ನವದೆಹಲಿ: ದೇಶದ ನೈಋತ್ಯ ಮುಂಗಾರು ಆಗಸ್ಟ್ ಮೊದಲಾರ್ಧದಲ್ಲಿ ಮತ್ತಷ್ಟು ಬಲಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಕಳೆದ ಕೆಲವು ವಾರಗಳಿಂದ ದೇಶದ ಹಲವು ಭಾಗಗಳಲ್ಲಿ ಮಳೆ ಕೊರತೆ ಕಂಡುಬಂದಿದ್ದರೂ, ಮುಂಗಾರು ಮತ್ತೆ ಚುರುಕುಗೊಂಡಿರುವುದರಿಂದ ಪರಿಸ್ಥಿತಿ ವೇಗವಾಗಿ ಸುಧಾರಿಸುತ್ತಿದೆ. ಇದರ ಪರಿಣಾಮವಾಗಿ ದಕ್ಷಿಣ ಭಾರತ ಸೇರಿದಂತೆ ದೇಶದ ಬಹುತೇಕ ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ.
ಗುಜರಾತ್‌ನಲ್ಲಿ ಮತ್ತೊಮ್ಮೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ಪೂರ್ವ ರಾಜಸ್ಥಾನ, ಕರ್ನಾಟಕ-ಗೋವಾ-ಮಹಾರಾಷ್ಟ್ರ ಒಳಗೊಂಡ ಕೊಂಕಣ ಕರಾವಳಿ, ಮಹಾರಾಷ್ಟ್ರದ ಹಲವು ಭಾಗಗಳು, ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಕೆಲವು ಪ್ರದೇಶಗಳಲ್ಲಿ ಭಾರಿಯಿಂದ ಅತಿ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಇದೇ ವೇಳೆ ಹರಿಯಾಣ, ದೆಹಲಿ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ರಾಜಸ್ಥಾನ, ಬಿಹಾರ, ಅರುಣಾಚಲ ಪ್ರದೇಶ, ಅಸ್ಸಾಂ-ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಉಪ-ಹಿಮಾಲಯ ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಲಕ್ಷದ್ವೀಪದ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಐಎಂಡಿ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ದೇಶದ ಒಟ್ಟಾರೆ ಮುಂಗಾರು ಮಳೆ ಕೊರತೆ ಈಗ 14 ಶೇಕಡಕ್ಕೆ ಇಳಿದಿದೆ. ಆದರೆ ಮಳೆ ಹೆಚ್ಚಿನ ಭಾಗಗಳಲ್ಲಿ ಸಮರ್ಪವಾಗಿ ಹಂಚಿಕೆಯಾಗಿಲ್ಲ. ಕೆಲವಡೆ ಉತ್ತಮ ಮಳೆಯಾಗಿದ್ದರೆ ಹಲವೆಡೆ ಇನ್ನೂ ಮಳೆಯ ಕೊರತೆಯಿದೆ. ಋತುವಿನ ಆರಂಭದಲ್ಲಿ ದಾಖಲಾಗಿದ್ದ ಹೆಚ್ಚಿನ ಮಳೆ ಕೊರತೆಯೊಂದಿಗೆ ಹೋಲಿಸಿದರೆ ಗಮನಾರ್ಹ ಸುಧಾರಣೆಯಾಗಿದೆ.
ಮಹಾರಾಷ್ಟ್ರದ ಮೇಲಿನ ತೀವ್ರ ವಾಯುಭಾರ ಕುಸಿತದಿಂದ ಮುಂಗಾರಿಗೆ ಬಲ
ಹವಾಮಾನ ತಜ್ಞರ ಪ್ರಕಾರ, ಈ ಮುಂಗಾರು ಅವಧಿಯಲ್ಲೇ ಅತ್ಯಂತ ಪ್ರಬಲ ಹವಾಮಾನ ವ್ಯವಸ್ಥೆಯಾದ ತೀವ್ರ ವಾಯುಭಾರ ಕುಸಿತ (ಡೀಪ್ ಡಿಪ್ರೆಶನ್) ಮಹಾರಾಷ್ಟ್ರದ ಮೇಲೆ ಚಲಿಸುತ್ತಿದ್ದು, ಇದು ನೈಋತ್ಯ ಮುಂಗಾರಿಗೆ ಹೊಸ ಚೈತನ್ಯ ತುಂಬಿದೆ. ಮುಂಗಾರು ಟ್ರಫ್‌ನಲ್ಲಿ ರೂಪುಗೊಂಡಿರುವ ಈ ವ್ಯವಸ್ಥೆಯು ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಿಂದ ಅಪಾರ ಪ್ರಮಾಣದ ತೇವಾಂಶವನ್ನು ಸೆಳೆಯುತ್ತಿದೆ. ಜೊತೆಗೆ ಅರಬ್ಬಿ ಸಮುದ್ರದಿಂದ ಭಾರತೀಯ ಉಪಖಂಡದತ್ತ ತೇವಾಂಶವನ್ನು ಸಾಗಿಸುವ ಸೊಮಾಲಿ ಜೆಟ್ ಗಾಳಿಯ ಪ್ರವಾಹವೂ ಬಲಗೊಂಡಿರುವುದರಿಂದ ಮಳೆಯ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ತೀವ್ರ ವಾಯುಭಾರ ಕುಸಿತ, ಸಕ್ರಿಯ ಮುಂಗಾರು ಟ್ರಫ್ ಹಾಗೂ ಬಲಗೊಂಡ ಸೊಮಾಲಿ ಜೆಟ್‌ನ ಸಂಯೋಜಿತ ಪರಿಣಾಮದಿಂದ ಪಶ್ಚಿಮ ಮತ್ತು ಮಧ್ಯ ಭಾರತದಾದ್ಯಂತ ವ್ಯಾಪಕ ಹಾಗೂ ತೀವ್ರ ಮಳೆಯಾಗಲು ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ.
ಹಲವು ರಾಜ್ಯಗಳಲ್ಲಿ ಮಳೆ ಚುರುಕು
ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಢ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗಿದೆ. ಈ ಹವಾಮಾನ ವ್ಯವಸ್ಥೆ ಮುಂದಿನ ಕೆಲ ದಿನಗಳಲ್ಲಿ ಪಶ್ಚಿಮದತ್ತ ಚಲಿಸುವ ಸಾಧ್ಯತೆಯಿದೆ. ಐಎಂಡಿ ಮಳೆ ನಕ್ಷೆಗಳ ಪ್ರಕಾರ, ಮಧ್ಯ ಭಾರತ ಹಾಗೂ ವಾಯವ್ಯ ಭಾರತದಲ್ಲಿ ಮುಂಗಾರು ಮಳೆ ಈಗ ಸಾಮಾನ್ಯ ಮಟ್ಟ ತಲುಪಿದೆ. ಆದರೆ ದಕ್ಷಿಣ ಭಾರತ ಹಾಗೂ ಪೂರ್ವ ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಇನ್ನೂ ಮಳೆ ಕೊರತೆ ಮುಂದುವರಿದಿದೆ. ರಾಜ್ಯವಾರು ಅಂಕಿ-ಅಂಶಗಳ ಪ್ರಕಾರ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢ ರಾಜ್ಯಗಳಲ್ಲಿ ಕಳೆದ ಒಂದು ವಾರದಲ್ಲಿ ಮಳೆಯ ಪ್ರಮಾಣ ಗಮನಾರ್ಹವಾಗಿ ಹೆಚ್ಚಾಗಿದೆ.
ಆಗಸ್ಟ್‌ನಲ್ಲಿ ಇನ್ನಷ್ಟು ಚುರುಕಾಗುವ ಮುಂಗಾರು
ಆಗಸ್ಟ್ ಮೊದಲ ವಾರದಲ್ಲಿ ಬಂಗಾಳ ಕೊಲ್ಲಿಯಲ್ಲಿ ಹೊಸದಾಗಿ ಕಡಿಮೆ ಒತ್ತಡದ ಪ್ರದೇಶಗಳು ರೂಪುಗೊಳ್ಳುವ ಸಾಧ್ಯತೆಯಿದ್ದು, ಇದರಿಂದ ಮುಂಗಾರು ಇನ್ನಷ್ಟು ಸಕ್ರಿಯವಾಗಲಿದೆ. ಇದರ ಪರಿಣಾಮವಾಗಿ ಮಧ್ಯ, ಪಶ್ಚಿಮ ಹಾಗೂ ಉತ್ತರ ಭಾರತದ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ.
ದಕ್ಷಿಣ ಭಾರತದ ಹಲವೆಡೆ ಮಳೆಯ ಅಬ್ಬರ
ಮುಂಗಾರು ತನ್ನ ಅತ್ಯಂತ ಸಕ್ರಿಯ ಹಂತವನ್ನು ಪ್ರವೇಶಿಸಿರುವ ಹಿನ್ನೆಲೆಯಲ್ಲಿ, ದಕ್ಷಿಣ ಭಾರತದಲ್ಲಿ ಮುಂದಿನ ಕೆಲವು ದಿನಗಳವರೆಗೆ ವ್ಯಾಪಕದಿಂದ ಬಹುತೇಕ ವ್ಯಾಪಕ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.
ವಿಶೇಷವಾಗಿ ಕೇರಳ ಹಾಗೂ ಕರ್ನಾಟಕ ಕರಾವಳಿ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ದಕ್ಷಿಣ ಭಾರತದ ಕೇರಳ, ಕರಾವಳಿ ಕರ್ನಾಟಕ, ಒಳನಾಡು ಕರ್ನಾಟಕ, ತಮಿಳುನಾಡು ಹಾಗೂ ತೆಲಂಗಾಣದಲ್ಲಿ ಮುಂದಿನ ದಿನಗಳಲ್ಲಿ ವ್ಯಾಪಕ ಮಳೆಯಾಗಲಿದೆ, ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇದರ ಜೊತೆಗೆ ವಾಯವ್ಯ, ಪೂರ್ವ, ಈಶಾನ್ಯ ಹಾಗೂ ಪಶ್ಚಿಮ ಭಾರತದ ಬಹುತೇಕ ಭಾಗಗಳಲ್ಲಿಯೂ ಆಗಸ್ಟ್ ಮೊದಲ ವಾರದವರೆಗೆ ಉತ್ತಮ ಮಳೆಯಾಗಲಿದೆ.
ಉತ್ತರ ಮತ್ತು ಪೂರ್ವ ಭಾರತದಲ್ಲೂ ಮಳೆ ಹೆಚ್ಚಳ
ಹರಿಯಾಣ, ದೆಹಲಿ, ಪಂಜಾಬ್, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಆಗಾಗ ಮಳೆಯಾಗುವ ಸಾಧ್ಯತೆಯಿದೆ. ಬಿಹಾರ, ಒಡಿಶಾ ಹಾಗೂ ಉತ್ತರ ಪ್ರದೇಶಗಳಲ್ಲಿ ವಾರಾಂತ್ಯದಿಂದ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಪ್ರಸ್ತುತ ಮುಂಗಾರು ಟ್ರಫ್, ಪಶ್ಚಿಮ ಕರಾವಳಿಯಲ್ಲಿನ ಆಫ್‌ಶೋರ್ ಟ್ರಫ್ ಹಾಗೂ ಹೊಸ ಪಶ್ಚಿಮ ಹವಾಮಾನ ಅಡಚಣೆ (ವೆಸ್ಟರ್ನ್ ಡಿಸ್ಟರ್ಬನ್ಸ್) ಸೇರಿದಂತೆ ಹಲವು ಹವಾಮಾನ ವ್ಯವಸ್ಥೆಗಳು ಏಕಕಾಲದಲ್ಲಿ ಸಕ್ರಿಯವಾಗಿವೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿಯೂ ದೇಶದ ಬಹುತೇಕ ಭಾಗಗಳಲ್ಲಿ, ವಿಶೇಷವಾಗಿ ದಕ್ಷಿಣ ಭಾರತದಲ್ಲಿ, ಮುಂಗಾರು ಅನುಕೂಲಕರವಾಗಿ ಮುಂದುವರಿದು ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.
ಹವಾಮಾನ ತಜ್ಞರ ಪ್ರಕಾರ, ಜೂನ್ ಹಾಗೂ ಜುಲೈ ಆರಂಭದಲ್ಲಿ ಉಂಟಾಗಿದ್ದ ಮಳೆ ಕೊರತೆಯನ್ನು ಆಗಸ್ಟ್ ಮೊದಲಾರ್ಧದಲ್ಲಿ ಮುಂಗಾರು ಎಷ್ಟರ ಮಟ್ಟಿಗೆ ಸರಿದೂಗಿಸುತ್ತದೆ ಎಂಬುದನ್ನು ನಿರ್ಧರಿಸುವಲ್ಲಿ ಮುಂದಿನ ಎರಡು ವಾರಗಳು ಅತ್ಯಂತ ನಿರ್ಣಾಯಕವಾಗಲಿವೆ. ಈ ಪ್ರವೃತ್ತಿ ಮುಂದುವರಿದರೆ ದೇಶದ ಒಟ್ಟಾರೆ ಮಳೆ ಕೊರತೆ ಮತ್ತಷ್ಟು ಕಡಿಮೆಯಾಗಲಿದೆ. ಜಲಾಶಯಗಳ ನೀರಿನ ಸಂಗ್ರಹವೂ ಹೆಚ್ಚಲಿದ್ದು, ಖರೀಫ್ ಬೆಳೆಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ. ಇದರಿಂದ ಕೃಷಿ ಉತ್ಪಾದಕತೆ ಕುರಿತ ಆತಂಕವೂ ಕಡಿಮೆಯಾಗುವ ಸಾಧ್ಯತೆಯಿದೆ.


ನಿಮ್ಮ ಕಾಮೆಂಟ್ ಬರೆಯಿರಿ