ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಎಫ್‌ಐಎಚ್ ಹಾಕಿ ವಿಶ್ವಕಪ್‌ನಲ್ಲಿ ಭಾರತ ಪುರುಷ ಹಾಗೂ ಮಹಿಳಾ ರಾಷ್ಟ್ರೀಯ ಹಾಕಿ ತಂಡಗಳು ಕೇಸರಿ ಬಣ್ಣದ ಜೆರ್ಸಿಗೆ ಬದಲಾವಣೆ ಮಾಡಿರುವುದನ್ನು ಹಾಕಿ ಇಂಡಿಯಾ ಸಂಸ್ಥೆ ಸಮರ್ಥಿಸಿಕೊಂಡಿದೆ. ಈ ನಿರ್ಧಾರವನ್ನು ಭಾರತದ ಮಾಜಿ ನಾಯಕ ವಿರೇನ್ ರಸ್ಕಿನ್ಹಾ ಟೀಕಿಸಿ, ಸಾಂಪ್ರದಾಯಿಕ ನೀಲಿ ಜೆರ್ಸಿಯನ್ನು ಕೈಬಿಡುವ ಅಗತ್ಯವೇನು ಎಂದು ಪ್ರಶ್ನಿಸಿದ ಬೆನ್ನಲ್ಲೇ ಹಾಕಿ ಇಂಡಿಯಾ ಸ್ಪಷ್ಟನೆ ನೀಡಿದೆ.
ಹಾಕಿ ಇಂಡಿಯಾ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಅನಾವರಣಗೊಳಿಸಿರುವ ಹೊಸ ಜೆರ್ಸಿಯು, ಆಗಸ್ಟ್ 15ರಿಂದ 30ರ ವರೆಗೆ ನೆದರ್‌ಲ್ಯಾಂಡ್ಸ್ ಮತ್ತು ಬೆಲ್ಜಿಯಂನಲ್ಲಿ ನಡೆಯಲಿರುವ ಎಫ್‌ಐಎಚ್ ಹಾಕಿ ವಿಶ್ವಕಪ್‌ನಲ್ಲಿ ಭಾರತದ ತಂಡಗಳ ಅಧಿಕೃತ ಪಂದ್ಯಗಳ ಉಡುಪಾಗಿರಲಿದೆ. ಇದುವರೆಗೆ ತಂಡದ ಗುರುತಾಗಿದ್ದ ಸಾಂಪ್ರದಾಯಿಕ ನೀಲಿ ಜೆರ್ಸಿಯ ಬದಲಿಗೆ ಈ ಬಾರಿ ಕೇಸರಿ ಬಣ್ಣದ ಜೆರ್ಸಿಯನ್ನು ಬಳಸಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಾಕಿ ಇಂಡಿಯಾ, ಜೆರ್ಸಿಯ ಬಣ್ಣ ಬದಲಾವಣೆ ಸಂಪೂರ್ಣವಾಗಿ ತಾಂತ್ರಿಕ ಅಗತ್ಯತೆಗಳ ಆಧಾರದ ಮೇಲೆ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿರುವ ನೀಲಿ ಬಣ್ಣದ ಸಿಂಥೆಟಿಕ್ ಹಾಕಿ ಮೈದಾನಗಳ ಹಿನ್ನೆಲೆಯಲ್ಲಿ, ನೀಲಿ ಜೆರ್ಸಿ ಧರಿಸಿದ ಆಟಗಾರರನ್ನು ಗುರುತಿಸುವುದು ಕಷ್ಟವಾಗುತ್ತಿದೆ ಎಂಬ ಅಭಿಪ್ರಾಯವನ್ನು ಆಟಗಾರರು ಹಾಗೂ ತರಬೇತುದಾರರು ವ್ಯಕ್ತಪಡಿಸಿದ್ದರು ಎಂದು ಸಂಸ್ಥೆ ಹೇಳಿದೆ. ಇದೇ ಕಾರಣದಿಂದ ಜೆರ್ಸಿಯ ಬಣ್ಣ ಬದಲಾವಣೆ ಮಾಡಬೇಕಾಯಿತು ಎಂದು ಸಂಸ್ಥೆ ವಿವರಿಸಿದೆ. ಸಂಸ್ಥೆಯ ಪ್ರಕಾರ, ಹೊಸ ಜೆರ್ಸಿಗೆ ಹಳದಿ ಹಾಗೂ ಕೇಸರಿ ಸೇರಿದಂತೆ ಹಲವು ಬಣ್ಣಗಳ ಆಯ್ಕೆಗಳನ್ನು ಪರಿಶೀಲಿಸಲಾಗಿತ್ತು. ಅಂತಿಮವಾಗಿ ಕೇಸರಿ ಬಣ್ಣವನ್ನು ಆಯ್ಕೆ ಮಾಡಲಾಗಿದ್ದು, ಇದು ಆಟಗಾರರ ಗೋಚರತೆಯನ್ನು ಹೆಚ್ಚಿಸುವುದರ ಜೊತೆಗೆ ಭಾರತದ ರಾಷ್ಟ್ರಧ್ವಜದ ಪ್ರಮುಖ ಬಣ್ಣಗಳಲ್ಲಿ ಒಂದಾಗಿರುವ ಕಾರಣ ಧೈರ್ಯ, ತ್ಯಾಗ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಪ್ರತಿನಿಧಿಸುತ್ತದೆ ಎಂದು ಹಾಕಿ ಇಂಡಿಯಾ ತಿಳಿಸಿದೆ.
ಹೊಸ ಜೆರ್ಸಿಯ ವಿನ್ಯಾಸದಲ್ಲಿಯೂ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಸ್ಪರ್ಶ ನೀಡಲಾಗಿದೆ. ಜೆರ್ಸಿಯಲ್ಲಿ ಮಂಡಲಾ ಶೈಲಿಯಿಂದ ಪ್ರೇರಿತವಾದ ವಿನ್ಯಾಸಗಳು, ಅಶೋಕ ಚಕ್ರವನ್ನು ಪ್ರತಿಬಿಂಬಿಸುವ ನೇವಿ ಬ್ಲೂ ಬಣ್ಣದ ಅಂಶಗಳು, ಹಾಗೂ ಸುದರ್ಶನ ಚಕ್ರದ ಸಮಕಾಲೀನ ರೂಪಾಂತರವನ್ನು ಆಧರಿಸಿದ ಎದೆಭಾಗದ ಗ್ರಾಫಿಕ್ ಅಳವಡಿಸಲಾಗಿದೆ. ಜೆರ್ಸಿಯ ಭುಜ ಹಾಗೂ ಬದಿಗಳಲ್ಲಿ ತ್ರಿವರ್ಣದ ಪಟ್ಟಿಗಳನ್ನು ನೀಡಲಾಗಿದ್ದು, ಮುಂಭಾಗದಲ್ಲಿ ‘ಇಂಡಿಯಾ’ ಎಂಬ ಹೆಸರನ್ನು ಶೈಲೀಕೃತ ದೇವನಾಗರಿ ಲಿಪಿಯಲ್ಲಿ ಮುದ್ರಿಸಲಾಗಿದೆ. ಇದೇ ವಿನ್ಯಾಸವನ್ನು ಹೊಂದಿರುವ ಬಿಳಿ ಬಣ್ಣದ ಜೆರ್ಸಿಯನ್ನೂ ತಂಡಗಳು ಬಳಸಲಿವೆ.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಭಾರತದ ಮಾಜಿ ನಾಯಕ ಹಾಗೂ ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿರೇನ್ ರಸ್ಕಿನ್ಹಾ, ಹೊಸ ಜೆರ್ಸಿ ತಂಡದ ದೀರ್ಘಕಾಲದ ಗುರುತಿಗೆ ಧಕ್ಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಪ್ರಕಟಿಸಿದ ತಮ್ಮ ಪೋಸ್ಟ್‌ನಲ್ಲಿ, ಹಾಕಿ ಇಂಡಿಯಾ ಇತ್ತೀಚಿನ ವರ್ಷಗಳಲ್ಲಿ ಸಾಧಿಸಿರುವ ಯಶಸ್ಸನ್ನು ಶ್ಲಾಘಿಸಿದ ಅವರು, ಹೊಸ ಜೆರ್ಸಿಯ ವಿನ್ಯಾಸವನ್ನು “ಮುಜುಗರ ಉಂಟುಮಾಡುವಂತದ್ದು” ಎಂದು ಬಣ್ಣಿಸಿದ್ದಾರೆ. ಭಾರತೀಯ ಹಾಕಿ ತಂಡದ ಐತಿಹಾಸಿಕ ಪರಂಪರೆ ಎಂದಿಗೂ ನೀಲಿ ಜೆರ್ಸಿಯೊಂದಿಗೇ ಗುರುತಿಸಿಕೊಂಡಿದೆ ಎಂದು ಹೇಳಿದ ಅವರು, ಅಭಿಮಾನಿಗಳು ತಂಡವನ್ನು ಅದೇ ಸಾಂಪ್ರದಾಯಿಕ ಬಣ್ಣದಲ್ಲೇ ನೋಡಲು ಬಯಸುತ್ತಾರೆ ಎಂದು ತಿಳಿಸಿದ್ದಾರೆ. ಅಲ್ಲದೆ, ಬಣ್ಣ ಬದಲಾವಣೆ ಮಾಡುವ ಅಗತ್ಯವೇನು ಎಂಬ ಪ್ರಶ್ನೆ ಎತ್ತಿದ್ದಾರೆ.
ರಸ್ಕಿನ್ಹಾ ಅವರ ಟೀಕೆಗೆ ಪ್ರತಿಕ್ರಿಯಿಸಿರುವ ಹಾಕಿ ಇಂಡಿಯಾ, ಇದು ಮೊದಲ ಬಾರಿಗೆ ನಡೆಯುತ್ತಿರುವ ಬದಲಾವಣೆ ಅಲ್ಲ ಎಂದು ಸ್ಪಷ್ಟಪಡಿಸಿದೆ. ಕಾರ್ಯನಿರ್ವಹಣೆಯ ಅಗತ್ಯತೆಗಳಿಗೆ ಅನುಗುಣವಾಗಿ ಈ ಹಿಂದೆ ಕೂಡ ರಾಷ್ಟ್ರೀಯ ತಂಡದ ಜೆರ್ಸಿಯ ಬಣ್ಣವನ್ನು ಬದಲಾಯಿಸಲಾಗಿತ್ತು ಎಂದು ಸಂಸ್ಥೆ ನೆನಪಿಸಿದೆ.
2014ರ ಎಫ್‌ಐಎಚ್ ಹಾಕಿ ವಿಶ್ವಕಪ್‌ನಲ್ಲಿ ಭಾರತ ತಂಡ ಹಳದಿ ಬಣ್ಣದ ಜೆರ್ಸಿ ಧರಿಸಿತ್ತು. ಅದೇ ರೀತಿ 2018ರ ವಿಶ್ವಕಪ್‌ನಲ್ಲಿ ವಿಭಿನ್ನ ವಿನ್ಯಾಸದ ಆಕಾಶ ನೀಲಿ (ಸ್ಕೈ ಬ್ಲೂ) ಬಣ್ಣದ ಜೆರ್ಸಿಯನ್ನು ಬಳಸಲಾಗಿತ್ತು ಎಂದು ಹಾಕಿ ಇಂಡಿಯಾ ತಿಳಿಸಿದೆ.
ಪ್ರಸ್ತುತ ಕೇಸರಿ ಜೆರ್ಸಿಯ ಆಯ್ಕೆಯು ಆಟದ ತಾಂತ್ರಿಕ ಅಗತ್ಯತೆಗಳನ್ನು ಪೂರೈಸುವುದರ ಜೊತೆಗೆ ರಾಷ್ಟ್ರಧ್ವಜದ ಪ್ರಮುಖ ಬಣ್ಣವಾಗಿರುವ ಕೇಸರಿಯ ಸಾಂಕೇತಿಕ ಮಹತ್ವವನ್ನೂ ಪ್ರತಿಬಿಂಬಿಸುತ್ತದೆ ಎಂದು ಹಾಕಿ ಇಂಡಿಯಾ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ