ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಸಮೀಪದ ಸುರಿಂಜೆ ಗ್ರಾಮದಲ್ಲಿ ಸ್ನೇಹಿತರೊಂದಿಗೆ ವಾಲಿಬಾಲ್ ಆಡುತ್ತಿದ್ದ ವೇಳೆ 15 ವರ್ಷದ ಬಾಲಕ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ದುರ್ಘಟನೆ ನಡೆದಿದೆಎಂದು ವರದಿಯಾಗಿದೆ.
ಮೃತ ಬಾಲಕನನ್ನು ಲಿಖಿತ್ ಅಮೀನ್ ಎಂದು ಗುರುತಿಸಲಾಗಿದ್ದು, ಆತ ಸುರಿಂಜೆಯ ಕೋಟೆ ಬೊಳ್ಳಾರು ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ (10ನೇ ತರಗತಿ) ವಿದ್ಯಾರ್ಥಿ. ಸುರಿಂಜೆ ಆಟದ ಮೈದಾನದಲ್ಲಿ ಸ್ನೇಹಿತರೊಂದಿಗೆ ವಾಲಿಬಾಲ್ ಆಡುತ್ತಿದ್ದ ವೇಳೆ ಲಿಖಿತ್ ಏಕಾಏಕಿ ಅಸ್ವಸ್ಥಗೊಂಡು ಮೈದಾನದಲ್ಲೇ ಕುಸಿದು ಬಿದ್ದಿದ್ದಾನೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ, ಲಿಖಿತ್ ಮೊದಲು ವಾಲಿಬಾಲ್ ಸರ್ವ್ ಮಾಡಿ, ಬಳಿಕ ಎದುರಾಳಿ ತಂಡದ ಚೆಂಡನ್ನು ತಡೆಯಲು ನೆಟ್‌ನತ್ತ ಓಡಿ ಹೋಗುತ್ತಿರುವುದು ಕಾಣಿಸುತ್ತದೆ. ಕೆಲವೇ ಕ್ಷಣಗಳ ಬಳಿಕ ಆತ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಏಕಾಏಕಿ ನೆಲಕ್ಕೆ ಕುಸಿದು ಬೀಳುತ್ತಾನೆ. ಇದನ್ನು ಕಂಡು ಬೆಚ್ಚಿಬಿದ್ದ ಇತರ ಆಟಗಾರರು ತಕ್ಷಣ ಆತನ ನೆರವಿಗೆ ಧಾವಿಸಿರುವ ದೃಶ್ಯವೂ ಸೆರೆಯಾಗಿದೆ.
ಘಟನೆ ನಡೆದ ತಕ್ಷಣ ಅಲ್ಲಿದ್ದವರು ಲಿಖಿತ್‌ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ, ವೈದ್ಯರು ಪರಿಶೀಲಿಸಿದ ಬಳಿಕ ಆತನನ್ನು ಮೃತ ಎಂದು ಘೋಷಿಸಿದರು. ವೈದ್ಯರು ಜೀವ ಉಳಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ.
ಸದ್ಯ ಲಿಖಿತ್ ಸಾವಿಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಸಾವಿನ ನಿಜವಾದ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ