‘ಇದು ನನ್ನ ಮೊದಲ ಮತ್ತು ಕೊನೆಯ ತಪ್ಪು’ : ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿದ್ದ 15 ವರ್ಷದ ಬಾಲಕಿಯ ಕ್ಷಮೆಯಾಚನೆ

ನವದೆಹಲಿ: ಜುಲೈ 23ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ (Cockroach Janta Party – CJP) ಆಯೋಜಿಸಿದ್ದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಕೂಗಿದ ಆರೋಪ ಎದುರಿಸುತ್ತಿರುವ 15 ವರ್ಷದ ಬಾಲಕಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾಳೆ. ಆಕೆಯ ಕ್ಷಮೆಯಾಚನೆ ವಿಡಿಯೊ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೊದಲ್ಲಿ ತಾನು 15 ವರ್ಷದವಳಾಗಿದ್ದು, ದೆಹಲಿಯ ಕನಾಟ್ ಪ್ಲೇಸ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾಗ ಅಲ್ಲಿದ್ದ ಕೆಲವರ ಪ್ರಭಾವಕ್ಕೆ ಒಳಗಾಗಿ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಕೂಗಿದ್ದಾಗಿ ಬಾಲಕಿ ಒಪ್ಪಿಕೊಂಡಿದ್ದಾಳೆ.
“ನಾನು ನನ್ನ ಸ್ನೇಹಿತರೊಂದಿಗೆ ಕನಾಟ್ ಪ್ಲೇಸ್‌ಗೆ ಹೋಗಿದ್ದೆ. ಅಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಅಲ್ಲಿ ಗುಂಪಿನ ಹಲವರು ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಕೂಗುತ್ತಿದ್ದರು. ಅವರ ಪ್ರಭಾವಕ್ಕೆ ಒಳಗಾಗಿ ನಾನೂ ಪ್ರಧಾನಿಯವರ ವಿರುದ್ಧ ಅನೇಕ ಅನುಚಿತ ಮಾತುಗಳನ್ನು ಆಡಿದೆ. ನನಗೆ ಕೇವಲ 15 ವರ್ಷ. ನಾನು ಮಾಡಿದ್ದು ತಪ್ಪು ಎಂದು ಆಕೆ ಹೇಳಿದ್ದಾಳೆ.
 “ಇದು ನನ್ನ ಜೀವನದ ಮೊದಲ ಹಾಗೂ ಕೊನೆಯ ತಪ್ಪು. ಇನ್ನು ಮುಂದೆ ಇಂತಹ ಮಾತುಗಳನ್ನು ಹೇಳುವುದಾಗಲಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದಾಗಲಿ ಮಾಡುವುದಿಲ್ಲ. ಇಡೀ ದೇಶದ ಮುಂದೆ ನಾನು ಕ್ಷಮೆ ಕೇಳುತ್ತೇನೆ. ನನಗೆ ತುಂಬಾ ನಾಚಿಕೆಯಾಗಿದೆ. ಯಾರ ಕಣ್ಣಲ್ಲೂ ಕಣ್ಣಿಟ್ಟು ನೋಡಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ,” ಎಂದು ಮನವಿ ಮಾಡಿಕೊಂಡಿದ್ದಾಳೆ.
‘ನನ್ನನ್ನು ನಿಂದಿಸಿದ ಯುವಕರನ್ನು ಕ್ಷಮಿಸುತ್ತೇನೆ’: ಪ್ರಧಾನಿ ಮೋದಿ
ಈ ಕ್ಷಮೆಯಾಚನೆ ವಿಡಿಯೊ ವೈರಲ್ ಆಗುವ ಕೆಲವೇ ಗಂಟೆಗಳ ಮೊದಲು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಸಂದೇಶವೊಂದನ್ನು ಹಂಚಿಕೊಂಡು, ಜಂತರ್ ಮಂತರ್ ಪ್ರತಿಭಟನೆಯಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳನ್ನು ತಾವು ಕ್ಷಮಿಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಯುವಕರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸುವ ಬದಲು ಸಮಾಜವು ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕೆಂದು ಮನವಿ ಮಾಡಿದ್ದಾರೆ.
“ಜಂತರ್ ಮಂತರ್‌ನಲ್ಲಿ ನಡೆದ ಘಟನೆ ದೇಶ ಮಾತ್ರವಲ್ಲ, ಇಡೀ ವಿಶ್ವವೇ ನೋಡಿದೆ. ಕೆಲವು ದಾರಿ ತಪ್ಪಿದ ಯುವಕರು ಯಾವುದೇ ಸಭ್ಯ ಸಮಾಜ ಒಪ್ಪಿಕೊಳ್ಳದಂತಹ ಅತ್ಯಂತ ಅವಹೇಳನಕಾರಿ ಪದಗಳನ್ನು ಬಳಸಿದರು. ಅವರು ನನ್ನನ್ನು ಮಾತ್ರವಲ್ಲ, ನನ್ನ ದಿವಂಗತ ತಾಯಿಯನ್ನೂ ನಿಂದಿಸಿದರು” ಎಂದು ಪ್ರಧಾನಿ ಮೋದಿ ಹೇಳಿದರು.
“ಬಾಲ್ಯ ಮತ್ತು ಯೌವನದಲ್ಲಿ ತಪ್ಪುಗಳು ಆಗುವುದು ಸಹಜ. ಅದೇ ಜೀವನದ ಕಲಿಕೆಯ ಹಂತ. ಅವರು ಯಾವ ಮನಸ್ಥಿತಿಯಲ್ಲಿ ಇದ್ದರು ಎಂಬುದು ನನಗೆ ಗೊತ್ತಿಲ್ಲ. ಆದರೆ ನಾನು ಅವರನ್ನು ಕ್ಷಮಿಸಲು ಬಯಸುತ್ತೇನೆ. ಸಮಾಜವೂ ನನ್ನ ಮನವಿಯನ್ನು ಸ್ವೀಕರಿಸಬೇಕು,” ಎಂದು ಹೇಳಿದರು.
ಇದೇ ವೇಳೆ ಅವರು, “ಕೆಲವೊಮ್ಮೆ ನಮ್ಮ ನಾಲಿಗೆ ಹಲ್ಲಿನ ಮಧ್ಯೆ ಸಿಲುಕಿ ಗಾಯವಾಗಬಹುದು. ಅದಕ್ಕಾಗಿ ನಾವು ನಮ್ಮ ಹಲ್ಲುಗಳನ್ನು ಮುರಿಯುವುದಿಲ್ಲ. ಏಕೆಂದರೆ ಹಲ್ಲುಗಳೂ ನಮ್ಮದೇ, ನಾಲಿಗೆಯೂ ನಮ್ಮದೇ. ಅದೇ ರೀತಿ ಈ ಮಕ್ಕಳು ಕೂಡ ನಮ್ಮವರೇ. ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವುದು ನಮ್ಮ ಕರ್ತವ್ಯ. ಅವರನ್ನು ನ್ಯಾಯಾಲಯದ ಪ್ರಕರಣಗಳಲ್ಲಿ ಸಿಲುಕಿಸುವುದು ಅಥವಾ ಅವರ ಕುಟುಂಬವನ್ನು ಕಿರುಕುಳ ನೀಡುವುದು ಸಮಸ್ಯೆಗೆ ಪರಿಹಾರವಲ್ಲ” ಎಂದು ಹೇಳಿದ್ದಾರೆ.
https://x.com/JAMMULINKS/status/2083423094698541436
ಬಾಲಕಿ ವಿರುದ್ಧ ಜೀರೋ ಎಫ್‌ಐಆರ್ ದಾಖಲು
ಜುಲೈ 23ರಂದು ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಕೂಗಿದ ಆರೋಪದ ಹಿನ್ನೆಲೆಯಲ್ಲಿ, ಜುಲೈ 29ರಂದು ಉತ್ತರ ಪ್ರದೇಶದ ನೋಯ್ಡಾ ಎಕ್ಸ್‌ಪ್ರೆಸ್‌ವೇ ಪೊಲೀಸ್ ಠಾಣೆಯಲ್ಲಿ ಬಾಲಕಿಯ ವಿರುದ್ಧ ಜೀರೋ ಎಫ್‌ಐಆರ್ (Zero FIR) ದಾಖಲಿಸಲಾಗಿತ್ತು.
ಬಳಿಕ ಪ್ರಕರಣವನ್ನು ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ಇದೀಗ ಅಲ್ಲಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
 ಬಾಲಕಿಯು ಪ್ರಧಾನಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ಸಂವಿಧಾನಾತ್ಮಕ ಹುದ್ದೆಯ ಘನತೆಗೆ ಧಕ್ಕೆ ಉಂಟುಮಾಡಿದ್ದಾಳೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಉದ್ದೇಶದಿಂದ ದ್ವೇಷವನ್ನು ಪ್ರಚೋದಿಸಲು ಯತ್ನಿಸಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಆರೋಪಗಳ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (Bharatiya Nyaya Sanhita – BNS)ಯ 352, 353(1) ಮತ್ತು 356(1)ನೇ ಕಲಂಗಳು ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನೋಯ್ಡಾ ನಿವಾಸದಲ್ಲಿ ಬಾಲಕಿ ಪತ್ತೆಯಾಗಿಲ್ಲ
ವರದಿಗಳ ಪ್ರಕಾರ, ಬಾಲಕಿ ತನ್ನ ತಾಯಿಯೊಂದಿಗೆ ನೋಯ್ಡಾದ ವಸತಿ ಸಮುಚ್ಚಯವೊಂದರಲ್ಲಿ ವಾಸಿಸುತ್ತಿದ್ದಾಳೆ. ಆದರೆ ಪ್ರತಿಭಟನೆಯ ನಂತರ ಆಕೆ ಮನೆಗೆ ಬಂದಿಲ್ಲ ಎಂದು ಅಲ್ಲಿನ ಭದ್ರತಾ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ. ಬಾಲಕಿ ವಾಸಿಸುತ್ತಿದ್ದ ಫ್ಲಾಟ್‌ಗೆ ಬೀಗ ಹಾಕಲಾಗಿದ್ದು, ಜಂತರ್ ಮಂತರ್ ಪ್ರತಿಭಟನೆಯ ಬಳಿಕ ಆಕೆಯನ್ನು ಯಾರೂ ನೋಡಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಎಫ್‌ಐಆರ್‌ಗೆ ಸಿಜೆಪಿ ಆಕ್ಷೇಪ
ಪ್ರತಿಭಟನೆ ಆಯೋಜಿಸಿದ್ದ ಕಾಕ್ರೋಚ್‌ ಜನತಾ ಪಾರ್ಟಿ (CJP) ಬಾಲಕಿಯ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಪಕ್ಷದ ವಕ್ತಾರ ಸೌರವ ದಾಸ್ ಮಾತನಾಡಿ, “ಆಕ್ಷೇಪಾರ್ಹ ಅಥವಾ ಅವಹೇಳನಕಾರಿ ಭಾಷೆಯನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲಾಗುವುದಿಲ್ಲ. ಆದರೆ ಇಂತಹ ಹೇಳಿಕೆಗಳಿಗಾಗಿ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದರಿಂದ ಜನರು ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಬಹುದು,” ಎಂದು ಹೇಳಿದ್ದಾರೆ.
ಅಲ್ಲದೆ, ಯಾರಿಗಾದರೂ ತಮ್ಮ ಮಾನಹಾನಿಯಾಗಿದೆ ಎಂದು ಭಾವಿಸಿದರೆ ಕ್ರಿಮಿನಲ್ ಪ್ರಕರಣಗಳ ಬದಲು ಮಾನಹಾನಿ (Defamation) ಮೊಕದ್ದಮೆ ಹೂಡುವಂತಹ ಕಾನೂನು ಮಾರ್ಗವನ್ನು ಅನುಸರಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement