ಶಿಗ್ಗಾವಿ | ದೇವಸ್ಥಾನದ ಆವರಣದಲ್ಲಿ ಮೂತ್ರ ವಿಸರ್ಜನೆ ಆರೋಪ; ವ್ಯಕ್ತಿಯ ಬಂಧನ

ಶಿಗ್ಗಾವಿ: ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಆಂಜನೇಯ ದೇವಸ್ಥಾನದ ಆವರಣದಲ್ಲಿ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಶಿಗ್ಗಾವಿ ಪಟ್ಟಣದಲ್ಲಿ ನಡೆದಿರುವ ಈ ಘಟನೆಗೆ ಸಂಬಂಧಿಸಿದಂತೆ ಹಾನಗಲ್ ಪಟ್ಟಣದ ನಿವಾಸಿ ಎನ್ನಲಾಗಿರುವ ಮಹಮ್ಮದ್ ಜಾಫರ್ ಖದರಮಂಡಲಗಿ ಎಂಬಾತನ ವಿರುದ್ಧ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಸ್ಥಳೀಯರು ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಹೇಳಲಾಗಿದೆ.
ಈ ಘಟನೆಯು ಹಿಂದೂ ಸಂಘಟನೆಗಳಿಂದ ಪ್ರತಿಭಟನೆಗೆ ಕಾರಣವಾಯಿತು ಮತ್ತು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಈ ಕುರಿತು ದೂರು ನೀಡಲಾಗಿದ್ದು, ಆರೋಪಿಯು ದೇವಸ್ಥಾನದೊಳಗೆ ತೆರಳಿ ಮಲಗಿದ್ದಲ್ಲದೆ, ಅಲ್ಲಿ ಮೂತ್ರ ವಿಸರ್ಜನೆ ಮಾಡಿ ದೇವಸ್ಥಾನವನ್ನು ಅಪವಿತ್ರಗೊಳಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ಶಿಗ್ಗಾವಿ ಪೊಲೀಸ್ ಠಾಣೆ ಎದುರು ಕುಳಿತು ಪ್ರತಿಭಟನೆ ನಡೆಸಿದರು.
ಘಟನೆಯ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಸಂಪೂರ್ಣವಾಗಿ ಶುಚಿಗೊಳಿಸಿ, ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಶುದ್ಧೀಕರಣ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು. ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಪ್ರಮುಖ ಸುದ್ದಿ :-   ಪಶ್ಚಿಮ ಘಟ್ಟದ 1449 ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶ : ಕೇಂದ್ರದ ಕರಡು ಅಧಿಸೂಚನೆ ತಿರಸ್ಕರಿಸಲು ಕರ್ನಾಟಕ ನಿರ್ಧಾರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement