ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಬಂದರಿನ ಅಳಿವೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಿದೆ ಎಂದು ವರದಿಯಾಗಿದೆ. ಅದರಲ್ಲಿದ್ದ ನಾಲ್ವರು ಮೀನುಗಾರರು ಪಾರಾಗಿದ್ದಾರೆ.
ಎರಡ್ಮೂರು ದಿನಗಳ ಹಿಂದಷ್ಟೇ ಇದೇ ತದಡಿ ಬಂದರಿನ ಅಳಿವೆಯಲ್ಲಿ ಮೀನುಗಾರಿಕಾ ಬೋಟ್ ಮುಳುಗಿತ್ತು.
‘ಲಕ್ಷ್ಮೀ ಕೃಪ’ ಹೆಸರಿನ ಮೀನುಗಾರಿಕಾ ಬೋಟ್ ತದಡಿ ಅಳಿವೆಯಲ್ಲಿ ಸಾಗುತ್ತಿದ್ದ ವೇಳೆ ಬಿರುಸಿನ ಅಲೆಗಳಿಗೆ ಸಿಲುಕಿದೆ. ಮಂಗಳವಾರ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ್ದ ಬೋಟ್ ಅಲೆಗಳ ಹೊಡೆತಕ್ಕೆ ಸಿಲುಕಿ, ಒಳಗೆ ನೀರು ನುಗ್ಗಿದ್ದು, ನಂತರ ಬೋಟ್ ಮುಳುಗಿದೆ ಎನ್ನಲಾಗಿದೆ. ಅಪಾಯದ ಪರಿಸ್ಥಿತಿಯಲ್ಲಿದ್ದ ನಾಲ್ವರು ಮೀನುಗಾರರನ್ನು ಮತ್ತೊಂದು ಬೋಟ್ನವರು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ ಎಂದು ಹೇಳಲಾಗಿದೆ. ಬೋಟ್ ಮುಳುಗಡೆಯಿಂದ ಸುಮಾರು ₹20 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ತದಡಿ ಅಳಿವೆಯಲ್ಲಿ ದೋಣಿ ಮುಳುಗುತ್ತಿರುವುದು ಇದೇ ಮೊದಲ ಘಟನೆಯಲ್ಲ.ಕಳೆದ ಭಾನುವಾರವಷ್ಟೇ ಇದೇ ಪ್ರದೇಶದಲ್ಲಿ ಮತ್ತೊಂದು ಮೀನುಗಾರಿಕೆ ಬೋಟ್ ಮುಳುಗಿತ್ತು. ಕೆಲವೇ ದಿನಗಳ ಅಂತರದಲ್ಲಿ ಎರಡು ದೋಣಿಗಳು ಮುಳುಗಿರುವುದು ಮೀನುಗಾರರ ಆತಂಕಕ್ಕೆ ಕಾರಣವಾಗಿದೆ. ಅಳಿವೆಯಲ್ಲಿ ಸಂಚರಿಸುವ ವೇಳೆ ದೋಣಿಗಳು ಪದೇಪದೇ ಅಪಾಯಕ್ಕೆ ಸಿಲುಕುತ್ತಿವೆ ಎಂದು ಮೀನುಗಾರರು ಅಳಲು ತೋಡಿಕೊಂಡಿದ್ದಾರೆ.
ಅಳಿವೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಳು ಸಂಗ್ರಹವಾಗಿರುವುದರಿಂದ ಸಮುದ್ರದ ನೀರಿನ ಹರಿವು ಹಾಗೂ ದೋಣಿಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಮೀನುಗಾರಿಕೆಯೇ ಹಲವು ಕುಟುಂಬಗಳ ಪ್ರಮುಖ ಜೀವನೋಪಾಯವಾಗಿದ್ದು, ಮೀನುಗಾರಿಕೆ ಬೋಟ್ಗಳು ಪದೇಪದೇ ಮುಳುಗಿದರೆ ಅಥವಾ ಹಾನಿಯಾದರೆ ಮೀನುಗಾರರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸುವ ಬದಲು ತದಡಿ ಅಳಿವೆಯಲ್ಲಿನ ಹೂಳು ತೆರವುಗೊಳಿಸುವುದು ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ತುರ್ತಾಗಿ ಕೈಗೊಂಡು, ದೋಣಿಗಳ ಸುರಕ್ಷಿತ ಸಂಚಾರಕ್ಕೆ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ