ಧರ್ಮೇಂದ್ರ ಪ್ರಧಾನ ರಾಜೀನಾಮೆ ಅಂಗೀಕಾರ; ಪ್ರಲ್ಹಾದ ಜೋಶಿಗೆ ಕೇಂದ್ರ ಶಿಕ್ಷಣ ಇಲಾಖೆಯ ಹೆಚ್ಚುವರಿ ಹೊಣೆ

ನವದೆಹಲಿ: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ನೀಟ್‌ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ನಂತರ ಪ್ರತಿಭಟನೆಗಳ ಬೆನ್ನಲ್ಲೇ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ರಾಷ್ಟ್ರಪತಿ ಭವನ ಅಂಗೀಕರಿಸಿದ್ದು, ಸದ್ಯ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿರುವ ಪ್ರಲ್ಹಾದ ಜೋಶಿ ಅವರಿಗೆ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಹೊಣೆ ವಹಿಸಲಾಗಿದೆ.
ರಾಷ್ಟ್ರಪತಿ ಭವನ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸುವ ಮೂಲಕ ಶಿಕ್ಷಣ ಸಚಿವಾಲಯದ ಈ ಹೊಸ ಬದಲಾವಣೆಯನ್ನು ದೃಢಪಡಿಸಿದೆ. ಪ್ರಲ್ಹಾದ ಜೋಶಿ ಅವರು ಕರ್ನಾಟಕದ ಧಾರವಾಡ ಕ್ಷೇತ್ರದ ಸಂಸದರಾಗಿದ್ದಾರೆ.

“ದೇಶವಿರೋಧಿ ಶಕ್ತಿಗಳ ದುರ್ಬಳಕೆ ತಡೆಯಲು ಈ ನಿರ್ಧಾರ”
ದೆಹಲಿಯ ಜಂತರ್ ಮಂತರ್‌ನಲ್ಲಿ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ಮತ್ತು ಸಂಘಟನೆಗಳು ನಡೆಸುತ್ತಿದ್ದ ಸುದೀರ್ಘ ಪ್ರತಿಭಟನೆ 35ನೇ ದಿನಕ್ಕೆ ಕಾಲಿಟ್ಟಿದ್ದ ವೇಳೆಯಲ್ಲೇ 57 ವರ್ಷದ ಧರ್ಮೇಂದ್ರ ಪ್ರಧಾನ್ ಈ ದಿಢೀರ್ ನಿರ್ಧಾರ ತಳೆದಿದ್ದಾರೆ.
ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿರುವ ಅವರು, “ಕಳೆದ ನಾಲ್ಕು ದಶಕಗಳಿಂದ ನಾನು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ರಂಗದ ಸುಧಾರಣೆಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಸಶಕ್ತ ಹಾಗೂ ಒಳಗೊಳ್ಳುವಿಕೆಯ ಶಿಕ್ಷಣ ವ್ಯವಸ್ಥೆಯೇ ಸಮರ್ಥ ರಾಷ್ಟ್ರದ ಅಡಿಪಾಯ ಎಂದು ನಾನು ಬಲವಾಗಿ ನಂಬಿದವನು. ಪ್ರಸ್ತುತ ಎದುರಾಗಿರುವ ಪರಿಸ್ಥಿತಿಯನ್ನು ದೇಶವಿರೋಧಿ ಶಕ್ತಿಗಳು ತಮ್ಮ ಸ್ವಾರ್ಥಕ್ಕೆ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯುವ ಉದ್ದೇಶದಿಂದ ನಾನು ಈ ಹುದ್ದೆಯಿಂದ ಕೆಳಗಿಳಿಯುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ 17 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ; ಯೆಲ್ಲೋ ಅಲರ್ಟ್‌ ಘೋಷಣೆ

35 ದಿನಗಳ ಹೋರಾಟ ಅಂತ್ಯ
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬೆನ್ನಲ್ಲೇ, ದೆಹಲಿಯಲ್ಲಿ ಸುದೀರ್ಘ ಹೋರಾಟ ನಡೆಸುತ್ತಿದ್ದ ಸಿಜೆಪಿ (CJP) ಸಂಘಟನೆ ತನ್ನ ಪ್ರತಿಭಟನೆಯನ್ನು ಹಿಂಪಡೆದಿರುವುದಾಗಿ ಪ್ರಕಟಿಸಿದೆ. ಬೋಸ್ಟನ್ ವಿಶ್ವವಿದ್ಯಾಲಯದ ಪದವೀಧರ ಅಭಿಜಿತ್ ದೀಪ್ಕೆ ಅವರ ನೇತೃತ್ವದಲ್ಲಿ ಆರಂಭಗೊಂಡಿದ್ದ ಈ ಹೋರಾಟದ ಪ್ರಮುಖ ಬೇಡಿಕೆಯೇ ಶಿಕ್ಷಣ ಸಚಿವರ ರಾಜೀನಾಮೆಯಾಗಿತ್ತು. ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರ ಜೊತೆಗಿನ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಿಜೆಪಿ ವಕ್ತಾರರಾದ ಸೌರವ್ ದಾಸ್ ಹಾಗೂ ಅಶುತೋಷ್ ರಾಂಕಾ ಮಾತನಾಡಿ, “ಕೇಂದ್ರ ಸರ್ಕಾರವು ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ನಾವು ಪ್ರತಿಭಟನೆಯನ್ನು ಮುಕ್ತಾಯಗೊಳಿಸುತ್ತಿದ್ದೇವೆ,” ಎಂದು ಸ್ಪಷ್ಟಪಡಿಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement