ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಆಗಸ್ಟ್‌ 13ರಂದು ಅಖಂಡ ಕರ್ನಾಟಕ ಬಂದ್‌

ಬೆಂಗಳೂರು : ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ(CWMA)ವು ಕರ್ನಾಟಕದಿಂದ ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್‌ ನೀರು ಬಿಡುಗಡೆ ಮಾಡಬೇಕು ಎಂದು ನೀಡಿರುವ ನಿರ್ದೇಶನವನ್ನು ಖಂಡಿಸಿ, ರಾಜ್ಯದ ವಿವಿಧ ಕನ್ನಡಪರ ಸಂಘಟನೆಗಳು ಆಗಸ್ಟ್‌ 13ರಂದು ರಾಜ್ಯವ್ಯಾಪಿ ಕರ್ನಾಟಕ ಬಂದ್‌ಗೆ ಕರೆ ನೀಡಿವೆ.
ಈ ಕುರಿತು ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಾಳ ನಾಗರಾಜ, ತಮ್ಮ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವ ವಿಚಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಲಾಗಿದ್ದು, ಮುಂದಿನ ಹೋರಾಟದ ರೂಪುರೇಷೆಗಳನ್ನು ಚರ್ಚಿಸಲಾಗಿದೆ ಎಂದು ತಿಳಿಸಿದರು.
ಆಗಸ್ಟ್‌ 13ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಕರ್ನಾಟಕ ಬಂದ್‌ ನಡೆಯಲಿದ್ದು, ರಾಜ್ಯದ ಜನತೆ ಸಂಪೂರ್ಣ ಸಹಕಾರ ನೀಡಿ ಬಂದ್‌ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

“ಬೆಳಗಾವಿಯಿಂದ ಚಾಮರಾಜನಗರದವರೆಗೆ ಎಲ್ಲರೂ ಒಂದಾಗಿ ಕರ್ನಾಟಕ ಬಂದ್‌ ಅನ್ನು ಭರ್ಜರಿಯಾಗಿ ಯಶಸ್ವಿಗೊಳಿಸೋಣ” ಎಂದು ವಾಟಾಳ ನಾಗರಾಜ ಕರೆ ನೀಡಿದರು.ಕಾವೇರಿ ನೀರಿನ ವಿಚಾರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ಎಲ್ಲ ರಾಜಕೀಯ ಪಕ್ಷಗಳ ವಿರುದ್ಧವೂ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮುಂಗಾರು ಕೊರತೆಯಿಂದ ಜಲಾಶಯಗಳಿಗೆ ಸಮರ್ಪಕ ನೀರಿನ ಹರಿವು ಇಲ್ಲದಿರುವುದು, ಕುಡಿಯುವ ನೀರು ಹಾಗೂ ನೀರಾವರಿಗೆ ತೊಂದರೆಯಾಗಬಹುದು ಎಂಬ ಆತಂಕದ ನಡುವೆ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ರೈತರು ಹಾಗೂ ಕನ್ನಡಪರ ಸಂಘಟನೆಗಳು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಂದ್‌ಗೆ ಕರೆ ನೀಡಲಾಗಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA)ವು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಶಿಫಾರಸಿನಂತೆ ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕು ಎಂಬ ಶಿಫಾರಸ್ಸನ್ನು ಎತ್ತಿಹಿಡಿದಿದೆ.
ಸಿಡಬ್ಲ್ಯುಎಂಎ (CWMA) ನಿರ್ದೇಶನವನ್ನು ಕಾನೂನುಬದ್ಧವಾಗಿ ಪ್ರಶ್ನಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.

ಪ್ರಮುಖ ಸುದ್ದಿ :-   ಕಾವೇರಿ ವಿವಾದ: ಕರ್ನಾಟಕದ ಮನವಿ ತಿರಸ್ಕರಿಸಿದ ಸಿಡಬ್ಲ್ಯೂಎಂಎ; ತಮಿಳುನಾಡಿಗೆ ನೀರು ಬಿಡುಗಡೆಗೆ ಆದೇಶ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement