆ (ಕೌನ್ಸೆಲಿಂಗ್) ನೀಡಲಾಗಿದ್ದು, ಈ ಘಟನೆ ಅವರ ಶೈಕ್ಷಣಿಕ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಭರವಸೆ ನೀಡಲಾಗಿತ್ತು.
ಚರ್ಚೆಯ ಬಳಿಕ ಸಾಹಿಲ್ ತಮ್ಮ ವಸತಿ ನಿಲಯದ ಕೊಠಡಿಗೆ ತೆರಳಿದ್ದರು ಆದರೆ ಅದೇ ದಿನ ಸಂಜೆ ಅವರು ತಮ್ಮ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆ ಕುರಿತು ಪ್ರಕಟಣೆ ಹೊರಡಿಸಿರುವ ಐಐಟಿ ಬಾಂಬೆ, ವಿದ್ಯಾರ್ಥಿಯ ಸಾವಿನಿಂದ ಸಂಸ್ಥೆ ತೀವ್ರ ದುಃಖಿತವಾಗಿದೆ ಎಂದು ತಿಳಿಸಿದೆ.
“ವಿದ್ಯಾರ್ಥಿಯ ಸ್ನೇಹಿತರು, ಸಹಪಾಠಿಗಳು, ಅಧ್ಯಾಪಕರು ಹಾಗೂ ಈ ಘಟನೆಯಿಂದ ಪ್ರಭಾವಿತರಾದ ಇತರರಿಗೆ ಅಗತ್ಯ ಬೆಂಬಲವನ್ನು ಸಂಸ್ಥೆ ಒದಗಿಸುತ್ತಿದೆ. ಸಾವಿನ ಸುತ್ತಲಿನ ಪರಿಸ್ಥಿತಿಗಳನ್ನು ಸಂಬಂಧಿತ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಏಳು ತಿಂಗಳಲ್ಲಿ ಮೂರನೇ ಆತ್ಮಹತ್ಯೆ
ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಕಳೆದ ಏಳು ತಿಂಗಳಲ್ಲಿ ಇದು ಮೂರನೇ ಆತ್ಮಹತ್ಯೆ ಪ್ರಕರಣವಾಗಿದೆ. ಫೆಬ್ರವರಿಯಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಯೊಬ್ಬರು ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ 2026ರ ಜುಲೈನಲ್ಲಿ ಹೊಸ ಸೆಮಿಸ್ಟರ್ ಆರಂಭವಾದ ಸಂದರ್ಭದಲ್ಲಿ 20 ವರ್ಷದ ದ್ವಿತೀಯ ವರ್ಷದ ಬಿ.ಟೆಕ್ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು.
ವಿದ್ಯಾರ್ಥಿಗಳ ಪ್ರತಿಭಟನೆ
ಸಾಹಿಲ್ ವಾಕೋಡೆ ಅವರ ಸಾವಿನ ಸುದ್ದಿ ಹೊರಬಿದ್ದ ನಂತರ ಐಐಟಿ ಪವಾಯಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದರು. ಘಟನೆಯ ಸುತ್ತಲಿನ ಸಂಪೂರ್ಣ ಸತ್ಯವನ್ನು ಸಂಸ್ಥೆ ಬಹಿರಂಗಪಡಿಸುತ್ತಿಲ್ಲ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿದರು.
ವಿದ್ಯಾರ್ಥಿಗಳ ಪ್ರಕಾರ, ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪಕ್ಕೆ ಒಳಗಾಗಿದ್ದ ಸಾಹಿಲ್ ಅವರಿಗೆ ಒಂದು ವರ್ಷದ ಅಮಾನತು ಕ್ರಮದ ಬೆದರಿಕೆ ಹಾಕಲಾಗಿತ್ತು. ಅಮಾನತು ಜಾರಿಯಾದರೆ ಅವರು ವಸತಿ ನಿಲಯವನ್ನು ಖಾಲಿ ಮಾಡಿ ಕ್ಯಾಂಪಸ್‌ನ ಹೊರಗೆ ವಾಸಿಸಬೇಕಾಗುತ್ತಿತ್ತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಇದರಿಂದ ಅವರ ನಾಲ್ಕು ವರ್ಷದ ಎಂಜಿನಿಯರಿಂಗ್ ಕೋರ್ಸ್ ಐದು ವರ್ಷ ಅಥವಾ ಅದಕ್ಕಿಂತಲೂ ಹೆಚ್ಚು ಅವಧಿಗೆ ವಿಸ್ತರಿಸುವ ಸಾಧ್ಯತೆ ಇತ್ತು ಎಂದು ಪ್ರತಿಭಟನಾಕಾರರು ವಾದಿಸಿದ್ದಾರೆ. ಶಿಸ್ತು ಕ್ರಮದ ಭೀತಿ ಹಾಗೂ ಒತ್ತಡವೇ ಸಾಹಿಲ್ ಅವರನ್ನು ಈ ಕಠಿಣ ನಿರ್ಧಾರಕ್ಕೆ ತಳ್ಳಿರಬಹುದು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಆದರೆ ಈ ಆರೋಪಗಳು ಸ್ವತಂತ್ರವಾಗಿ ದೃಢಪಟ್ಟಿಲ್ಲ.
ಸಂಸ್ಥೆಯ ಆಡಳಿತದಿಂದ “ಹೊಣೆಗಾರಿಕೆ, ಪಾರದರ್ಶಕತೆ ಮತ್ತು ಸ್ಪಷ್ಟ ಉತ್ತರಗಳನ್ನು ನೀಡಬೇಕು” ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.
ಕ್ಯಾಂಪಸ್‌ನಲ್ಲಿ ಬಿಗಿ ಭದ್ರತೆ
ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಕ್ಯಾಂಪಸ್‌ನಲ್ಲಿ ಬಿಗಿ ಭದ್ರತೆ ನಿಯೋಜಿಸಿದರು. ಇದೇ ವೇಳೆ ವಿದ್ಯಾರ್ಥಿಗಳು ಮತ್ತು ಆಡಳಿತದ ನಡುವೆ ಮಾತುಕತೆಗಳು ನಡೆಯುತ್ತಿವೆ.
ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. “ಐಐಟಿ ಪವಾಯಿಯಲ್ಲಿ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ಕೆಲ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಐಐಟಿ ಆಡಳಿತ ಅವರೊಂದಿಗೆ ಚರ್ಚೆ ನಡೆಸುತ್ತಿದೆ” ಎಂದು ಅವರು ಹೇಳಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement