ಚಾಮರಾಜನಗರ | 10 ಎಕರೆ ಅರಣ್ಯಕ್ಕೆ ಬೆಂಕಿ ; ಶಿಬಿರಗಳು ಸ್ಫೋಟ ; ಶಂಕಿತ ಬೇಟೆಗಾರರ ಸಾವಿಗೆ ಪ್ರತೀಕಾರದ ಶಂಕೆ

ಚಾಮರಾಜನಗರ : ಜಿಲ್ಲೆಯ ಶಿಲುಬೆಪುರ ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಅರಣ್ಯಕ್ಕೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದ್ದು, ಸುಮಾರು 10 ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.
ಆಗಸ್ಟ್ 15ರಂದು ಮೂವರು ಶಂಕಿತ ಬೇಟೆಗಾರರು (ಪೋಚರ್‌ಗಳು) ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಘಟನೆಗೆ ಪ್ರತೀಕಾರವಾಗಿ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.
ಶಿಲುಬೆಪುರ ಅರಣ್ಯ ಪ್ರದೇಶದಲ್ಲಿ ಹೊತ್ತಿಕೊಂಡ ಬೆಂಕಿ ವ್ಯಾಪಕವಾಗಿ ಹರಡಿದ್ದು, ಸುಮಾರು 10 ಎಕರೆ ಪ್ರದೇಶಕ್ಕೆ ಹಾನಿಯಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಇದೇ ವೇಳೆ ಜಗೇರಿ ಸಮೀಪದಲ್ಲಿದ್ದ ಬೇಟೆ ತಡೆ ಶಿಬಿರವೊಂದನ್ನೂ ಧ್ವಂಸಗೊಳಿಸಲಾಗಿದೆ.
ಆಗಸ್ಟ್ 15ರಂದು ಚಾಮರಾಜನಗರದ ಕಾವೇರಿ ವನ್ಯಜೀವಿ ಧಾಮದಲ್ಲಿ ಮೂವರು ಶಂಕಿತ ಬೇಟೆಗಾರರು ಮೃತಪಟ್ಟ ಬಳಿಕ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಮುಂದುವರಿದಿರುವ ನಡುವೆಯೇ ಈ ಘಟನೆಗಳು ನಡೆದಿವೆ. ಕಾವೇರಿ ವನ್ಯಜೀವಿ ಧಾಮದಲ್ಲಿರುವ ಹಲವು ಬೇಟೆ ತಡೆ ಶಿಬಿರಗಳನ್ನು ಅಪರಿಚಿತ ದುಷ್ಕರ್ಮಿಗಳು ಸ್ಫೋಟಕ ಬಳಸಿ ಸ್ಫೋಟಿಸಿರುವುದಾಗಿ ವರದಿಯಾಗಿದೆ.

ಕೊಥನೂರು ವಲಯದ ಮಿಂಚಿನರೆಹಳ್ಳ ಬೇಟೆ ತಡೆ ಶಿಬಿರವನ್ನು ಡೈನಮೈಟ್ ಮತ್ತು ಜೆಲಟಿನ್ ಕಡ್ಡಿಗಳನ್ನು ಬಳಸಿ ಸ್ಫೋಟಿಸಲಾಗಿದೆ ಎಂದು ತಿಳಿದುಬಂದಿದೆ. ಸ್ಫೋಟದ ತೀವ್ರತೆಗೆ ಶಿಬಿರದ ಗೋಡೆಗಳು ಹಾನಿಗೊಳಗಾಗಿದ್ದು, ಒಳಗೆ ಇರಿಸಲಾಗಿದ್ದ ಸಾಮಗ್ರಿಗಳಿಗೂ ಬೆಂಕಿ ತಗುಲಿದೆ ಎಂದು ಮೂಲಗಳು ತಿಳಿಸಿವೆ.
ಕೊಥನೂರು ವಲಯದ ಮಿಂಚಿನಹಳ್ಳಿ, ಭೀಮೇಶ್ವರಿ, ಒಲ್ಲೇಮರದ ಹಟ್ಟಿ, ಬುಡಿಕೆರೆ, ಬಂದಹಳ್ಳಿ ಮತ್ತು ಕಾಳಿದೊಡ್ಡಿ ಸೇರಿದಂತೆ ಹಲವು ಬೇಟೆ ತಡೆ ಶಿಬಿರಗಳ ಮೇಲೂ ನಡೆದಿದೆ. ಆಗಸ್ಟ್ 18-19ರ ಮಧ್ಯರಾತ್ರಿ ಈ ಶಿಬಿರಗಳನ್ನು ಗುರಿಯಾಗಿಸಿಕೊಂಡು ಸ್ಫೋಟಕ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ.
ಬೇಟೆ ತಡೆ ಶಿಬಿರಗಳ ಮೇಲೆ ನಡೆದ ದಾಳಿ ಹಾಗೂ ಅರಣ್ಯಕ್ಕೆ ಬೆಂಕಿ ಹಚ್ಚಿರುವ ಘಟನೆಯ ಹಿಂದೆ ಒಂದೇ ಗುಂಪಿನ ಕೈವಾಡವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಪ್ರಮುಖ ಸುದ್ದಿ :-   20 ರೂ. ಲಂಚದ ಆರೋಪಕ್ಕೆ 30 ವರ್ಷಗಳ ಕಾನೂನು ಹೋರಾಟ : ಸುಪ್ರೀಂಕೋರ್ಟಿನಿಂದ ಇಬ್ಬರು ಸರ್ಕಾರಿ ನೌಕರರ ಖುಲಾಸೆ

ಆಗಸ್ಟ್ 15ರ ಗುಂಡಿನ ದಾಳಿ ಪ್ರಕರಣ
ಆಗಸ್ಟ್ 15ರಂದು ಕಾವೇರಿ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿ ಬೇಟೆ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಸಿಬ್ಬಂದಿ ಬೇಟೆ ತಡೆ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಶಂಕಿತ ಬೇಟೆಗಾರರ ಗುಂಪಿನಿಂದ ಅರಣ್ಯ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆದಿದ್ದು, ಆತ್ಮರಕ್ಷಣೆಗಾಗಿ ಸಿಬ್ಬಂದಿ ಪ್ರತಿದಾಳಿ ನಡೆಸಬೇಕಾಯಿತು ಎಂಬುದು ಧಿಕಾರಿಗಳು ಹೇಳಿದ್ದಾರೆ.
ಈ ಗುಂಡಿನ ಚಕಮಕಿಯಲ್ಲಿ ಆಂಥೋನಿ ಸ್ವಾಮಿ, ಜಾನ್ ರೋಸ್ ಪೀಟರ್ ಮತ್ತು ಕುಮಾರ ಎಂಬ ಮೂವರು ಮೃತಪಟ್ಟಿದ್ದರು. ಮೃತರು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ವಿವಿಧ ಗ್ರಾಮಗಳ ನಿವಾಸಿಗಳು ಎನ್ನಲಾಗಿದೆ.
ಈ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಅರಣ್ಯ ಇಲಾಖೆ ನೀಡಿರುವ ವಿವರಣೆಯನ್ನು ಪ್ರಶ್ನಿಸಿ ತಮಿಳುನಾಡಿನಲ್ಲಿ ಆಕ್ರೋಶ ವ್ಯಕ್ತವಾಗಿದೆ.

ತನಿಖೆಯ ಬಳಿಕವೇ ಪ್ರತಿಕ್ರಿಯೆ: ಸಿಎಂ ಶಿವಕುಮಾರ
ಮೂವರು ಶಂಕಿತ ಬೇಟೆಗಾರರ ಸಾವಿನ ಕುರಿತು ನಡೆಯುತ್ತಿರುವ ತನಿಖೆಯ ಫಲಿತಾಂಶಕ್ಕಾಗಿ ಸರ್ಕಾರ ಕಾಯುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬುಧವಾರ ಹೇಳಿದ್ದಾರೆ. ತನಿಖೆ ಪೂರ್ಣಗೊಳ್ಳುವ ಮೊದಲು ಈ ವಿಚಾರದ ಬಗ್ಗೆ ಸರ್ಕಾರ ಯಾವುದೇ ಅಂತಿಮ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.
ತಮಿಳುನಾಡಿನಲ್ಲೂ ಪ್ರತಿಧ್ವನಿಸಿದ ಪ್ರಕರಣ
ಚಾಮರಾಜನಗರದ ಅರಣ್ಯ ಗುಂಡಿನ ದಾಳಿ ಪ್ರಕರಣದ ಪ್ರತಿಧ್ವನಿ ನೆರೆಯ ತಮಿಳುನಾಡಿನಲ್ಲೂ ಕೇಳಿಬಂದಿದೆ. ತಮಿಳುನಾಡು ಮುಖ್ಯಮಂತ್ರಿ ಸಿ. ವಿಜಯ ಅವರು ಮೂವರ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದು, ಗುಂಡಿನ ದಾಳಿಯ ಕುರಿತು ಕರ್ನಾಟಕ ಅರಣ್ಯ ಇಲಾಖೆ ನೀಡಿರುವ ವಿವರಣೆ “ಸ್ವೀಕಾರಾರ್ಹವಲ್ಲ” ಎಂದು ಹೇಳಿದ್ದಾರೆ. ಈ ಪ್ರಕರಣದ ಕುರಿತು ಉನ್ನತ ಮಟ್ಟದ ಸಮಿತಿಯಿಂದ ನ್ಯಾಯಸಮ್ಮತ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರಮುಖ ಸುದ್ದಿ :-   27 ಬಾರಿ ಇರಿತ..‘ಬಾಬು’ ಎಂಬ ಕೊನೆಯ ಪದ: ಪ್ರಾಂಶುಪಾಲೆಯ ಕೊಲೆ ಪ್ರಕರಣ ಭೇದಿಸಿದ ಪೊಲೀಸರು ; ಇಬ್ಬರು ವಿದ್ಯಾರ್ಥಿಗಳ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement