ನವದೆಹಲಿ: ದೇಶಾದ್ಯಂತ ತೀವ್ರ ಕಾವು ಪಡೆದುಕೊಂಡಿದ್ದ ಪಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ಪರೀಕ್ಷಾ ಅಕ್ರಮಗಳ ವಿವಾದ ಕೊನೆಗೂ ತಾರ್ಕಿಕ ಅಂತ್ಯ ಕಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ನಿರ್ಧಾರವನ್ನು ಹೆಸರಾಂತ ಶಿಕ್ಷಣ ತಜ್ಞ ಹಾಗೂ ಸಾಮಾಜಿಕ ಹೋರಾಟಗಾರ ಲಡಾಖ್ನ ಸೋನಮ್ ವಾಂಗ್ಚುಕ್ “ಪ್ರಜಾಪ್ರಭುತ್ವದ ನಿಜವಾದ ಜಯ” ಎಂದು ಬಣ್ಣಿಸಿದ್ದಾರೆ.
ಸಚಿವರ ರಾಜೀನಾಮೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ವಾಂಗ್ಚುಕ್, ಗುರುವಾರ ತಡರಾತ್ರಿ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದರು.
“ಬೀದಿಯಿಂದ ಸಿಕ್ಕ ನೆರವು”: ‘ಎಕ್ಸ್’ನಲ್ಲಿ ವಾಂಗ್ಚುಕ್ ಭಾವುಕ ಪೋಸ್ಟ್
ಸಚಿವರ ರಾಜೀನಾಮೆ ಸುದ್ದಿ ಹೊರಬಿದ್ದ ಬೆನ್ನಲ್ಲೇ ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ನಲ್ಲಿ ಪ್ರತಿಕ್ರಿಯಿಸಿದ ಸೋನಮ್ ವಾಂಗ್ಚುಕ್, “ಇದು ಪ್ರಜಾಪ್ರಭುತ್ವದ ಜಯ… ನೇರ ಪ್ರಜಾಪ್ರಭುತ್ವ… ನೇರವಾಗಿ ಬೀದಿಗಳಿಂದ ಸಿಕ್ಕ ಗೆಲುವು. ಇದು ಶಾಂತಿ, ತಾಳ್ಮೆ ಮತ್ತು ಸತತ ಪ್ರಯತ್ನಕ್ಕೆ ಸಿಕ್ಕ ಜಯ,” ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ, ಈ ಹೋರಾಟವನ್ನು ಮುನ್ನಡೆಸಿದ ಕಾಕ್ರೋಚ್ ಜನತಾ ಪಾರ್ಟಿ (CJP), ದೇಶದ ಯುವಜನತೆ (Gen Z) ಮತ್ತು ಪ್ರಜೆಗಳಿಗೆ ಅಭಿನಂದನೆ ಸಲ್ಲಿಸಿದ ಅವರು, “ದೇಶದ ಮೂಲೆ ಮೂಲೆಯಿಂದಲೂ ಭಯವನ್ನು ತೊರೆದು, ಒಗ್ಗಟ್ಟಿನಿಂದ ಧ್ವನಿ ಎತ್ತಿದ ಪ್ರತಿಯೊಬ್ಬ ನಾಗರಿಕನಿಗೂ ಧನ್ಯವಾದಗಳು,” ಎಂದು ತಿಳಿಸಿದ್ದಾರೆ.
ಯುವಜನತೆಯೇ ‘ವಿಶ್ವಗುರು’ : ಗೀತಾಂಜಲಿ ಜೆ. ಆಂಗ್ಮೋ
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕುರಿತು ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಕೂಡ ಪ್ರತಿಕ್ರಿಯಿಸಿದ್ದು, “ಭಾರತ ‘ವಿಶ್ವಗುರು’ ಎಂದರೆ ಏನು ಎಂಬುದನ್ನು ಯಾರಾದರೂ ತೋರಿಸಿಕೊಟ್ಟಿದ್ದರೆ, ಅದು ನಮ್ಮ ದೇಶದ ಯುವಜನತೆ (Gen Z)” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೇಶದ ಪ್ರಮುಖ ಪರೀಕ್ಷೆಗಳಲ್ಲಿ ಒಂದಾದ ನೀಟ್-ಯುಜಿ (NEET-UG) ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಶಿಕ್ಷಣ ಸಚಿವಾಲಯದ ವಿರುದ್ಧ ವಿದ್ಯಾರ್ಥಿ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸಚಿವರ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್ನಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಬೃಹತ್ ಪ್ರತಿಭಟನೆಗಳನ್ನು ನಡೆಸಲಾಗಿತ್ತು. ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯೇ ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿತ್ತು.
https://x.com/Wangchuk66/status/2080952734141088056?ref_src=twsrc%5Etfw%7Ctwcamp%5Etweetembed%7Ctwterm%5E2080952734141088056%7Ctwgr%5Edba625e5b2afafb0c85ed74ffcdb0eecd1c483e9%7Ctwcon%5Es1_&ref_url=https%3A%2F%2Fwww.news18.com%2Findia%2Fvictory-of-democracy-sonam-wangchuks-first-reaction-after-dharmendra-pradhan-resigns-as-education-minister-10233112.html
“ನನ್ನ ಸ್ವಪ್ರತಿಷ್ಠೆಯ ಪ್ರಶ್ನೆಯಲ್ಲ”: ಧರ್ಮೇಂದ್ರ ಪ್ರಧಾನ್
ತಮ್ಮ ರಾಜೀನಾಮೆ ಹೇಳಿಕೆಯಲ್ಲಿ ಧರ್ಮೇಂದ್ರ ಪ್ರಧಾನ್ ಅವರು ಶಿಕ್ಷಣ ಕ್ಷೇತ್ರ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗಾಗಿ ತಮ್ಮ ನಾಲ್ಕು ದಶಕಗಳ ಬದ್ಧತೆಯನ್ನು ಸ್ಮರಿಸಿದ್ದಾರೆ. ತಮಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಮೇ 3 ರಂದು ನಡೆದ ನೀಟ್-ಯುಜಿ ಪರೀಕ್ಷೆಯ ಲೋಪದೋಷಗಳನ್ನು ಒಪ್ಪಿಕೊಂಡ ಅವರು, ಈ ಬಿಕ್ಕಟ್ಟಿನ ಸಮಯದಲ್ಲಿ ತಾವು ಜವಾಬ್ದಾರಿಯಿಂದ ಎಂದಿಗೂ ತಪ್ಪಿಸಿಕೊಂಡು ಓಡಿಹೋಗಿಲ್ಲ ಎಂದು ಹೇಳಿದ್ದಾರೆ,
“ಯಾವೊಬ್ಬ ಅರ್ಹ ವಿದ್ಯಾರ್ಥಿಯೂ ಪರೀಕ್ಷಾ ಮಾಫಿಯಾಗಳಿಂದ ತೊಂದರೆ ಅನುಭವಿಸಬಾರದು ಮತ್ತು ಯಾವುದೇ ವಿದ್ಯಾರ್ಥಿಗೆ ಅನ್ಯಾಯವಾಗಬಾರದು ಎಂಬುದೇ ನನ್ನ ದೃಢ ಸಂಕಲ್ಪವಾಗಿತ್ತು. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ಕೆಲವು ವ್ಯಕ್ತಿಗಳು ವಿದ್ಯಾರ್ಥಿ ಸಮುದಾಯವನ್ನು ಹಾದಿ ತಪ್ಪಿಸಿ ಪ್ರಗತಿಗೆ ಅಡ್ಡಿಪಡಿಸಲು ಯತ್ನಿಸಿದರು” ಎಂದು ಹೇಳಿದ್ದಾರೆ.
“ಕಳೆದ 10 ದಿನಗಳ ಬೆಳವಣಿಗೆಗಳು ನನಗೆ ತೀವ್ರ ಬೇಸರ ತಂದಿವೆ. ಇದು ನನಗೆ ವ್ಯಕ್ತಿಗತ ಪ್ರತಿಷ್ಠೆಯ ವಿಷಯವಲ್ಲ. ಭಾರತದ ಯುವ ಶಕ್ತಿಯೇ ಈ ದೇಶದ ನಿಜವಾದ ಶಕ್ತಿ,” ಎಂದು ಪ್ರಧಾನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ