ಬೆಂಗಳೂರು: ಕರ್ನಾಟಕದಲ್ಲಿ ಜುಲೈ 29, 30ರಂದು ರಾಜ್ಯಾದ್ಯಂತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಬುಧವಾರ (ಜುಲೈ 29) 3 ಜಿಲ್ಲೆಗೆ ಆರೆಂಜ್ ಅಲರ್ಟ್ , ಉಳಿದ 28 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು ಹವಾಮಾನ ಕೇಂದ್ರ ಬಿಡುಗಡೆ ಮಾಡಿರುವ ಮುನ್ಸೂಚನೆಯ ಪ್ರಕಾರ, ರಾಜ್ಯದಾದ್ಯಂತ ಮುಂದಿನ 4 ದಿನಗಳ ಕಾಲ ಮಳೆ ಹಾಗೂ ಬಲವಾದ ಗಾಳಿ ಮುಂದುವರಿಯಲಿದೆ. ಕರಾವಳಿ ಜಿಲ್ಲೆಗಳಿಗೆ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಕರಾವಳಿಯಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯೊಂದಿಗೆ ಬಲವಾದ ಗಾಳಿ ಬೀಸುವ ಮುನ್ಸೂಚನೆ ಇದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ಕಡಿಮೆ ಒತ್ತಡ ಮತ್ತು ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ತರಹದ ಪರಿಚಲನೆಯಿಂದಾಗಿ ಮಳೆಯಾಗುತ್ತಿದೆ.
ಬಳ್ಳಾರಿ, ಬೆಂಗಳೂರು (ಗ್ರಾಮಾಂತರ), ಬೆಂಗಳೂರು (ನಗರ), ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಬಿರುಗಾಳಿ ಬೀಸುವ ಮುನ್ಸೂಚನೆ ಇದೆ.
ಬೆಳಗಾವಿ, ಧಾರವಾಡ, ಗದಗ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್ ಸೇರಿದಂತೆ ಇಡೀ ಉತ್ತರ ಕರ್ನಾಟಕದ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇಲ್ಲೂ ಕೂಡ ಸಾಧಾರಣ ಮಳೆ ಹಾಗೂ ಗಾಳಿ ಬೀಸಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ