ನವದೆಹಲಿ: 2004ರಲ್ಲಿ ನಡೆದ ಮಹಿಳೆ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಸುಮಾರು 22 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಒಡಿಶಾದ ವ್ಯಕ್ತಿಯನ್ನು, “ದುರ್ಬಲ ಹಾಗೂ ಅತ್ಯಂತ ಅವಿಶ್ವಾಸಾರ್ಹ” ಸಾಕ್ಷ್ಯಗಳ ಆಧಾರದ ಮೇಲೆ ಶಿಕ್ಷೆಗೆ ಗುರಿಪಡಿಸಲಾಗಿತ್ತು ಎಂದು ಹೇಳಿರುವ ಸುಪ್ರೀಂ ಕೋರ್ಟ್, ಆತನನ್ನು ಖುಲಾಸೆಗೊಳಿಸಿದೆ.
ಕೇವಲ ಅನುಮಾನದ ಆಧಾರದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿ, ಪೊಲೀಸ್ ಕಸ್ಟಡಿಯಲ್ಲಿ ಥರ್ಡ್ ಡಿಗ್ರಿ ಹಿಂಸೆ ನೀಡಿ ಒಪ್ಪಿಗೆ ಹೇಳಿಕೆ (Confession) ಪಡೆಯುವುದು, ವಿಚಾರಣಾ ನ್ಯಾಯಾಲಯವು ಸಾಕ್ಷ್ಯಗಳನ್ನು ಸಮರ್ಪಕವಾಗಿ ಮೌಲ್ಯಮಾಪನ ಮಾಡದೆ ತೀರ್ಪು ನೀಡುವುದು ಹಾಗೂ ಹೈಕೋರ್ಟ್ ಕೂಡ ಪ್ರಕರಣದ ಗಂಭೀರತೆಯನ್ನು ಪರಿಗಣಿಸದೆ ಮೌನ ಪ್ರೇಕ್ಷಕನಂತೆ ವರ್ತಿಸುವುದು ಸೇರಿದಂತೆ, ಈ ಪ್ರಕರಣವು ದೇಶದ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿನ ಬಹುಮುಖ ವೈಫಲ್ಯವನ್ನು ಬಯಲಿಗೆಳೆದಿದೆ ಎಂದು ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಒಡಿಶಾ ಹೈಕೋರ್ಟ್ ಆದೇಶವನ್ನು ರದ್ದುಪಡಿಸಿ ಆರೋಪಿಯನ್ನು ಖುಲಾಸೆಗೊಳಿಸುವ ವೇಳೆ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ. ತೀರ್ಪಿನ ಆರಂಭದಲ್ಲೇ ನ್ಯಾಯಾಲಯ ಈ ಪ್ರಕರಣದಲ್ಲಿ ಸಂಭವಿಸಿದ ಸಾಂಸ್ಥಿಕ ವೈಫಲ್ಯಗಳ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದೆ.
ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಯು ಜೈಲಿನಿಂದ ಸಲ್ಲಿಸಿದ್ದ ಮೇಲ್ಮನವಿಯಲ್ಲಿ 3,157 ದಿನಗಳ ವಿಳಂಬವಾಗಿತ್ತು. ಈ ವಿಳಂಬವನ್ನು ಮನ್ನಿಸದೆ ಒಡಿಶಾ ಹೈಕೋರ್ಟ್ ಮೇಲ್ಮನವಿಯನ್ನೇ ತಿರಸ್ಕರಿಸಿತ್ತು. ಆಗಲೇ ಆತ 12 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ. ಬಳಿಕ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವ ವೇಳೆಗೆ ಒಟ್ಟು 22 ವರ್ಷಗಳ ಸೆರೆವಾಸ ಅನುಭವಿಸಿದ್ದ.
“3,157 ದಿನಗಳ ವಿಳಂಬವನ್ನು ಮನ್ನಿಸದೆ ಜೀವಾವಧಿ ಶಿಕ್ಷೆಯ ವಿರುದ್ಧ ಸಲ್ಲಿಸಲಾಗಿದ್ದ ‘ಜೈಲ್ ಮೆಮೊ ಅಪೀಲ್’ ಅನ್ನು ತಿರಸ್ಕರಿಸಿದ ಹೈಕೋರ್ಟ್ ಆದೇಶ ನಮಗೆ ತೀವ್ರ ನಿರಾಶೆ ಹಾಗೂ ಆಘಾತ ಉಂಟುಮಾಡಿದೆ. ಆ ಆದೇಶ ಹೊರಬೀಳುವ ವೇಳೆಗೆ ಆರೋಪಿಯು ಈಗಾಗಲೇ 12 ವರ್ಷ ಜೈಲಿನಲ್ಲಿ ಕಳೆದಿದ್ದ. ಈಗ ಮತ್ತಷ್ಟು 10 ವರ್ಷ ಕಳೆದಿದ್ದು, ಒಟ್ಟು 22 ವರ್ಷಗಳ ಅಮೂಲ್ಯ ಜೀವನವನ್ನು ಜೈಲಿನಲ್ಲೇ ಕಳೆದುಕೊಂಡಿದ್ದಾನೆ,” ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ಲೈವ್ ಲಾ ವರದಿ ತಿಳಿಸಿದೆ.
ಈ ಪ್ರಕರಣದಲ್ಲಿ ಆರೋಪಿಯನ್ನು ಮೂವರು ಮಹಿಳೆಯರ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಪಡಿಸಲಾಗಿತ್ತು. ಆದರೆ ಆ ಶಿಕ್ಷೆಯು ಸಂಪೂರ್ಣವಾಗಿ ಓರ್ವ ಪ್ರತ್ಯಕ್ಷ ಸಾಕ್ಷಿಯ ಹೇಳಿಕೆಯನ್ನೇ ಆಧರಿಸಿತ್ತು.
ಆ ಸಾಕ್ಷ್ಯವನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್, ರಾತ್ರಿ ವೇಳೆ ಘಟನೆ ನೋಡಿರುವ ಸಾಧ್ಯತೆಯೇ ಅನುಮಾನಾಸ್ಪದವಾಗಿದೆ. ಅಲ್ಲದೆ, ಘಟನೆಯ ಬಗ್ಗೆ ಆ ಸಾಕ್ಷಿ ನೀಡಿದ ಮಾಹಿತಿಯನ್ನು ಇತರ ಸಾಕ್ಷಿದಾರರು ತಿಳಿದುಕೊಂಡ ರೀತಿಯಲ್ಲೂ ಪರಸ್ಪರ ವಿರುದ್ಧ ಹೇಳಿಕೆಗಳಿವೆ ಎಂದು ಗಮನಿಸಿದೆ.
ಆರೋಪಿಗೆ ಖುಲಾಸೆ; ಪುನರ್ವಸತಿಗೆ ನಿರ್ದೇಶನ
ಪ್ರಕರಣದ ಎಲ್ಲ ಅಂಶಗಳನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್, ಆರೋಪಿಯ ವಿರುದ್ಧ ವಿಶ್ವಾಸಾರ್ಹ ಸಾಕ್ಷ್ಯಗಳ ಕೊರತೆಯಿರುವುದರಿಂದ ಮೇಲ್ಮನವಿಯನ್ನು ಅಂಗೀಕರಿಸಿ, ಆತನ ಮೇಲಿನ ದೋಷಾರೋಪಣೆ ಹಾಗೂ ಶಿಕ್ಷೆಯನ್ನು ರದ್ದುಪಡಿಸಿ ಆತನನ್ನು ಖುಲಾಸೆ ಮಾಡಿದೆ.
ಜತೆಗೆ, ಒಡಿಶಾದ ಕೋರಾಪುಟ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (District Legal Services Authority–DLSA) ಆರೋಪಿಯ ಪುನರ್ವಸತಿ ಅಥವಾ ಮರುನೆಲೆಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು. ಈ ಪ್ರಕ್ರಿಯೆಗೆ ಜಿಲ್ಲಾಧಿಕಾರಿಯ ನೇತೃತ್ವದ ಜಿಲ್ಲಾ ಆಡಳಿತ ಅಗತ್ಯ ಸಹಕಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ