ಚೆನ್ನೈ: ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆದ ಕರೂರು ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ 41 ಮಂದಿಯ ಕುಟುಂಬಗಳಿಗೆ ತಮಿಳುನಾಡು ಸರ್ಕಾರ ನೀಡಿದ್ದ ಅನುಕಂಪ ಆಧಾರಿತ ಸರ್ಕಾರಿ ಉದ್ಯೋಗದ ಆದೇಶವನ್ನು ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠ ಸೋಮವಾರ (ಜುಲೈ 27) ರದ್ದುಪಡಿಸಿದೆ.
ನ್ಯಾಯಮೂರ್ತಿಗಳಾದ ಸಿ.ವಿ. ಕಾರ್ತಿಕೇಯನ್ ಹಾಗೂ ಆರ್. ಶಕ್ತಿವೇಲ ಅವರ ವಿಭಾಗೀಯ ಪೀಠ, ಈ ನೇಮಕಾತಿಗಳು ಭಾರತ ಸಂವಿಧಾನದ 14 ಮತ್ತು 16ನೇ ವಿಧಿಗಳ ಉಲ್ಲಂಘನೆಯಾಗಿವೆ ಎಂದು ಹೇಳಿದೆ.
“ಪ್ರತಿ ಸರ್ಕಾರಿ ಇಲಾಖೆಯಲ್ಲೂ ಅನುಕಂಪ ನೇಮಕಾತಿಗಾಗಿ ಈಗಾಗಲೇ ಅನೇಕ ಕುಟುಂಬಗಳು ಕಾಯುವ ಪಟ್ಟಿಯಲ್ಲಿವೆ. ಕರೂರು ಘಟನೆಯ ಕುಟುಂಬಗಳಿಗೆ ನೆರವು ಎಂಬ ಹೆಸರಿನಲ್ಲಿ ಅವರಿಗೆ ಉದ್ಯೋಗ ನೀಡುವುದು, ವರ್ಷಗಳಿಂದ ಕಾಯುತ್ತಿರುವ ಇತರ ಅರ್ಹರ ಹಕ್ಕನ್ನು ಕಡೆಗಣಿಸುವಂತಾಗುತ್ತದೆ” ಎಂದು ನ್ಯಾಯಾಲಯ ಹೇಳಿತು.
ರಾಜ್ಯ ಸರ್ಕಾರವು ಸಂವಿಧಾನದ 162ನೇ ವಿಧಿಯಡಿ ತನ್ನ ಕಾರ್ಯಾಂಗ ಅಧಿಕಾರವನ್ನು ಬಳಸಿಕೊಂಡು ಆದೇಶ ಹೊರಡಿಸಲಾಗಿದೆ ಎಂದು ವಾದಿಸಿತ್ತು. ಆದರೆ, ನ್ಯಾಯಾಲಯ ಈ ವಾದವನ್ನು ತಳ್ಳಿಹಾಕಿ, ಕಾರ್ಯಾಂಗದ ಅಧಿಕಾರವನ್ನೂ ಸಂವಿಧಾನದ ಮಿತಿಯೊಳಗೆ ಮಾತ್ರ ಬಳಸಬೇಕು ಎಂದು ಸ್ಪಷ್ಟಪಡಿಸಿತು.
“ಕಾರ್ಯಾಂಗ ಅಧಿಕಾರದ ಬಳಕೆ ಸಂವಿಧಾನದ ಮಿತಿಯೊಳಗೇ ಇರಬೇಕು. ಕಾರ್ಯಾಂಗಕ್ಕೆ ನಿಯಂತ್ರಣವಿಲ್ಲದ ಅಧಿಕಾರ ನೀಡಿದರೆ ಅರಾಜಕತೆ ಉಂಟಾಗುತ್ತದೆ,” ಎಂದು ನ್ಯಾಯಾಲಯ ಹೇಳಿತು.
ಪ್ರಸ್ತುತ ಪ್ರಕರಣದಲ್ಲಿ ಅನುಕಂಪ ನೇಮಕಾತಿಗೆ ಅವಕಾಶ ನೀಡಿದರೆ, ಮುಂದೆ ಇತರ ಅನೇಕ ದುರಂತಗಳಲ್ಲೂ ಇದೇ ರೀತಿಯ ಬೇಡಿಕೆಗಳು ಬರುತ್ತವೆ. ಇಂತಹ ಎಲ್ಲ ಪ್ರಕರಣಗಳಲ್ಲೂ ಸರ್ಕಾರ ಉದ್ಯೋಗ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ,” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಪಟಾಕಿ ಕಾರ್ಖಾನೆ ಸ್ಫೋಟ, ರಸ್ತೆ ಅಪಘಾತಗಳು ಸೇರಿದಂತೆ ಸರ್ಕಾರದ ನಿರ್ಲಕ್ಷ್ಯದಿಂದ ಜೀವಹಾನಿಯಾಗುವ ಹಲವು ಘಟನೆಗಳಲ್ಲಿ ಇದುವರೆಗೆ ಸರ್ಕಾರ ಪರಿಹಾರಧನ (ಎಕ್ಸ್‌ಗ್ರೇಷಿಯಾ) ಮಾತ್ರ ನೀಡಿದೆ; ಅನುಕಂಪ ನೇಮಕಾತಿ ನೀಡಿಲ್ಲ ಎಂದು ಪೀಠ ಉಲ್ಲೇಖಿಸಿತು.
ಕೌಶಲ್ಯ ತರಬೇತಿ ನೀಡಬಹುದಿತ್ತು
ಮೃತರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡುವುದಕ್ಕಿಂತ ತಾಂತ್ರಿಕ ಕೌಶಲ್ಯ ಹಾಗೂ ಉದ್ಯಮಶೀಲತಾ ತರಬೇತಿ ನೀಡಿದ್ದರೆ ಹೆಚ್ಚು ಪ್ರಯೋಜನವಾಗುತ್ತಿತ್ತು ಎಂದು ನ್ಯಾಯಾಲಯ ಸಲಹೆ ನೀಡಿತು.
“ಅರ್ಹ ಕುಟುಂಬ ಸದಸ್ಯರಿಗೆ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ತರಬೇತಿ ನೀಡಬಹುದಿತ್ತು. ಹೀಗೆ ಮಾಡಿದರೆ ಸರ್ಕಾರ ನಾಯಕರು, ಉದ್ಯಮಿಗಳು ಹಾಗೂ ಸ್ವಾವಲಂಬಿ ವ್ಯಕ್ತಿಗಳನ್ನು ರೂಪಿಸಬಹುದಿತ್ತು. ಇಂತಹ ತಾಂತ್ರಿಕ ಶಿಕ್ಷಣದ ವೆಚ್ಚವನ್ನೂ ಸರ್ಕಾರವೇ ಭರಿಸಬಹುದು,” ಎಂದು ನ್ಯಾಯಾಲಯ ಹೇಳಿತು.


ನಿಮ್ಮ ಕಾಮೆಂಟ್ ಬರೆಯಿರಿ