ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಬಂದರಿನ ಅಳಿವೆಯಲ್ಲಿ ಮೀನುಗಾರಿಕಾ ದೋಣಿಯೊಂದು ಮುಳುಗಿದ ಘಟನೆ ನಡೆದಿದೆ ಎಂದು ವರದಿಯಾಗಿದೆ.
‘ಶ್ರೀದೇವಿ’ ಹೆಸರಿನ ಈ ದೋಣಿ ಮುಳುಗುವ ವೇಳೆ ನಾಲ್ವರು ಮೀನುಗಾರರು ಅದರಲ್ಲಿದ್ದರು.ದೋಣಿ ಮುಳುಗುತ್ತಿರುವುದನ್ನು ಗಮನಿಸಿದ ಬಂದರಿನಲ್ಲಿದ್ದ ಇತರ ಮೀನುಗಾರರು ತಕ್ಷಣ ಕಾರ್ಯಪ್ರವೃತ್ತರಾಗಿ ರಕ್ಷಣೆಗೆ ಧಾವಿಸಿದರು. ಸಮಯಪ್ರಜ್ಞೆಯಿಂದ ಕಾರ್ಯಾಚರಣೆ ನಡೆಸಿ ದೋಣಿಯಲ್ಲಿದ್ದ ನಾಲ್ವರು ಮೀನುಗಾರರನ್ನು ಸುರಕ್ಷಿತವಾಗಿ ದಡಕ್ಕೆ ಕರೆತರಲಾಯಿತು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಎಂದಿನಂತೆ ಮೀನುಗಾರಿಕೆಗೆಂದು ಅಳಿವೆಯ ಮಾರ್ಗವಾಗಿ ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಅಳಿವೆಯ ಬಳಿ ನೀರಿನ ಸೆಳೆತ ಹಾಗೂ ಶೇಖರಣೆಯಾಗಿದ್ದ ಹೂಳಿಗೆ ಸಿಲುಕಿ ಬೋಟ್ ಏಕಾಏಕಿ ನಿಯಂತ್ರಣ ಕಳೆದುಕೊಂಡಿದೆ ಎಂದು ಹೇಳಲಾಗಿದೆ. ಗಾಬರಿಗೊಂಡ ಮೀನುಗಾರರು ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸಮೀಪದಲ್ಲಿದ್ದ ಇತರ ಮೀನುಗಾರರು ತಮ್ಮ ಬೋಟ್ಗಳನ್ನು ಅತ್ತ ತಿರುಗಿಸಿ, ನಾಲ್ವರನ್ನೂ ಸುರಕ್ಷಿತವಾಗಿ ದಡಕ್ಕೆ ಸೇರಿಸಿದ್ದಾರೆ.
ತದಡಿ ಬಂದರಿನಲ್ಲಿ ಭಾರಿ ಪ್ರಮಾಣದಲ್ಲಿ ಹೂಳು (ಸಿಲ್ಟ್) ಸಂಗ್ರಹವಾಗಿರುವುದರಿಂದ ದೋಣಿಗಳ ಸುರಕ್ಷಿತ ಸಂಚಾರ ಹಾಗೂ ಲಂಗರು ಹಾಕುವಿಕೆ ಮತ್ತು ನಿಲುಗಡೆಗೆ ತೊಂದರೆಯಾಗುತ್ತಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ.
ಬಂದರಿನಲ್ಲಿ ಸಂಗ್ರಹವಾಗಿರುವ ಹೂಳನ್ನು ತಕ್ಷಣ ತೆರವುಗೊಳಿಸುವುದರ ಜೊತೆಗೆ, ದೋಣಿಗಳ ಸುರಕ್ಷಿತ ಸಂಚಾರ ಮತ್ತು ನಿಲುಗಡೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಂಡು ಬಂದರಿನ ಸುರಕ್ಷತಾ ಪರಿಸ್ಥಿತಿಯನ್ನು ಸುಧಾರಿಸಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ