ಬೆಂಗಳೂರು : ಪಂಚತಾರಾ ಹೊಟೇಲ್‌ನಲ್ಲಿ ರೂಂ ಬುಕ್ ಮಾಡಿ ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ?!

ಬೆಂಗಳೂರು: ಬೆಂಗಳೂರಿನ ಪಂಚತಾರಾ ಹೋಟೆಲ್‌ವೊಂದರಲ್ಲಿ ಇಬ್ಬರು ಮಕ್ಕಳು ಹಾಸಿಗೆಯ ಮೇಲೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ತಂದೆ ಶೌಚಗೃಹದಲ್ಲಿ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದು ಕೊಲೆ ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣವಾಗಿರಬಹುದು ಎಂದು ಶಂಕಿಸಲಾಗಿದೆ.
40 ವರ್ಷದ ಇಮ್ರಾನ್ ಎಂಬಾತ ಕುತ್ತಿಗೆ ಸೀಳಿ ಶೌಚಾಲಯದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಅವರ 10 ಮತ್ತು 5 ವರ್ಷದ ಹೆಣ್ಣುಮಕ್ಕಳ ಶವಗಳು ಕೇವಲ ಮೀಟರ್ ದೂರದಲ್ಲಿ ಪತ್ತೆಯಾಗಿವೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಐಷಾರಾಮಿ ಹೋಟೆಲ್‌ನಲ್ಲಿ ಸೋಮವಾರ (ಆಗಸ್ಟ್ 10) ಈ ಘಟನೆ ನಡೆದಿದ್ದು, ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ಅವರ ತಂದೆಯೇ ಕೊಂದು, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ.

ಘಟನೆಯ ಬಳಿಕ ಗಂಭೀರ ಸ್ಥಿತಿಯಲ್ಲಿ ಪತ್ತೆಯಾದ ಇಮ್ರಾನ್ ಅವರನ್ನು ಹೋಟೆಲ್‌ನ ಭದ್ರತಾ ಸಿಬ್ಬಂದಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮಕ್ಕಳನ್ನು ಶೇಕ್‌ ಜೆಹರಾ (5) ಮತ್ತು ಶೇಕ್‌ ಜೋಯಾ (10) ಎಂದು ಗುರುತಿಸಲಾಗಿದೆ. ಮಕ್ಕಳ ತಂದೆ, ಕ್ಯಾಬ್ ಕಂಪನಿಯೊಂದರಲ್ಲಿ ಹಿರಿಯ ವ್ಯವಸ್ಥಾಪಕರಾಗಿರುವ ಎಸ್.ಜಿ. ಇಮ್ರಾನ್ (40) ನಾಗವಾರ ಮುಖ್ಯರಸ್ತೆ ಸಮೀಪದ ಬಿಲಾಲ್ ನಗರ ನಿವಾಸಿ ಎನ್ನಲಾಗಿದೆ.
ಪೊಲೀಸರ ಪ್ರಕಾರ, ಇಮ್ರಾನ್ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಹತ್ಯೆ ಮಾಡಿದ ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನಾ ಸ್ಥಳದಿಂದ ಪೊಲೀಸರು ಒಂದು ಟಿಪ್ಪಣಿಯನ್ನು ವಶಕ್ಕೆ ಪಡೆದಿದ್ದು, ಅದರಲ್ಲಿ ಪತ್ನಿ ಜೊತೆಗಿನ ವೈವಾಹಿಕ ಕಲಹದ ಕುರಿತು ಇಮ್ರಾನ್ ಉಲ್ಲೇಖಿಸಿದ್ದಾನೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರಿನಲ್ಲಿ ಅಂಡರ್‌ಪಾಸ್ ಕಾಮಗಾರಿ ವೇಳೆ ಮಣ್ಣು ಕುಸಿತ; ಇಬ್ಬರು ಸಾವು

ಪೊಲೀಸರ ತನಿಖೆಯ ಪ್ರಕಾರ, ಇಮ್ರಾನ್ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಭಾನುವಾರ (ಆಗಸ್ಟ್ 9) ಸಂಜೆ ಸುಮಾರು 4:30ಕ್ಕೆ ಹೋಟೆಲ್‌ಗೆ ಚೆಕ್‌ಇನ್ ಆಗಿದ್ದ. ಸೋಮವಾರ (ಆಗಸ್ಟ್ 10) ಹೋಟೆಲ್ ಸಿಬ್ಬಂದಿಗೆ ಕೊಠಡಿಯೊಳಗಿಂದ ಗದ್ದಲ ಕೇಳಿಬಂದಿದ್ದು, ಪರಿಶೀಲಿಸಲು ಸಿಬ್ಬಂದಿ ಕೊಠಡಿಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.
ಕೊಠಡಿಯಲ್ಲಿದ್ದ ಹಾಸಿಗೆಯ ಮೇಲೆ ಇಬ್ಬರು ಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಮ್ರಾನ್ ಸ್ನಾನಗೃಹದಲ್ಲಿ ಕತ್ತು ಸೀಳಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೊಠಡಿಯಿಂದ ಒಂದು ಚಾಕುವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇಮ್ರಾನ್ ಬರೆದಿದ್ದಾನೆ ಎನ್ನಲಾದ ಟಿಪ್ಪಣಿಯಲ್ಲಿನ ಅಂಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಮಕ್ಕಳ ಸಾವಿಗೆ ಕಾರಣವಾದ ಘಟನೆಗಳ ಸಂಪೂರ್ಣ ಹಿನ್ನೆಲೆಯನ್ನು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement