ಏಕಾಂಗಿಯಾಗಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿರುವ ಬೆಂಗಳೂರಿನ ಟೆಕ್ಕಿಗಾಗಿ ಹುಡುಕಾಟ

ಬೆಂಗಳೂರು: ಬೆಂಗಳೂರಿನ ಹೊರವಲಯದ ಶಿವಗಂಗೆ ಬೆಟ್ಟಕ್ಕೆ ಏಕಾಂಗಿಯಾಗಿ ಚಾರಣಕ್ಕೆ ತೆರಳಿದ್ದ 31 ವರ್ಷದ ಸಾಫ್ಟ್‌ವೇರ್ ವೃತ್ತಿಪರ ಅದ್ವೈತ ಉಪಾಧ್ಯಾಯ ನಾಪತ್ತೆಯಾಗಿದ್ದು, ಅವರನ್ನು ಪತ್ತೆಹಚ್ಚಲು ಪೊಲೀಸರು ಹಾಗೂ ವಿವಿಧ ರಕ್ಷಣಾ ಸಂಸ್ಥೆಗಳ 100ಕ್ಕೂ ಹೆಚ್ಚು ಸಿಬ್ಬಂದಿ ಬೆಟ್ಟದ ಕಲ್ಲುಬಂಡೆಗಳು, ಪೊದೆಗಳು ಮತ್ತು ದಟ್ಟ ಸಸ್ಯವರ್ಗದ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಮಧ್ಯಪ್ರದೇಶದ ಇಂದೋರ್ ಮೂಲದ ಉಪಾಧ್ಯಾಯ, ವೈಟ್‌ಫೀಲ್ಡ್‌ನ ಹಣಕಾಸು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಾಡುಗೋಡಿಯಲ್ಲಿ ವಾಸಿಸುತ್ತಿದ್ದರು. ಶುಕ್ರವಾರ (ಆಗಸ್ಟ್‌ ೭) ಬಾಡಿಗೆಗೆ ಮೋಟಾರ್‌ಸೈಕಲ್ ಪಡೆದುಕೊಂಡು ಶಿವಗಂಗೆಗೆ ಚಾರಣಕ್ಕೆ ತೆರಳುವುದಾಗಿ ತಾವು ನಿಶ್ಚಿತಾರ್ಥ ಮಾಡಿಕೊಂಡ ಯುವತಿಗೆ ತಿಳಿಸಿದ್ದರು.
ಪೊಲೀಸರ ಪ್ರಕಾರ, ಶಿವಗಂಗೆ ಬೆಟ್ಟದ ತಪ್ಪಲಿನ ಸಿಸಿಟಿವಿಯಲ್ಲಿ ಅವರು ಬೆಳಿಗ್ಗೆ 7:30ಕ್ಕೆ ಸ್ಥಳಕ್ಕೆ ಆಗಮಿಸಿ ಬೆಟ್ಟ ಏರುತ್ತಿರುವ ದೃಶ್ಯ ಸೆರೆಯಾಗಿದೆ. ಮಧ್ಯಾಹ್ನದ ವೇಳೆಗೆ ವಾಪಸ್ ಬರಬೇಕಿದ್ದ ಅವರು ಹಿಂದಿರುಗದ ಹಿನ್ನೆಲೆಯಲ್ಲಿ, ಶುಕ್ರವಾರ ಸಂಜೆ ಅವರ ನಿಶ್ಚಿತಾರ್ಥ ಮಾಡಿಕೊಂಡ ಯುವತಿ ಕಾಡುಗೋಡಿ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದಾರೆ. ಬಳಿಕ ನೆಲಮಂಗಲ ಮತ್ತು ದಾಬಸ್‌ಪೇಟೆ ಭಾಗದ ಸಿಬ್ಬಂದಿಗೂ ಮಾಹಿತಿ ನೀಡಿ ಶೋಧ ಆರಂಭಿಸಲಾಯಿತು.

ಉಪಾಧ್ಯಾಯ ಅವರ ಬಾಡಿಗೆ ಮೋಟಾರ್‌ಸೈಕಲ್ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿದ್ದು, ಅವರು ವಾಹನದಲ್ಲಿ ಅಲ್ಲಿಂದ ತೆರಳಿಲ್ಲ ಎಂದು ಪೊಲೀಸರು ಅಂದಾಜಿಸಿದ್ದಾರೆ. ಅವರ ಮೊಬೈಲ್‌ನ ಕೊನೆಯ ಸಿಗ್ನಲ್ ಕುಣಿಗಲ್ ರಸ್ತೆಯ ಕುಡೂರು ಸಮೀಪ ದಾಖಲಾಗಿದ್ದು, ಬಳಿಕ ಫೋನ್ ಸ್ವಿಚ್ ಆಫ್ ಆಗಿದೆ. ಈ ಸ್ಥಳವು ಸಾಮಾನ್ಯ ಚಾರಣ ಮಾರ್ಗಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಂತಲಾ ಡ್ರಾಪ್‌ನಲ್ಲಿ ಶೋಧ
ಶಿವಗಂಗೆ ಬೆಟ್ಟದ ಅಪಾಯಕಾರಿ ಪ್ರದೇಶವಾದ ಶಾಂತಲಾ ಡ್ರಾಪ್ ಇದೀಗ ಶೋಧದ ಪ್ರಮುಖ ಕೇಂದ್ರವಾಗಿದೆ. ಕಡಿದಾದ ಬಂಡೆಗಳು, ಆಳವಾದ ಇಳಿಜಾರುಗಳು ಹಾಗೂ ಜಾರುವ ಕಲ್ಲುಗಳಿಂದಾಗಿ ಈ ಪ್ರದೇಶಕ್ಕೆ ತಲುಪುವುದು ಕಷ್ಟಕರವಾಗಿದೆ.
ಡ್ರೋನ್ ಶೋಧದ ವೇಳೆ ಶಾಂತಲಾ ಡ್ರಾಪ್‌ನ ಕೆಳಭಾಗದ ದಟ್ಟ ಮರಗಿಡಗಳ ನಡುವೆ ದೇಹದಂತೆ ಕಾಣುವ ವಸ್ತುವೊಂದು ಕಂಡುಬಂದಿದೆ. ಆದರೆ, ದುರ್ಗಮ ಪ್ರದೇಶವಾಗಿರುವುದರಿಂದ ಅದು ಏನು ಎಂಬುದನ್ನು ಇನ್ನೂ ಖಚಿತಪಡಿಸಲಾಗಿಲ್ಲ ಎಂದು ಹೇಳಲಾಗಿದೆ.
ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ಅರಣ್ಯ ಇಲಾಖೆ ಸೇರಿದಂತೆ ಸುಮಾರು 100 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಕಾಲ್ನಡಿಗೆಯಲ್ಲಿ ತಲುಪಲು ಕಷ್ಟಕರವಾದ ಪ್ರದೇಶಗಳಿಗಾಗಿ ಹೈ-ರೆಸಲ್ಯೂಷನ್ ಡ್ರೋನ್‌ಗಳನ್ನು ಬಳಸಲಾಗುತ್ತಿದ್ದು, ನೆಲದ ತಂಡಗಳು ಕಲ್ಲುಬಂಡೆಗಳು, ಪೊದೆಗಳು, ಇಳಿಜಾರುಗಳು ಹಾಗೂ ಸಾಮಾನ್ಯ ಚಾರಣ ಮಾರ್ಗದಿಂದ ದೂರದ ಪ್ರದೇಶಗಳಲ್ಲೂ ಶೋಧ ನಡೆಸುತ್ತಿವೆ.

ಪ್ರಮುಖ ಸುದ್ದಿ :-   ವಸತಿ ಶಾಲಾ ಹಾಸ್ಟೆಲ್‌ನಲ್ಲಿ ಮಲಗಿದ್ದ ವಿದ್ಯಾರ್ಥಿನಿಯರಿಗೆ ಹಾವು ಕಡಿತ; ಮೂವರು ಸಾವು, ಮೂವರು ಗಂಭೀರ

ಲ್ಯಾಪ್‌ಟಾಪ್‌ನ ಬ್ರೌಸಿಂಗ್‌ ಇತಿಹಾಸವೂ ಪರಿಶೀಲನೆ
ಉಪಾಧ್ಯಾಯ ಅವರ ನಿವಾಸದಲ್ಲಿದ್ದ ಲ್ಯಾಪ್‌ಟಾಪ್‌ನ ಮಾಹಿತಿಯನ್ನು ಪೊಲೀಸರು ಪರಿಶೀಲಿಸಿದ್ದು, ಬ್ರೌಸಿಂಗ್‌ ಇತಿಹಾಸದಲ್ಲಿ ಶಿವಗಂಗೆ ಬೆಟ್ಟ, ಅದರ ಭೌಗೋಳಿಕ ಸ್ವರೂಪ ಮತ್ತು ಶಾಂತಲಾ ಡ್ರಾಪ್ ಕುರಿತ ಹುಡುಕಾಟಗಳು ಪತ್ತೆಯಾಗಿವೆ. ಬೆಂಗಳೂರಿನ ಸುತ್ತಮುತ್ತಲಿನ ಆತ್ಮಹತ್ಯೆ ಸ್ಥಳಗಳ ಕುರಿತ ಹುಡುಕಾಟವೂ ಕಂಡುಬಂದಿರುವುದರಿಂದ, ಆತ್ಮಹತ್ಯೆಯ ಸಾಧ್ಯತೆಯನ್ನೂ ಪೊಲೀಸರು ತನಿಖೆಯ ಒಂದು ಆಯಾಮವಾಗಿ ಪರಿಶೀಲಿಸುತ್ತಿದ್ದಾರೆ.
ಉಪಾಧ್ಯಾಯ ಅವರು ಐಐಟಿ ಹಳೆಯ ವಿದ್ಯಾರ್ಥಿಯಾಗಿದ್ದು, ಸೈಬರ್‌ಸುರಕ್ಷತೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇಂದೋರ್ ಮೂಲದ ಉದ್ಯಮಿಯೊಬ್ಬರ ಪುತ್ರರಾಗಿರುವ ಅವರು, ಮುಂದಿನ ಜನವರಿಯಲ್ಲಿ ವಿವಾಹವಾಗಬೇಕಿದ್ದು, ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ನಿರಂತರ ಮಳೆ ಮತ್ತು ದುರ್ಗಮ ಭೂಪ್ರದೇಶ ಶೋಧ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿವೆ. ಅವರು ಬೆಟ್ಟದಲ್ಲೇ ಸಿಲುಕಿಕೊಂಡಿದ್ದಾರೆಯೇ, ತಲುಪಲು ಕಷ್ಟವಾದ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದ್ದಾರೆಯೇ ಅಥವಾ ಬೇರೆ ಕಾರಣಕ್ಕೆ ಚಾರಣ ಮಾರ್ಗದಿಂದ ದೂರ ಹೋಗಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅವರ ಬಗ್ಗೆ ನಿಖರ ಮಾಹಿತಿ ಸಿಗುವವರೆಗೆ ಎಲ್ಲಾ ಸಾಧ್ಯತೆಗಳನ್ನೂ ಪರಿಗಣಿಸಿ ಶೋಧ ಮತ್ತು ತನಿಖೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement