ಎಸ್‌ಐಆರ್‌ : ಬೆಂಗಳೂರಿನ ಬಹುತೇಕ ಅರ್ಧದಷ್ಟು ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್‌ ಆಗುವ ಅತಂಕ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ಅತಿ ದೊಡ್ಡ ಕಳವಳದ ಕೇಂದ್ರವಾಗಿ ಹೊರಹೊಮ್ಮಿದೆ. ಮನೆ-ಮನೆಗೆ ತೆರಳಿ ನಡೆಸುತ್ತಿರುವ ಗಣತಿ (House-to-House Enumeration) ವೇಳೆ ನಗರದ ಸುಮಾರು ಅರ್ಧದಷ್ಟು ಮತದಾರರನ್ನು  ಎಎಸ್‌ಡಿಡಿಒ (ASDDO-Absent, Shifted, Duplicate, Dead and Others) ಅಥವಾ ಸಂಗ್ರಹಿಸದ (Uncollected) ವರ್ಗದಲ್ಲಿ ಗುರುತಿಸಲಾಗಿದೆ.
 ಅಂಕಿಅಂಶಗಳ ಪ್ರಕಾರ, ನಗರದಾದ್ಯಂತ 28 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಒಟ್ಟು 1.03 ಕೋಟಿ ಮತದಾರರಿದ್ದರು. ಇದುವರೆಗೆ 55.39 ಶೇಕಡಾ ಮತದಾರರ ಗಣತಿ ನಮೂನೆಗಳನ್ನು ಯಶಸ್ವಿಯಾಗಿ ಡಿಜಿಟಲೀಕರಿಸಲಾಗಿದೆ. ಉಳಿದ 44.61%ರಷ್ಟು ಮತದಾರರು ಎಎಸ್‌ಡಿಡಿಒ (ASDDO) ಅಥವಾ ಸಂಗ್ರಹಿಸದ ವರ್ಗಕ್ಕೆ ಸೇರಿದ್ದಾರೆ.
 ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ ಮೂರು ವಲಯಗಳಲ್ಲಿಯೂ ಎಎಸ್‌ಡಿಡಿಒ ಪಟ್ಟಿಗೆ ಸೇರಿರುವ ಮತದಾರರ ಪ್ರಮಾಣ ರಾಜ್ಯದಲ್ಲೇ ಅತಿ ಹೆಚ್ಚಾಗಿದೆ. ಬಿಬಿಎಂಪಿ (BBMP)ಯ ದಕ್ಷಿಣ ವಲಯದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ 51.18 ಶೇಕಡಾ (10.97 ಲಕ್ಷ ಮತದಾರರು) ಎಎಸ್‌ಡಿಡಿಒ ಅಥವಾ ಸಂಗ್ರಹಿಸದ ವರ್ಗಕ್ಕೆ ಗುರುತಿಸಲಾಗಿದೆ. ಬಿಬಿಎಂಪಿಯ ಕೇಂದ್ರ ವಲಯದಲ್ಲಿ 47.85 ಶೇಕಡಾ (9.04 ಲಕ್ಷ ಮತದಾರರು) ಹಾಗೂ ಬಿಬಿಎಂಪಿಯ ಉತ್ತರ ವಲಯದಲ್ಲಿ 46.95 ಶೇಕಡಾ (10.95 ಲಕ್ಷ ಮತದಾರರು) ಇದೇ ವರ್ಗಕ್ಕೆ ಸೇರಿದ್ದಾರೆ.
ಈ ಮೂರು ನಗರ ವಲಯಗಳನ್ನು ಒಟ್ಟುಗೂಡಿಸಿದರೆ, 48.9 ಲಕ್ಷಕ್ಕೂ ಹೆಚ್ಚು ಮತದಾರರು ಪ್ರಸ್ತುತ ಎಎಸ್‌ಡಿಡಿಒ ಅಥವಾ ಸಂಗ್ರಹಿಸದ ವರ್ಗದಲ್ಲಿ ಗುರುತಿಸಲ್ಪಟ್ಟಿದ್ದು, ಇದು ರಾಜ್ಯದ ಸರಾಸರಿ 19.93 ಶೇಕಡಾ ಪ್ರಮಾಣಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ.
ಎಎಸ್‌ಡಿಡಿಒ (ASDDO) ವಿಭಾಗದಲ್ಲಿ ಅತಿ ಹೆಚ್ಚಿನ ಪ್ರಮಾಣದ ಮತದಾರರನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಗುರುತಿಸಲಾಗಿದೆ. ಈ ಕ್ಷೇತ್ರದಲ್ಲಿ ಮ್ಯಾಪ್ ಮಾಡಲಾದ ಒಟ್ಟು ಮತದಾರರಲ್ಲಿ 57.08 ಶೇಕಡಾ, ಅಂದರೆ ಸುಮಾರು 2.76 ಲಕ್ಷ ಮತದಾರರನ್ನು ಎಎಸ್‌ಡಿಡಿಒ (ASDDO) ವಿಭಾಗಕ್ಕೆ ಸೇರಿಸಲಾಗಿದೆ.
ಬೆಂಗಳೂರು ನಗರದಲ್ಲಿನ 10 ವಿಧಾನಸಭಾ ಕ್ಷೇತ್ರಗಳಲ್ಲಿ, ಮ್ಯಾಪ್ ಮಾಡಲಾದ ಒಟ್ಟು ಮತದಾರರಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಮಂದಿ ಎಎಸ್‌ಡಿಡಿಒ (ASDDO) ವಿಭಾಗಕ್ಕೆ ವರ್ಗೀಕರಿಸಲ್ಪಟ್ಟಿದ್ದಾರೆ.
ಶೇಕಡಾ 50ಕ್ಕಿಂತ ಹೆಚ್ಚು ಎಎಸ್‌ಡಿಡಿಒ (ASDDO) ಗುರುತಿಸುವಿಕೆ ದಾಖಲಾಗಿರುವ ಇತರೆ ವಿಧಾನಸಭಾ ಕ್ಷೇತ್ರಗಳೆಂದರೆ ವಿಜಯನಗರ (53.66%), ದಾಸರಹಳ್ಳಿ (53.55%), ಬಿಟಿಎಂ ಲೇಔಟ್ (53.43%) ಹಾಗೂ ಸಿ.ವಿ. ರಾಮನ್ ನಗರ (53.25%) ಆಗಿದೆ. ಒಟ್ಟು ಸಂಖ್ಯೆಯ ದೃಷ್ಟಿಯಿಂದ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು 3.84 ಲಕ್ಷ ಮತದಾರರು (48.99%) Aಎಎಸ್‌ಡಿಡಿಒ (ASDDO)  ವಿಭಾಗಕ್ಕೆ ಸೇರಿದ್ದಾರೆ. ಅದರ ನಂತರ ಮಹದೇವಪುರ ಕ್ಷೇತ್ರದಲ್ಲಿ 3.13 ಲಕ್ಷ ಮತದಾರರು (45.66%) ಇದೇ ವಿಭಾಗದಲ್ಲಿ ಗುರುತಿಸಲ್ಪಟ್ಟಿದ್ದಾರೆ.
ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ, ಯಲಹಂಕ ಕ್ಷೇತ್ರದಲ್ಲಿ ಎಎಸ್‌ಡಿಡಿಒ (ASDDO)  ವಿಭಾಗಕ್ಕೆ ಸೇರಿರುವ ಮತದಾರರ ಪ್ರಮಾಣ ಅತಿ ಕಡಿಮೆಯಾಗಿದ್ದು, 1.81 ಲಕ್ಷ ಮತದಾರರು, ಅಂದರೆ ಮ್ಯಾಪ್ ಮಾಡಲಾದ ಒಟ್ಟು ಮತದಾರರಲ್ಲಿ 38.01 ಶೇಕಡಾ ಮಂದಿ ಈ ವಿಭಾಗಕ್ಕೆ ಗುರುತಿಸಲ್ಪಟ್ಟಿದ್ದಾರೆ.
ಆದರೆ, ಎಎಸ್‌ಡಿಡಿಒ ಪಟ್ಟಿಗೆ ಸೇರಿಸಲಾಗಿದೆ ಎಂದ ಮಾತ್ರಕ್ಕೆ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಸ್ವಯಂಚಾಲಿತವಾಗಿ ಅಳಿಸಲಾಗುವುದಿಲ್ಲ ಎಂದು ಚುನಾವಣಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಚುನಾವಣಾ ಆಯೋಗದ ಪ್ರಕಾರ, ಗೈರು (Absent), ಸ್ಥಳಾಂತರಗೊಂಡ(Shifted), ಎರಡು ಕಡೆ (Duplicate), ಮೃತ (Dead) ಮತ್ತು ಇತರೆ(Others) ವಿಭಾಗಗಳಲ್ಲಿ ಗುರುತಿಸಲ್ಪಟ್ಟಿರುವ ಮತದಾರರಿಗೆ ತಮ್ಮ ದಾಖಲೆಯನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಅಥವಾ ಮರುಸ್ಥಾಪಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಬೂತ್ ಮಟ್ಟದ ಅಧಿಕಾರಿಗಳು (BLOs) ಹಾಗೂ ಮತದಾರರ ನೋಂದಣಿ ಅಧಿಕಾರಿಗಳು (EROs) ತಪ್ಪಾಗಿ ಮಾಡಲಾದ ಎಎಸ್‌ಡಿಡಿಒ (ASDDO) ಗುರುತಿಸುವಿಕೆಯನ್ನು ಆಗಸ್ಟ್‌ 8ರವರೆಗೆ ಹಿಂಪಡೆಯಲು ಅವಕಾಶವಿದೆ. ಇದೇ ದಿನ ಮನೆ-ಮನೆಗೆ ತೆರಳಿ ನಡೆಸುತ್ತಿರುವ ಗಣತಿ ಹಾಗೂ ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ರಾಜ್ಯ ಮಟ್ಟದಲ್ಲಿ ನೋಡಿದರೆ, ಕರ್ನಾಟಕದಲ್ಲಿ ಒಟ್ಟು 5.54 ಕೋಟಿ ಮತದಾರರಿದ್ದಾರೆ. ಇವರಿಗಾಗಿ 100 ಶೇಕಡಾ ಗಣತಿ ನಮೂನೆಗಳನ್ನು ಮುದ್ರಿಸಿ ಬೂತ್ ಮಟ್ಟದ ಅಧಿಕಾರಿಗಳಿಗೆ ವಿತರಿಸಲಾಗಿದೆ. ಇದುವರೆಗೆ 99.99 ಶೇಕಡಾ ನಮೂನೆಗಳು ಡಿಜಿಟಲೀಕರಣಗೊಂಡಿವೆ ಅಥವಾ ಗುರುತಿಸಲ್ಪಟ್ಟಿವೆ. ರಾಜ್ಯದ ಒಟ್ಟು 1.10 ಕೋಟಿ ಮತದಾರರು (19.93 ಶೇಕಡಾ) ಪ್ರಸ್ತುತ ಎಎಸ್‌ಡಿಡಿಒ ಅಥವಾ ಸಂಗ್ರಹಿಸದ ವರ್ಗದಲ್ಲಿ ದಾಖಲಾಗಿದ್ದಾರೆ.
https://x.com/ceo_karnataka/status/2084970308193407430/photo/1?ref_src=twsrc%5Etfw%7Ctwcamp%5Etweetembed%7Ctwterm%5E2084970308193407430%7Ctwgr%5E087fbd57ebd74a9f4f133c523d41dd4220a248db%7Ctwcon%5Es1_&ref_url=https%3A%2F%2Fmaktoobmedia.com%2Fpublic%2Fpost%3Fid%3D116143slug%3Dnearly-half-of-bengaluru-voters-marked-for-exclusion-under-karnatakas-sirC2A0
ರಾಜ್ಯದಲ್ಲಿ ಎಎಸ್‌ಡಿಡಿಒ ಪಟ್ಟಿಗೆ ಸೇರಿರುವವರಲ್ಲಿ 66.43 ಲಕ್ಷ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದರ ನಂತರ 16.32 ಲಕ್ಷ ಮೃತರು, 16.12 ಲಕ್ಷ ಗೈರುಹಾಜರಿರುವ ಅಥವಾ ಪತ್ತೆಯಾಗದವರು, 6.93 ಲಕ್ಷ ಈಗಾಗಲೇ ಬೇರೆಡೆ ಮತದಾರರಾಗಿ ನೋಂದಾಯಿತರಾದವರು ಹಾಗೂ 4.67 ಲಕ್ಷ ಮಂದಿ ಇತರೆ ವಿಭಾಗಕ್ಕೆ ಸೇರಿದ್ದಾರೆ.
ಬೆಂಗಳೂರು ನಗರದಲ್ಲಿ ಹೊಸ ಮತದಾರರ ನೋಂದಣಿಗೆ ಅನುಕೂಲವಾಗುವ ಉದ್ದೇಶದಿಂದ, ಬಿಬಿಎಂಪಿ ಹಾಗೂ ಗ್ರೇಟರ್ ಬೆಂಗಳೂರು ಪ್ರದೇಶದ ಮತದಾರರ ನೋಂದಣಿ ಅಧಿಕಾರಿಗಳಿಗೆ (EROs) ಚುನಾವಣಾ ಆಯೋಗವು 10 ಲಕ್ಷ ಅರ್ಜಿ ನಮೂನೆ-6 ಅರ್ಜಿಗಳನ್ನು (ಮತದಾರರ ಪಟ್ಟಿಗೆ ಹೊಸ ಹೆಸರು ಸೇರಿಸಲು ಬಳಸುವ ಅರ್ಜಿ) ಪೂರೈಸಿದೆ.
ಇದೇ ವೇಳೆ, ಜೂನ್‌ 16ರಿಂದ ಆಗಸ್ಟ್‌ 5ರವರೆಗೆ ಕರ್ನಾಟಕದಾದ್ಯಂತ  ಅರ್ಜಿ ನಮೂನೆ-6,  ಅರ್ಜಿ ನಮೂನೆ-6ಎ, ಅರ್ಜಿ ನಮೂನೆ-7 ಮತ್ತು  ಅರ್ಜಿ ನಮೂನೆ-8ರ ಅಡಿಯಲ್ಲಿ 12.32 ಲಕ್ಷ ಅರ್ಜಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗಿದ್ದು, ಇವು ಹೊಸ ಮತದಾರರ ಸೇರ್ಪಡೆ, ಹೆಸರು ಅಳಿಸುವಿಕೆ ಹಾಗೂ ಮತದಾರರ ವಿವರಗಳ ತಿದ್ದುಪಡಿಗೆ ಸಂಬಂಧಿಸಿದವುಗಳಾಗಿವೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement