ವಸತಿ ಶಾಲಾ ಹಾಸ್ಟೆಲ್‌ನಲ್ಲಿ ಮಲಗಿದ್ದ ವಿದ್ಯಾರ್ಥಿನಿಯರಿಗೆ ಹಾವು ಕಡಿತ; ಮೂವರು ಸಾವು, ಮೂವರು ಗಂಭೀರ

ಗಡ್ಚಿರೋಲಿ: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಧನೋರಾ ತಾಲೂಕಿನ ಜಪತಲಾಯಿ ಗ್ರಾಮದಲ್ಲಿರುವ ವಸತಿ ಶಾಲೆಯಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಶಂಕಿತ ಹಾವು ಕಡಿತದ ಘಟನೆಯಲ್ಲಿ ಮೂವರು ವಿದ್ಯಾರ್ಥಿನಿಯರು ಮೃತಪಟ್ಟಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ 14 ವಿದ್ಯಾರ್ಥಿನಿಯರನ್ನು ವೈದ್ಯಕೀಯ ನಿಗಾದಲ್ಲಿರಿಸಲಾಗಿದೆ ಎಂದು ಹೇಳಲಾಗಿದೆ. ಜಪತಲಾಯಿ ಗ್ರಾಮದ ಕುಪರ್ಲಿಂಗೋ ಎಜುಕೇಷನಲ್ ಆ್ಯಂಡ್ ಕಲ್ಚರಲ್ ಡೆವಲಪ್‌ಮೆಂಟ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನಡೆಸುತ್ತಿರುವ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಸೇರಿದ ಶಾಲೆಯ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ.
ಅಧಿಕಾರಿಗಳ ಪ್ರಕಾರ, ಭಾನುವಾರ ರಾತ್ರಿ ಸುಮಾರು 2 ಗಂಟೆಗೆ ಹಾಸ್ಟೆಲ್‌ನ ಕೊಠಡಿಯೊಂದಕ್ಕೆ ಹಾವು ನುಗ್ಗಿದೆ. ಆ ವೇಳೆ ಸುಮಾರು 79 ವಿದ್ಯಾರ್ಥಿನಿಯರು ನೆಲದ ಮೇಲೆ ಮಲಗಿದ್ದರು. ಹಾವು ನುಗ್ಗಿದ ವೇಳೆ ಹಲವಾರು ವಿದ್ಯಾರ್ಥಿನಿಯರಿಗೆ ಹಾವು ಕಡಿದಿರುವ ಶಂಕೆ ವ್ಯಕ್ತವಾಗಿದೆ.
ಘಟನೆಯ ಬಳಿಕ ಬಾಧಿತ ವಿದ್ಯಾರ್ಥಿನಿಯರನ್ನು ತಕ್ಷಣ ಧನೋರಾದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಅಲ್ಲಿ ಇಬ್ಬರು ವಿದ್ಯಾರ್ಥಿನಿಯರು ಮೃತಪಟ್ಟರು. ಮತ್ತೊಬ್ಬ ವಿದ್ಯಾರ್ಥಿನಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಗಡ್ಚಿರೋಲಿ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆ ವಿದ್ಯಾರ್ಥಿನಿಯೂ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಗಡ್ಚಿರೋಲಿ ಜಿಲ್ಲಾ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಮನೀಶ ಮೆಶ್ರಾಮ್ ಅವರ ಪ್ರಕಾರ, ಮೂವರು ವಿದ್ಯಾರ್ಥಿನಿಯರೂ ಗಂಭೀರ ಸ್ಥಿತಿಯಲ್ಲಿದ್ದಾರೆ. ಅದರಲ್ಲಿ ಒಬ್ಬರು ಸ್ಥಿತಿ ಇನ್ನೂ ಗಂಭೀರವಾಗಿದೆ. ಮೂವರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಅಲ್ಲದೆ, ಮುನ್ನೆಚ್ಚರಿಕಾ ಕ್ರಮವಾಗಿ 14 ವಿದ್ಯಾರ್ಥಿನಿಯರನ್ನು ಗಡ್ಚಿರೋಲಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ನಿಗಾದಲ್ಲಿರಿಸಲಾಗಿದೆ. ಘಟನೆಯಿಂದ ಹಲವು ವಿದ್ಯಾರ್ಥಿನಿಯರು ಭಯಭೀತರಾಗಿದ್ದು, ಅವರ ಆರೋಗ್ಯ ಸ್ಥಿತಿಯನ್ನು ವೈದ್ಯರು ನಿರಂತರವಾಗಿ ಗಮನಿಸುತ್ತಿದ್ದಾರೆ.
ಘಟನೆ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪ್ರಾಥಮಿಕ ಮಾಹಿತಿ ಪಡೆದಿದ್ದು, ಘಟನೆಯ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಘಟನೆ ಬಳಿಕ ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ತಂಡಗಳು ಸ್ಥಳಕ್ಕೆ ತೆರಳಿ ಅಗತ್ಯ ಕ್ರಮ ಕೈಗೊಂಡಿವೆ. ಹಾವು ಹಾಸ್ಟೆಲ್‌ನ ಕೊಠಡಿಗೆ ಹೇಗೆ ಪ್ರವೇಶಿಸಿತು, ವಿದ್ಯಾರ್ಥಿನಿಯರಿಗೆ ಹಾವು ಕಡಿದ ಸಂದರ್ಭವೇನು ಹಾಗೂ ಘಟನೆಯ ಹಿಂದೆ ಯಾವುದೇ ಸುರಕ್ಷತಾ ಲೋಪವಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪೊಲೀಸರು ಈಗಾಗಲೇ ವಿಚಾರಣೆ ಆರಂಭಿಸಿದ್ದು, ಘಟನೆಯ ನಿಖರ ಕಾರಣ ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement