ಭೀಕರ ದುರಂತ: 6 ದಿನ ಸಾಹಸದಿಂದ ಜನರನ್ನು ರಂಜಿಸಿದ್ದ ವ್ಯಕ್ತಿ ‘ಜೀವಂತ ಸಮಾಧಿ’ ಸಾಹಸ ಪ್ರದರ್ಶನದಲ್ಲಿ ಸಾವು

ನೂಹ್ : ಸೈಕಲ್ ಸಾಹಸ ಪ್ರದರ್ಶನದಲ್ಲಿ ನಡೆದ ಅಪಾಯಕಾರಿ “ಜೀವಂತ ಸಮಾಧಿ” ಸಾಹಸ ಪ್ರದರ್ಶನ ದುರಂತದಲ್ಲಿ ಅಂತ್ಯಗೊಂಡಿದ್ದು, 27 ವರ್ಷದ ಸೈಕಲ್ ಸಾಹಸ ಕಲಾವಿದ ಮೃತಪಟ್ಟಿರುವ ಘಟನೆ ಹರಿಯಾಣದ ನೂಹ್ ಜಿಲ್ಲೆಯಲ್ಲಿ ನಡೆದಿದೆ.
ನೂಹ್ ಜಿಲ್ಲೆಯ ತೌರು (Taoru) ಉಪವಿಭಾಗದ ಖೋರಿ ಕಲಾನ್ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಸೈಕಲ್ ಸರ್ಕಸ್ ನಡೆಯುತ್ತಿತ್ತು. ಈ ಸರ್ಕಸ್‌ನಲ್ಲಿ ಭಾಗವಹಿಸಿದ್ದ 27 ವರ್ಷದ ದೀಪಕ ಅವರು ಫರಿದಾಬಾದ್ ಜಿಲ್ಲೆಯ ಗೌಂಚಿ ಗ್ರಾಮದ ನಿವಾಸಿಯಾಗಿದ್ದು, ಸರ್ಕಸ್ ಆಯೋಜಕರಲ್ಲೂ ಒಬ್ಬರಾಗಿದ್ದರು. ಅವರು ತಮ್ಮ ಅದ್ಭುತ ಸೈಕಲ್ ಸಾಹಸಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.
ಆರು ದಿನಗಳ ಕಾಲ ದೀಪಕ ಯಾವುದೇ ಅಪಾಯವಿಲ್ಲದೆ ಹಲವು ಸಾಹಸ ಪ್ರದರ್ಶನಗಳನ್ನು ಯಶಸ್ವಿಯಾಗಿ ನಡೆಸಿದ್ದರು. ಸರ್ಕಸ್‌ನ ಕೊನೆಯ ದಿನ ವಿಶೇಷ ಸಾಹಸ ಪ್ರದರ್ಶನ ಆಯೋಜಿಸಲಾಗಿತ್ತು. ದೀಪಕ ಅವರನ್ನು ಚೀಲವೊಂದರೊಳಗೆ ಹಾಕಿ, ಈ ಉದ್ದೇಶಕ್ಕಾಗಿಯೇ ತೋಡಿದ್ದ ಗುಂಡಿಯೊಳಗೆ ಇಳಿಸಿ ಮಣ್ಣಿನಿಂದ ಮುಚ್ಚಲಾಯಿತು. 24 ಗಂಟೆಗಳ ನಂತರ ಮಣ್ಣಿನಿಂದ ಮುಚ್ಚಿದ್ದ ಗುಂಡಿಯಿಂದ ಅವರನ್ನು ಜೀವಂತವಾಗಿ ಹೊರತೆಗೆದು ಪ್ರದರ್ಶನ ಪೂರ್ಣಗೊಳಿಸಲಾಗುವುದು ಎಂದು ಪ್ರೇಕ್ಷಕರಿಗೆ ತಿಳಿಸಿದ್ದರು.

ಪ್ರಮುಖ ಸುದ್ದಿ :-   ಸಿಜೆಪಿ ಪ್ರತಿಭಟನೆ | ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ಬಲವಂತದ ಕ್ರಮ ಬೇಡ ಎಂದ ಸುಪ್ರೀಂಕೋರ್ಟ್ ; ಅಪ್ರಾಪ್ತರ ತಕ್ಷಣ ಬಿಡುಗಡೆಗೆ ಸೂಚನೆ

ಆದರೆ, ಮಾತಿನಂತೆ 24 ಗಂಟೆಗಳಲ್ಲಿ ಅವರನ್ನು ಹೊರತೆಗೆದಿಲ್ಲ. ಪ್ರತ್ಯಕ್ಷದರ್ಶಿಗಳ ಪ್ರಕಾರ, ದೀಪಕ ಸುಮಾರು 36 ಗಂಟೆಗಳ ನಂತರ ಅವರನ್ನು ಮಣ್ಣಿನಡಿಯಿಂದ ಹೊರತೆಗೆದಾಗ ದೀಪಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದರು.
ಪ್ರತ್ಯಕ್ಷದರ್ಶಿಗಳ ಹೇಳಿಕೆಯಂತೆ, ₹7,100 ಸಂಗ್ರಹವಾಗುವವರೆಗೆ ದೀಪಕ ಅವರನ್ನು ಹೊರತೆಗೆದುವುದಿಲ್ಲ ಎಂದು ಪ್ರೇಕ್ಷಕರಿಗೆ ತಿಳಿಸಲಾಗಿತ್ತು. ಈ ಷರತ್ತಿನ ಕಾರಣದಿಂದಲೇ ರಕ್ಷಣಾ ಕಾರ್ಯ ವಿಳಂಬವಾಗಿದ್ದು, ನಿಗದಿತ ಸಮಯ ಮೀರಿ ಅವರನ್ನು ಅವರನ್ನು ಮಣ್ಣುಮುಚ್ಚಿದ ಹೊರತೆಗೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಗುಂಡಿಯನ್ನು ತೆರೆದಾಗ ದೀಪಕ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರು ದೀರ್ಘಕಾಲ ಮಣ್ಣಿನಡಿಯಲ್ಲಿ ಇದ್ದ ಪರಿಣಾಮ ಉಸಿರುಗಟ್ಟಿ ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ.

ಈ ಘಟನೆ ಸ್ಥಳೀಯರಲ್ಲಿ ಆಘಾತ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಸಾಹಸ ಪ್ರದರ್ಶನಗಳ ವೇಳೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು ಹಾಗೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವವರ ಹೊಣೆಗಾರಿಕೆ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಘಟನೆಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ದೀಪಕ ಅವರನ್ನು ನಿಗದಿತ ಸಮಯಕ್ಕೆ ಏಕೆ ಹೊರತೆಗೆದಿಲ್ಲ, ವಿಳಂಬಕ್ಕೆ ಯಾರು ಹೊಣೆ ಹಾಗೂ ಘಟನೆಗೆ ಕಾರಣವಾದ ಸಂದರ್ಭಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಜಿಲ್ಲಾ ಪೊಲೀಸ್ ವಕ್ತಾರ ಕೃಷ್ಣಕುಮಾರ ಅವರು ದೀಪಕ ಅವರ ಸಾವಿನ ಪ್ರಕರಣವನ್ನು ದೃಢಪಡಿಸಿದ್ದು, ಅಸಹಜ ಅಥವಾ ಅನುಮಾನಾಸ್ಪದ ಸಾವುಗಳಿಗೆ ಸಂಬಂಧಿಸಿದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಕಲಂ 174ರಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಅನಗತ್ಯ ವೆಚ್ಚ ಕಡಿವಾಣಕ್ಕೆ ಕೇಂದ್ರದ ಕ್ರಮ ; ಒಬ್ಬ ಅಧಿಕಾರಿ–ಒಂದು ಕಾರು' ನೀತಿ ಜಾರಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement