‘ರಾಯರೇ ಆ ಹುಡುಗಿಯಿಂದ ನಮ್ಮನ್ನು ಕಾಪಾಡುʼ ; ರಾಘವೇಂದ್ರ ಮಠದ ಹುಂಡಿಯಲ್ಲಿ ವಿಚಿತ್ರ ಪತ್ರ ಪತ್ತೆ

ಬೆಳಗಾವಿ : ರಾಮದುರ್ಗ ಪಡಕೋಟಗಲ್ಲಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಕಾಣಿಕೆ ಹುಂಡಿಯಲ್ಲಿ ಪತ್ರವೊಂದು ಲಭಿಸಿದ್ದು ಅದರಲ್ಲಿ ರಾಯರೇ ಆ ಹುಡುಗಿಯಿಂದ ನಮ್ಮನ್ನು ಕಾಪಾಡು ಎಂದು ಪತ್ರ ಬರೆದು ಹಾಕಿ ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಇತ್ತೀಚಿಗೆ ಕಾಣಿಕೆ ಹುಂಡಿ ಎಣಿಕೆ ಮಾಡುವಾಗ ಈ ಪತ್ರ ಲಭಿಸಿದೆ. ಪತ್ರದಲ್ಲಿ ಶ್ರೀ ಗಣಪತಿಯೇ ನಮಃ, ರಾಘವೇಂದ್ರಾಯ ನಮಃ.. ರಾಯರೇ ನಮ್ಮನ್ನು ಆ ವಿಷದಿಂದ ಕಾಪಾಡು. ರಾಯರೇ ಆ ಹುಡುಗಿಯಿಂದ ನಮ್ಮನ್ನು ಕಾಪಾಡು. ರಾಯರಿದ್ದಾರೆ ನಮ್ಮ ಜೊತೆ. ಹೀಗಾಗಿ ಅವರಲ್ಲಿ ನನ್ನ ಕಷ್ಟವನ್ನು ಕೇಳಿಕೊಳ್ಳುತ್ತಿದ್ದೇನೆ. ಗುರುಗಳೇ ಕಾಪಾಡು, ಧನ್ಯವಾದಗಳು ಎಂದು ಬರೆಯಲಾಗಿದೆ.
ಪತ್ರ ಬರೆದ ವ್ಯಕ್ತಿಯ ಹೆಸರು, ವಿಳಾಸ ಮುಂತಾದ ಮಾಹಿತಿ ಬರೆದಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಠದ ಉತ್ಸವ ಕಮಿಟಿ ಗೌರವಾಧ್ಯಕ್ಷ ಪವನ್ ದೇಶಪಾಂಡೆ ಅವರು, ಪ್ರತಿ ಸಲದಂತೆ ನಾವು ಕಾಣಿಕೆ ಹುಂಡಿ ತೆಗೆದು ಎಣಿಕೆ ಆರಂಭಿಸಿದ್ದೆವು. ಆಗ ಈ ಪತ್ರ ಸಿಕ್ಕಿದ್ದು ಅಚ್ಚರಿ ತಂದಿದೆ. ಸಾಮಾನ್ಯವಾಗಿ ಭಕ್ತರು ದೇವರಲ್ಲಿ ಆರೋಗ್ಯ, ಐಶ್ವರ್ಯ, ನೆಮ್ಮದಿ ಕರುಣಿಸುವಂತೆ ಪ್ರಾರ್ಥನೆ ಮಾಡುತ್ತಾರೆ. ಆದರೆ ಈ ಪತ್ರ ವಿಚಿತ್ರವಾಗಿದೆ. ನಮ್ಮ ಮಠದಲ್ಲಿ ಸಿಕ್ಕಿರುವ ಇಂಥ ಬರವಣಿಗೆಯ ಮೊದಲ ಪತ್ರ ಇದು. ಇದನ್ನು ಬರೆದವರು ಯಾರು ಎಂದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement