ಮೈ ಜುಂ ಎನ್ನುವ ವಿಡಿಯೋ | ಕೆಸರು ಮಿಶ್ರಿತ ನೀರಿನ ರಭಸಕ್ಕೆ ಕ್ಷಣಾರ್ಧದಲ್ಲೇ ಕೊಚ್ಚಿಹೋದ ನೀತಿ ಕಣಿವೆ ಸೇತುವೆ

ಉತ್ತರಾಖಂಡದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಉಂಟಾದ ಪ್ರಬಲ ನೀರಿನ ಪ್ರವಾಹಕ್ಕೆ ಚಮೋಲಿ ಜಿಲ್ಲೆಯ ನೀತಿ ಕಣಿವೆ ಪ್ರದೇಶದಲ್ಲಿದ್ದ ಲೋಹದ ಸೇತುವೆಯೊಂದು ಕೊಚ್ಚಿಕೊಂಡು ಹೋಗಿದೆ.
ನೀತಿ ಕಣಿವೆಯಲ್ಲಿ ನಡೆದ ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಒಮ್ಮೆಲೇ ಸುರಿದ ಕುಂಬಧ್ರೋಣ ಮಳೆಯಿಂದಾಗಿ ಭಾರಿ ಪ್ರಮಾಣದ ಕೆಸರು ಮಿಶ್ರಿತ ನೀರು ಗುಡ್ಡದಿಂದ ರಭಸವಾಗಿ ಕೆಳಮುಖವಾಗಿ ಹರಿದು ಬಂದು ಸೇತುವೆಗೆ ಅಪ್ಪಳಿಸುತ್ತಿರುವ ದೃಶ್ಯ ಕಂಡುಬಂದಿದೆ. ನೀರಿನ ರಭಸ ಎಷ್ಟೊಂದು ತೀವ್ರವಾಗಿತ್ತೆಂದರೆ, ಕೆಲವೇ ಸೆಕೆಂಡ್‌ಗಳಲ್ಲಿ ಸೇತುವೆಯು ಅಡಿಪಾಯ ಸಮೇತ ಕೊಚ್ಚಿಕೊಂಡು ಹೋಗಿ ನದಿಯಲ್ಲಿ ಬಿದ್ದಿದೆ.
ಘಟನೆ ನಡೆಯುವ ವೇಳೆ ನದಿಯ ಪಕ್ಕದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಒಂದು ಟ್ರಕ್‌ ಮತ್ತು ಎಸ್‌ಯುವಿ ವಾಹನಗಳು ಅಪಾಯವನ್ನು ಅರಿತುಕೊಂಡು ಸಮಯಕ್ಕೆ ಸರಿಯಾಗಿ ದಿಕ್ಕು ಬದಲಿಸಿ ಹಿಂದಕ್ಕೆ ತೆರಳಿರುವ ದೃಶ್ಯವೂ ವಿಡಿಯೊದಲ್ಲಿ ಸೆರೆಯಾಗಿದೆ. ಆದರೆ ಪಕ್ಕದ ರಸ್ತೆಯಲ್ಲಿ ನಿಲ್ಲಿಸಿದ ವಾಹನವೊಂದು ಕೊಚ್ಚಿಕೊಂಡು ಹೋಗಿದೆ. ಸೇತುವೆಯ ಪಕ್ಕದಲ್ಲಿ ನಿಲ್ಲಿಸಿದ್ದ ಜೆಸಿಬಿಯೂ ಸ್ವಲ್ಪದೂರದ ವರೆಗೆ ಕೊಚ್ಚಿಕೊಂಡು ಹೋಗಿದೆ.

ಸೇತುವೆ ಕೊಚ್ಚಿಕೊಂಡು ಹೋಗಿರುವ ಪರಿಣಾಮ ನೀತಿ ಕಣಿವೆ ಪ್ರದೇಶವು ಮುಖ್ಯ ಪಟ್ಟಣದ ಸಂಪರ್ಕದಿಂದ ಕಡಿತಗೊಂಡಿದೆ. ಪರಿಸ್ಥಿತಿ ಸುಧಾರಿಸುವವರೆಗೆ ಈ ಪ್ರದೇಶದಲ್ಲಿ ಪ್ರಯಾಣ ಮಾಡದಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ. ಆಡಳಿತದಿಂದ ಪ್ರಯಾಣಕ್ಕೆ ಅನುಮತಿ ನೀಡುವವರೆಗೆ ಜನರು ತಮ್ಮ ಪ್ರಯಾಣವನ್ನು ಮುಂದೂಡಬೇಕು ಎಂದು ಮನವಿ ಮಾಡಲಾಗಿದೆ.
“ತಮಕ್ ಹಳ್ಳವು ತುಂಬಿ ಹರಿಯುತ್ತಿದ್ದು, ಅದರ ಮೇಲೆ ನಿರ್ಮಿಸಲಾದ ಸೇತುವೆಗೆ ಹಾನಿಯಾಗಿದೆ, ಮಲಾರಿಯ ಆಚೆ ಸಂಚಾರಕ್ಕೆ ಅಡ್ಡಿಯಾಗಿದೆ. ಪ್ರಸ್ತುತ, ಯಾವುದೇ ಜೀವಹಾನಿ ಸಂಭವಿಸಿದ ವರದಿಯಾಗಿಲ್ಲ” ಎಂದು ಚಮೋಲಿ ಪೊಲೀಸರು ಎಕ್ಸ್‌ನಲ್ಲಿ ಹೇಳಿಕೆ ನೀಡಿದ್ದಾರೆ. “ಪೊಲೀಸ್, ಆಡಳಿತ, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ಘಟನಾ ಸ್ಥಳಕ್ಕೆ ರವಾನಿಸಲಾಗಿದೆ. ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   4 ಮಕ್ಕಳನ್ನು ಏಕಾಂಗಿಯಾಗಿ ಬೆಳೆಸಿದ ತಂದೆ ವೃದ್ಧಾಶ್ರಮದಲ್ಲಿ ಸತ್ತಾಗ ಒಬ್ರೂ ಬರಲಿಲ್ಲ : ಮಕ್ಕಳಿಗೆ ಅಪ್ಪನ "ಡೆತ್‌ ಸರ್ಟಿಫಿಕೆಟ್‌ʼ ಮಾತ್ರ ಬೇಕಂತೆ...!

ಕಣಿವೆಯಲ್ಲಿ ನದಿಗಳು ಹಾಗೂ ಹಳ್ಳಗಳ ದಡದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಭಾರಿ ಮಳೆಯಿಂದಾಗಿ ಮುಂದಿನ ದಿನಗಳಲ್ಲಿ ನದಿಗಳು ಮತ್ತು ಹಳ್ಳಗಳ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ತಿಳಿಸಲಾಗಿದೆ.
ಉತ್ತರಾಖಂಡ ವಿಪತ್ತು ನಿರ್ವಹಣೆ ಮತ್ತು ಪುನರ್ವಸತಿ ಇಲಾಖೆಯ ಕಾರ್ಯದರ್ಶಿ ವಿನೋದಕುಮಾರ ಸುಮನ್ ಅವರು ರಾಜ್ಯದಲ್ಲಿ ಭಾನುವಾರ ರಾತ್ರಿ ಆರಂಭವಾದ ಮಳೆ ನಿರಂತರವಾಗಿ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಭಾರಿ ಮಳೆಯಿಂದಾಗಿ ಡೆಹ್ರಾಡೂನ್, ಬಾಗೇಶ್ವರ, ನೈನಿತಾಲ್ ಮತ್ತು ಚಂಪಾವತ್ ಜಿಲ್ಲೆಗಳು ಹೆಚ್ಚು ಪರಿಣಾಮಕ್ಕೆ ಒಳಗಾಗಿವೆ ಎಂದು ಅವರು ಹೇಳಿದ್ದಾರೆ. ಭಾರಿ ಮಳೆ ಹಾಗೂ ಭೂಕುಸಿತದ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಪ್ರಮುಖ ಸುದ್ದಿ :-   4 ಮಕ್ಕಳನ್ನು ಏಕಾಂಗಿಯಾಗಿ ಬೆಳೆಸಿದ ತಂದೆ ವೃದ್ಧಾಶ್ರಮದಲ್ಲಿ ಸತ್ತಾಗ ಒಬ್ರೂ ಬರಲಿಲ್ಲ : ಮಕ್ಕಳಿಗೆ ಅಪ್ಪನ "ಡೆತ್‌ ಸರ್ಟಿಫಿಕೆಟ್‌ʼ ಮಾತ್ರ ಬೇಕಂತೆ...!

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement