ವಿಡಿಯೊ | ಆನೇಕಲ್‌ ; ಧಗಧಗನೆ ಹೊತ್ತಿ ಉರಿದ 4 ಖಾಸಗಿ ಬಸ್‌ಗಳು

ಬೆಂಗಳೂರು : ಆನೇಕಲ್ ತಾಲೂಕಿನ ಹಳೆ ಚಂದಾಪುರದಲ್ಲಿರುವ ಪಾರ್ಕಿಂಗ್ ಯಾರ್ಡ್‌ನಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಅಗ್ನಿ ಅವಘಡದಲ್ಲಿ ನಾಲ್ಕು ಖಾಸಗಿ ಬಸ್‌ಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಅಪರಾಹ್ನ ಈ ಘಟನೆ ನಡೆದಿದೆ ಎನ್ನಲಾಗಿದೆ. ಪಾರ್ಕ್ ಮಾಡಲಾಗಿದ್ದ ಒಂದು ಬಸ್ಸಿನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ.  ಬಳಿಕ ಅದರ ಪಕ್ಕದಲ್ಲಿದ್ದ ಇನ್ನೂ ಮೂರು ಬಸ್‌ಗಳಿಗೆ  ವ್ಯಾಪಿಸಿದ್ದರಿಂದ ನಾಲ್ಕು ಬಸ್‌ಗಳು ಸುಟ್ಟು ಕರಕಲಾಗಿವೆ.
ಬಳ್ಳಾರಿಯಿಂದ ಬೆಳಿಗ್ಗೆ ಬೆಂಗಳೂರಿಗೆ ಬಂದಿದ್ದ ಒಂದು ಬಸ್ ಅನ್ನು ಪಾರ್ಕಿಂಗ್ ಯಾರ್ಡ್‌ನಲ್ಲಿ ನಿಲ್ಲಿಸಲಾಗಿತ್ತು. ಸಮೀಪದಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ಚಾಲಕ ಬಸ್‌ನ ಮಧ್ಯಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ನೋಡಿ ಸಮೀಪದಿಂದ ನೀರು ತಂದು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ಆದರೆ  ಬೆಂಕಿ ತೀವ್ರಗೊಂಡು ಪಕ್ಕದಲ್ಲಿದ್ದ ಬಸ್‌ಗಳಿಗೂ ಹರಡಿತು ಎಂದು ಹೇಳಲಾಗಿದೆ.  ತಕ್ಷಣವೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಅದೃಷ್ಟವಶಾತ್ ಘಟನೆಯ ಸಮಯದಲ್ಲಿ ಬಸ್‌ಗಳಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಬಸ್‌ಗಳು ಬೆಂಕಿಗೆ ಆಹುತಿಯಾಗಲು ನಿಖರವಾದ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್ ಅಥವಾ ಬೇರೆ ಯಾವುದಾದರೂ ಕಾರಣದಿಂದ ಈ ಅವಘಡ ಸಂಭವಿಸಿರಬಹುದೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement