ನವದೆಹಲಿ: ವಿದ್ಯಾರ್ಥಿಗಳ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಗಳಿಗೆ ‘ನೈಜ ಜನರೇಷನ್ ಝೆಡ್’ (Real Gen Z) ಪಾಲ್ಗೊಂಡಿತ್ತು ಎಂದು ಕಾಂಗ್ರೆಸ್ ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ ಹೇಳಿದ್ದಾರೆ. ವಿದ್ಯಾರ್ಥಿಗಳ ವಿಚಾರಕ್ಕೆ ಸಂಬಂಧಿಸಿದ ಪ್ರತಿಭಟನೆಗಳನ್ನು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ನಡೆಸಿದ ಪ್ರತಿಭಟನೆಗಳಿಗೆ ಹೋಲಿಕೆ ಮಾಡುವಂತಹ ಹೇಳಿಕೆಗಳನ್ನು ನೀಡುವಾಗ ಪಕ್ಷದ ನಾಯಕರು ಎಚ್ಚರಿಕೆ ವಹಿಸಬೇಕು ಎಂದು ಅವರು ಸೂಚಿಸಿದ್ದಾರೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಕಾಂಗ್ರೆಸ್ ಪ್ರತಿಭಟನೆಗಳನ್ನು ಸಿಜೆಪಿ ನಡೆಸಿದ ಪ್ರತಿಭಟನೆಗಳಿಗೆ ಹೋಲಿಕೆ ಮಾಡಿರುವ ಹಿನ್ನೆಲೆಯಲ್ಲಿ ವೇಣುಗೋಪಾಲ ಅವರ ಈ ಎಚ್ಚರಿಕೆ ಬಂದಿದೆ.
ತರೂರ್ ಅವರು ಉದ್ದೇಶಪೂರ್ವಕವಾಗಿಯೇ ಇಂತಹ ಹೇಳಿಕೆ ನೀಡಿದ್ದಾರೆ ಎಂದು ತಾನು ನಂಬುವುದಿಲ್ಲ ಎಂದು ವೇಣುಗೋಪಾಲ ಸ್ಪಷ್ಟಪಡಿಸಿದ್ದಾರೆ. “ತಿಳಿದೋ ತಿಳಿಯದೆಯೋ, ಇಂತಹ ಹೇಳಿಕೆಗಳನ್ನು ನೀಡದಂತೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕು. ಅವರು ಇದನ್ನು ಉದ್ದೇಶಪೂರ್ವಕವಾಗಿ ಹೇಳಿದ್ದಾರೆ ಎಂದು ನಾನು ನಂಬುವುದಿಲ್ಲ. ಹಾಗೆ ಹೇಳುವ ಸಾಧ್ಯತೆಯೂ ಇಲ್ಲ ” ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
“ಕಾಂಗ್ರೆಸ್ ಸದಸ್ಯರು ಪಕ್ಷದ ಚೌಕಟ್ಟು ಅಥವಾ ಶಿಸ್ತನ್ನು ಯಾವಾಗಲೂ ಕಟ್ಟುನಿಟ್ಟಾಗಿ ಪಾಲಿಸದೇ ಇರಬಹುದು. ಆದರೆ, ಬಿಜೆಪಿ ಪರವಾಗಿ ತೋರುವ ರೀತಿಯಲ್ಲಿ ಅಥವಾ ಬಿಜೆಪಿಯನ್ನು ಮೆಚ್ಚಿಸುವಂತಹ ಹೇಳಿಕೆಗಳನ್ನು ನೀಡದಂತೆ ನಾವು ಎಚ್ಚರಿಕೆ ವಹಿಸಬೇಕು” ಎಂದು ವೇಣುಗೋಪಾಲಹೇಳಿದ್ದಾರೆ.
ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ಶಶಿ ತರೂರ್ ಅವರು ಕಾಂಗ್ರೆಸ್ ನಡೆಸಿದ ವಿದ್ಯಾರ್ಥಿ ಪ್ರತಿಭಟನೆಗಳ ಕುರಿತು ಮಾತನಾಡಿದ್ದರು.
“ಕುತೂಹಲಕರ ಸಂಗತಿಯೆಂದರೆ, ಸಿಜೆಪಿ ಕೈಗೆತ್ತಿಕೊಂಡಿದ್ದ ವಿಷಯಗಳನ್ನೇ ನನ್ನ ಪಕ್ಷವೂ ಕೈಗೆತ್ತಿಕೊಂಡಿತ್ತು. ರಾಹುಲ್ ಗಾಂಧಿ ಕೂಡ ‘ಛಾತ್ರೋಂ ಕಿ ಗೂಂಜ್’ (Chhatron Ki Goonj) ಮೂಲಕ ಈ ವಿಚಾರಗಳನ್ನು ಪ್ರಸ್ತಾಪಿಸಿದ್ದರು. ಆದರೆ, ಅದು ಅಷ್ಟೊಂದು ಪರಿಣಾಮಕಾರಿಯಾಗಿ ಜನರನ್ನು ತಲುಪದಿರುವುದೇಕೆ ಎಂಬುದನ್ನು ನಾವು ನೋಡಬೇಕು. ಜನರ ನಾಡಿಮಿಡಿತವನ್ನು ಅರಿತುಕೊಳ್ಳಬೇಕು” ಎಂದು ತರೂರ್ ಹೇಳಿದ್ದರು.
ರಾಹುಲ್ ಗಾಂಧಿಯವರ ‘ಛಾತ್ರೋಂ ಕಿ ಗೂಂಜ್’ ಅಭಿಯಾನವನ್ನು ಜೂನ್ 17ರಂದು ರಾಜಸ್ಥಾನದ ಕೋಟಾದಿಂದ ಆರಂಭಿಸಲಾಗಿತ್ತು. ಸಿಜೆಪಿ ಪ್ರತಿಭಟನೆ ದೇಶಾದ್ಯಂತ ಗಮನ ಸೆಳೆಯುವ ಕೆಲವೇ ದಿನಗಳ ಮೊದಲು ಈ ಅಭಿಯಾನ ಆರಂಭವಾಗಿತ್ತು.
ಸಿಜೆಪಿ ಜೂನ್ 20ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಆರಂಭಿಸಿತ್ತು. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಜವಾಬ್ದಾರಿಯನ್ನು ನಿಗದಿಪಡಿಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ರಾಜೀನಾಮೆ ನೀಡಬೇಕು ಎಂಬ ಬೇಡಿಕೆಯನ್ನೂ ಪ್ರತಿಭಟನಾಕಾರರು ಮುಂದಿಟ್ಟಿದ್ದರು. ಪ್ರತಿಭಟನೆ ವೇಳೆ ಪೊಲೀಸರು ಕೈಗೊಂಡ ಕ್ರಮವೂ ವ್ಯಾಪಕ ಚರ್ಚೆಗೆ ಒಳಗಾಗಿತ್ತು.
ಕಾಂಗ್ರೆಸ್ ಅತ್ಯಂತ ಪ್ರಜಾಸತ್ತಾತ್ಮಕ ಪಕ್ಷ. ಬಿಜೆಪಿಯಲ್ಲಿ ಯಾರಾದರೂ ತಮ್ಮ ಮನಸ್ಸಿನಲ್ಲಿರುವುದನ್ನು ಸ್ವತಂತ್ರವಾಗಿ ಹೇಳಿಕೊಳ್ಳುವುದು ಅಸಾಧ್ಯ ಎಂದು ಅವರು ಟೀಕಿಸಿದ್ದರು. “ನಾನು ನನ್ನ ಪಕ್ಷಕ್ಕೆ ನಿಷ್ಠಾವಂತನಲ್ಲ ಎಂದಲ್ಲ. ಆದರೆ, ನನ್ನ ಸ್ವತಂತ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತೇನೆ. ಕೆಲವೊಮ್ಮೆ ನನ್ನ ಅಭಿಪ್ರಾಯಗಳನ್ನು ನನ್ನ ವಿರೋಧಿಗಳು ಬಳಸಿಕೊಳ್ಳಬಹುದು. ಕಾಂಗ್ರೆಸ್ ಅತ್ಯಂತ ಕಡಿಮೆ ಪ್ರಜಾಸತ್ತಾತ್ಮಕ ಪಕ್ಷವಲ್ಲ; ಬದಲಿಗೆ ಅದು ಅತ್ಯಂತ ಪ್ರಜಾಸತ್ತಾತ್ಮಕ ಪಕ್ಷವಾಗಿದೆ. ಬಿಜೆಪಿಯಲ್ಲಿ ಯಾರಾದರೂ ತಮ್ಮ ಪಕ್ಷದೊಳಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ, ಅದರ ನಂತರವೂ ಉಳಿದಿರುವುದನ್ನು ನೀವು ಕೇಳಿದ್ದೀರಾ? ನನ್ನ ಅಭಿಪ್ರಾಯಗಳಿಗೆ ಅತ್ಯಂತ ಹತ್ತಿರವಾಗಿರುವ ಪಕ್ಷದಲ್ಲೇ ನಾನು ಇದ್ದೇನೆ” ಎಂದು ತರೂರ್ ಹೇಳಿದ್ದರು.
ತರೂರ್ ಅವರ ಈ ಹೇಳಿಕೆಗಳ ಬೆನ್ನಲ್ಲೇ, ಪಕ್ಷದ ನಾಯಕರು ಸಾರ್ವಜನಿಕವಾಗಿ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂಬ ಸಂದೇಶವನ್ನು ಕೆ.ಸಿ. ವೇಣುಗೋಪಾಲ ನೀಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ