ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ಮತ್ತು ಕೇಂದ್ರ ಸರ್ಕಾರದ ನಡುವೆ ಮಾತುಕತೆ ನಡೆಯುತ್ತಿದ್ದು, ಇಂದು (ಜುಲೈ ೨೫) ಮೂರನೇ ಸುತ್ತಿನ ಮಾತುಕತೆ ನಡೆಯುತ್ತಿದೆ. ಇದೇ ವೇಳೆ, ಜುಲೈ 20ರಂದು ನಡೆದ ‘ಸಂಸದ್ ಚಲೋ’ ಪ್ರತಿಭಟನೆಯ ವೇಳೆ ಜಂತರ್ ಮಂತರ್ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ.
ಪೊಲೀಸ್ ಮೂಲಗಳ ಪ್ರಕಾರ, ಜುಲೈ 20ರ ಪ್ರತಿಭಟನೆಯ ಬಳಿಕ ಜಂತರ್ ಮಂತರ್ನಲ್ಲಿ ಅಳವಡಿಸಲಾದ ದೆಹಲಿ ಪೊಲೀಸ್ ಮುಖ ಗುರುತಿಸುವಿಕೆ ವ್ಯವಸ್ಥೆ (Facial Recognition System – FRS) ಕಳೆದ ಮೂರು ದಿನಗಳಲ್ಲಿ (ಜುಲೈ 21ರಿಂದ ಜುಲೈ 23ರವರೆಗೆ) ಪ್ರತಿಭಟನಾ ಸ್ಥಳದಲ್ಲಿ 2,500ಕ್ಕೂ ಹೆಚ್ಚು ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಗುರುತಿಸಿದೆ.
ಪೊಲೀಸರ ಮೇಲೆ ಚಾಕುಗಳಿಂದ ದಾಳಿ ನಡೆಸಿದ ದುಷ್ಕರ್ಮಿಗಳು
ಜುಲೈ 20ರಂದು ನಡೆದ ಘರ್ಷಣೆಯ ಬಳಿಕ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸುವ ಉದ್ದೇಶದಿಂದ ಎಫ್ಆರ್ಎಸ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ವ್ಯವಸ್ಥೆಯ ಮೂಲಕ ಮೂರು ದಿನಗಳಲ್ಲಿ 2,500ಕ್ಕೂ ಹೆಚ್ಚು ಶಂಕಿತ ಹಾಗೂ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಗುರುತಿಸಲಾಗಿದೆ ಎಂದು ಹೇಳಲಾಗಿದೆ. ಪ್ರತಿಭಟನೆಯ ವೇಳೆ ಗುಂಪಿನಲ್ಲಿದ್ದ ದುಷ್ಕರ್ಮಿಗಳು ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಚಾಕು ಹಾಗೂ ಇತರೆ ಹರಿತವಾದ ಆಯುಧಗಳಿಂದ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಜಂತರ್ ಮಂತರ್ನಲ್ಲಿ ನಾಲ್ಕು ಎಫ್ಆರ್ಎಸ್ ಘಟಕಗಳ ಸ್ಥಾಪನೆ
ಜಂತರ್ ಮಂತರ್ನ ಪ್ರಮುಖ ಪ್ರವೇಶ ಹಾಗೂ ನಿರ್ಗಮನ ದ್ವಾರಗಳಲ್ಲಿ ನಾಲ್ಕು ಎಫ್ಆರ್ಎಸ್ ಘಟಕಗಳನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆ ದೆಹಲಿ ಪೊಲೀಸ್ ಡೇಟಾಬೇಸ್ಗೆ ನೇರವಾಗಿ ಸಂಪರ್ಕ ಹೊಂದಿದ್ದು, ಪೊಲೀಸ್ ಅಧಿಕಾರಿಗಳು ನೈಜ ಸಮಯದಲ್ಲೇ (ರಿಯಲ್ ಟೈಮ್) ನಿಗಾ ವಹಿಸುತ್ತಿದ್ದಾರೆ. ಇದರಿಂದ ಪೊಲೀಸ್ ದಾಖಲೆಗಳಲ್ಲಿ ಈಗಾಗಲೇ ಇರುವ ಹಾಗೂ ಬೇಕಾಗಿರುವ ಆರೋಪಿಗಳು ಅಥವಾ ಪದೇಪದೇ ಅಪರಾಧ ಎಸಗುವವರನ್ನು ತಕ್ಷಣವೇ ಗುರುತಿಸಿ ಅವರ ಗುರುತನ್ನು ಪರಿಶೀಲಿಸಲು ಸಾಧ್ಯವಾಗುತ್ತಿದೆ.
ಹಿಂಸಾಚಾರ ಪ್ರಕರಣದಲ್ಲಿ 15 ಎಫ್ಐಆರ್ ದಾಖಲು
ಸಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ವೇಳೆ ಉಂಟಾದ ಹಿಂಸಾಚಾರಕ್ಕೆ ಸಂಬಂಧಿಸಿದ ತನಿಖೆ ಮುಂದುವರಿದಿದೆ. ಜುಲೈ 20ರಂದು ನಡೆದ ‘ಸಂಸದ್ ಚಲೋ’ ಮೆರವಣಿಗೆಯಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ನಡೆದ ನಂತರವೇ ಮುಖ ಗುರುತಿಸುವಿಕೆ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಈವರೆಗೆ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಎಫ್ಐಆರ್ಗಳನ್ನು ದಾಖಲಿಸಲಾಗಿದ್ದು, ಪೊಲೀಸ್ ಸಿಬ್ಬಂದಿಯ ಮೇಲಿನ ದಾಳಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡಿದ ಆರೋಪಿಗಳ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಸಿಜೆಪಿ ಪ್ರತಿಭಟನೆ
ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ವಿರೋಧಿಸಿ ಆಯೋಜಿಸಲಾಗಿದೆ. ಅಭಿಜೀತ್ ದೀಪ್ಕೆ ನೇತೃತ್ವದ ಸಿಜೆಪಿಯ ಕರೆಗೆ ಸ್ಪಂದಿಸಿ ವಿದ್ಯಾರ್ಥಿಗಳು ಜಂತರ್ ಮಂತರ್ನಲ್ಲಿ ಸೇರಿದ್ದಾರೆ. ಪ್ರತಿಭಟನಾಕಾರರು ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚಿನ ಸುಧಾರಣೆಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸುತ್ತಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ