ಉಡುಪಿ : ಖ್ಯಾತ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಮುದರಂಗಡಿಯ ಡೇವಿಡ್ ಡಿ’ಸೋಜಾ (ಡೇವಿಡ್ ಡಾಲಿಯಾ) ಅವರನ್ನು ಶುಕ್ರವಾರ ಮಧ್ಯಾಹ್ನ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಯು ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಸಮೀಪದ ಮುದರಂಗಡಿಯಲ್ಲಿ ಮುದರಂಗಡಿ ಗ್ರಾಮ ಪಂಚಾಯತ ವ್ಯಾಪ್ತಿಯ ಪಿಲ್ಲಾರ್ ಗ್ರಾಮದ ಸೇಂಟ್ ಫ್ರಾನ್ಸಿಸ್ ಜೇವಿಯರ್ ಚರ್ಚ್ ಮುಂಭಾಗದಲ್ಲಿ ನಡೆದಿದೆ ಎಂದು ಹೇಳಲಾಗಿದೆ.
ಮಾಹಿತಿಯ ಪ್ರಕಾರ, ಬೈಕ್ನಲ್ಲಿ ಬಂದಿದ್ದ ಇಬ್ಬರು ಅಪರಿಚಿತರು ಡೇವಿಡ್ ಡಿ’ಸೋಜಾ ಅವರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅವರು ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಉದ್ಯಮಿಯಾಗಿದ್ದ ಡೇವಿಡ್ ಡಿ’ಸೋಜಾ ಅವರು ಅರ್ಥ್ಮೂವರ್ಸ್ ಸೇರಿದಂತೆ ಹಲವು ಉದ್ಯಮಗಳನ್ನು ನಡೆಸುತ್ತಿದ್ದರು. ಅವರು ಮುದರಂಗಡಿ ಗ್ರಾಮ ಪಂಚಾಯತದ ಮಾಜಿ ಅಧ್ಯಕ್ಷರಾಗಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಶಿರ್ವಾ ಹಾಗೂ ಪಡುಬಿದ್ರೆ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪರಾಧ ಸ್ಥಳ ಪರಿಶೀಲನಾ ತಂಡ ಹಾಗೂ ಶ್ವಾನದಳವೂ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.
ಗುಂಡಿನ ದಾಳಿಯ ಹಿಂದಿನ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ