ಬೆಂಗಳೂರು | ಮಗಳ ತಿಂಗಳ ಸಂಬಳ, ಭಾವಿ ವರನ ಬಳಿ ₹40 ಲಕ್ಷ ಡಿಮ್ಯಾಂಡ್‌ : ಒಪ್ಪದ್ದಕ್ಕೆ ಮಗಳಿಗೆ ಚಾಕುವಿನಿಂದ ಇರಿದ ತಂದೆ !

ಬೆಂಗಳೂರು: ತಂದೆಯೊಬ್ಬ ತನ್ನ ಮಗಳು ಉತ್ತಮ ಶಿಕ್ಷಣ ಪಡೆದು, ಉತ್ತಮ ಉದ್ಯೋಗ ಮಾಡಿ, ಜೀವನದಲ್ಲಿ ನೆಲೆ ನಿಲ್ಲಬೇಕು ಎಂಬ ಕನಸು ಕಾಣುವುದು ಸಾಮಾನ್ಯ. ಆದರೆ ಕುಟುಂಬದೊಳಗಿನ ಭಿನ್ನಾಭಿಪ್ರಾಯವು ಭೀಕರ ತಿರುವು ಪಡೆದು, ತಂದೆಯೇ ತನ್ನ ಮಗಳ ಮೇಲೆ ಕಾಲೇಜಿನ ಆವರಣದಲ್ಲೇ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜುಲೈ 25ರಂದು ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮೀ ದುರ್ಗಾ ಅವರ ಮೇಲೆ ಅವರ ತಂದೆ ನಾಗೇಂದ್ರನೇ ಚಾಕುವಿನಿಂದ ಹಲ್ಲೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಲಕ್ಷ್ಮೀ ದುರ್ಗಾ ಅವರು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ನಾಗೇಂದ್ರ ಕಾಲೇಜಿಗೆ ಆಗಮಿಸಿ, ತನ್ನ ಮಗಳನ್ನು ಭೇಟಿ ಮಾಡಬೇಕೆಂದು ಸಿಬ್ಬಂದಿಗೆ ತಿಳಿಸಿದ್ದಾನೆ. ಬಳಿಕ ಆತನಿಗೆ ವಿಭಾಗದ ಮುಖ್ಯಸ್ಥರ (HOD) ಕೊಠಡಿಗೆ ಹೋಗಲು ಅವಕಾಶ ನೀಡಲಾಯಿತು. ಲಕ್ಷ್ಮಿ ದುರ್ಗಾ ಅವರನ್ನು ಭೇಟಿ ಮಾಡಲು ಅನುಮತಿ ಕೇಳಿದ್ದು ಸಾಮಾನ್ಯ ಕುಟುಂಬ ಭೇಟಿ ಎಂದು ಅವರು ನಂಬಿದ್ದರು. ಅಲ್ಲಿ ಲಕ್ಷ್ಮೀ ದುರ್ಗಾ ಇದ್ದರು. ಕೊಠಡಿಗೆ ಪ್ರವೇಶಿಸಿದ ತಕ್ಷಣ ನಾಗೇಂದ್ರ ತನ್ನ ಬಳಿ ತಂದಿದ್ದ ಚಾಕುವಿನಿಂದ ಮಗಳ ಹೊಟ್ಟೆ, ಎದೆ ಹಾಗೂ ಕುತ್ತಿಗೆ ಭಾಗಗಳಿಗೆ ಹಲವು ಬಾರಿ ಇರಿದು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಈ ಕೃತ್ಯವು ದೀರ್ಘಕಾಲದ ಕುಟುಂಬ ಕಲಹದ ಪರಿಣಾಮ ಎಂಬುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕಾವೇರಿ ವಿವಾದ: ಕರ್ನಾಟಕದ ಮನವಿ ತಿರಸ್ಕರಿಸಿದ ಸಿಡಬ್ಲ್ಯೂಎಂಎ; ತಮಿಳುನಾಡಿಗೆ ನೀರು ಬಿಡುಗಡೆಗೆ ಆದೇಶ

ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿರುವ ನಾಗೇಂದ್ರ, ತನ್ನ ಮಗಳಿಗೆ ಮದುವೆ ಮಾಡಲು ವರನನ್ನು ಹುಡುಕುತ್ತಿದ್ದು, ಒಂದು ಕುಟುಂಬ ಮದುವೆ ಸಂಬಂಧಕ್ಕೆ ಒಪ್ಪಿಗೆ ಸೂಚಿಸಿದ ಬಳಿಕ, ಮಗಳ ಶಿಕ್ಷಣ ಮತ್ತು ವೃತ್ತಿಜೀವನಕ್ಕಾಗಿ ತಾನು ಹೆಚ್ಚಿನ ಹಣ ಖರ್ಚು ಮಾಡಿದ್ದೇನೆ ಎಂದು ಹೇಳಿ, ವರನ ಕಡೆಯವರ ಬಳಿ ತನಗೆ ₹40 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಲಕ್ಷ್ಮೀ ದುರ್ಗಾ ಅವರ ತಿಂಗಳ ಸಂಬಳವನ್ನೂ ತನಗೆ ನೀಡಬೇಕು ಎಂದು ನಾಗೇಂದ್ರ ಒತ್ತಾಯಿಸಿದ್ದಾನೆ ಎನ್ನಲಾಗಿದೆ. ಈ ಹಣದ ಬೇಡಿಕೆಗಳಿಗೆ ನಾಗೇಂದ್ರನ ಪತ್ನಿ ಹಾಗೂ ಮಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರವಾಗಿ ಕುಟುಂಬದಲ್ಲಿ ಪದೇ ಪದೇ ವಾಗ್ವಾದಗಳು ನಡೆದು ಸಂಬಂಧಗಳು ಹದಗೆಟ್ಟಿದ್ದವು. ಇದರಿಂದ ಕುಪಿತಗೊಂಡಿದ್ದ ನಾಗೇಂದ್ರ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಳಿಕ ಆರೋಪಿಯ ವಿರುದ್ಧ ಸಂಬಂಧಿತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಗೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಪ್ರಮುಖ ಸುದ್ದಿ :-   ಮತದಾರರ ಪಟ್ಟಿಯಲ್ಲಿ ಬಾಂಗ್ಲಾದೇಶಿಗರ ಹೆಸರು ಸೇರಿಸಲು ನಿರಾಕರಿಸಿದ್ದಕ್ಕೆ ಬೆಂಗಳೂರಲ್ಲಿ ಅಧಿಕಾರಿ ಮೇಲೆ ಹಲ್ಲೆ ; ಬಿಜೆಪಿ ಆರೋಪ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement