ನವದೆಹಲಿ: ಜುಲೈ 20ರಂದು ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್‌ಗಳನ್ನು ಬಳಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕೊನೆಗೂ ಎಫ್‌ಐಆರ್ (FIR) ದಾಖಲಿಸಿದ್ದಾರೆ. ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 118 ಮತ್ತು 125ರ ಅಡಿಯಲ್ಲಿ ದಾಖಲಿಸಲಾಗಿದೆ.
ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಶುಕ್ರವಾರ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಹೊರಗೆ ಧರಣಿ ನಡೆಸಿದ್ದರು. ಜುಲೈ 20ರ ಪ್ರತಿಭಟನೆಯಲ್ಲಿ ಪೆಲೆಟ್‌ಗಳಿಂದ ಗಾಯಗೊಂಡಿರುವುದಾಗಿ ಆರೋಪಿಸಿರುವ 19 ವರ್ಷದ ಸಾಹಿಲ್ ಲೋಚಬ್ ಅವರನ್ನು ತಮ್ಮೊಂದಿಗೆ ಕರೆದುಕೊಂಡು ಪೊಲೀಸ್ ಠಾಣೆಗೆ ಆಗಮಿಸಿದ್ದ ರಾಹುಲ್ ಗಾಂಧಿ ಎಫ್‌ಐಆರ್ ದಾಖಲಾಗುವವರೆಗೂ ತಾವು ಸ್ಥಳದಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಎಫ್‌ಐಆರ್‌ನಲ್ಲಿ ಬಿಎನ್‌ಎಸ್ (BNS) ಸೆಕ್ಷನ್ 118 ಅಡಿಯಲ್ಲಿ ಅಪಾಯಕಾರಿ ಆಯುಧ ಅಥವಾ ಇತರ ಅಪಾಯಕಾರಿ ವಿಧಾನಗಳಿಂದ ಉದ್ದೇಶಪೂರ್ವಕವಾಗಿ ಗಾಯ ಅಥವಾ ಗಂಭೀರ ಗಾಯ ಉಂಟುಮಾಡುವ ಕೃತ್ಯಕ್ಕೆ ಸಂಬಂಧಿಸಿದ ಆರೋಪಗಳನ್ನು ದಾಖಲಿಸಲಾಗಿದೆ. ಸೆಕ್ಷನ್ 125 ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟುಮಾಡುವ ಕೃತ್ಯಗಳಿಗೆ ಸಂಬಂಧಿಸಿದೆ.
19 ವರ್ಷದ ಸಾಹಿಲ್ ಲೋಚಬ್ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಜುಲೈ 20ರ ಪ್ರತಿಭಟನೆಯ ವೇಳೆ ಪೆಲೆಟ್ ಗನ್‌ನಿಂದ ಗುಂಡು ಹಾರಿಸಲಾಗಿದ್ದು, ಅದರಿಂದ ತಮಗೆ ಗಾಯಗಳಾಗಿವೆ ಎಂದು ಅವರು ಆರೋಪಿಸಿದ್ದಾರೆ.
‘ನ್ಯಾಯದ ಮೊದಲ ಹೆಜ್ಜೆ’ ಎಂದ ರಾಹುಲ್ ಗಾಂಧಿ
ಎಫ್‌ಐಆರ್ ದಾಖಲಾಗಿರುವುದನ್ನು ರಾಹುಲ್ ಗಾಂಧಿ “ನ್ಯಾಯದ ಮೊದಲ ಹೆಜ್ಜೆ” ಎಂದು ಬಣ್ಣಿಸಿದ್ದಾರೆ. ಲೋಚಬ್ ಅವರ ದೇಹಕ್ಕೆ ಸುಮಾರು ೨00 ಪೆಲೆಟ್‌ಗಳ ಗಾಯಗಳಾಗಿವೆ ಮತ್ತು ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಎಫ್‌ಐಆರ್ ದಾಖಲಿಸಲು ಸುಮಾರು ಒಂದು ತಿಂಗಳು ಸಮಯ ತೆಗೆದುಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದು, ಪ್ರಕರಣ ದಾಖಲಿಸಲು ಅಂತಿಮ ಅನುಮೋದನೆ ಕೇಂದ್ರ ಗೃಹ ಸಚಿವಾಲಯ ಮತ್ತು ಕೇಂದ್ರ ಗೃಹ ಸಚಿವರಿಂದ ಬಂದಿತ್ತು ಎಂದೂ ಹೇಳಿದ್ದಾರೆ.
ಪೊಲೀಸ್ ಠಾಣೆ ಎದುರು ಧರಣಿ ನಡೆಸಿದ್ದ ಗಾಂಧಿ
ಪೆಲೆಟ್ ಗನ್ ಬಳಕೆಯ ಆರೋಪದ ಕುರಿತು ಎಫ್‌ಐಅರ್ ದಾಖಲಿಸುವಂತೆ ಒತ್ತಾಯಿಸಿ ರಾಹುಲ್ ಗಾಂಧಿ ಈ ಹಿಂದೆ ಪೊಲೀಸರನ್ನು ಸಂಪರ್ಕಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾದ ಬಳಿಕ ಅವರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಡಿಸಿಪಿ ಕಚೇರಿ ಹೊರಗೆ ಧರಣಿ ನಡೆಸಿದ್ದರು.
ಜುಲೈ 20ರ ಜಂತರ್ ಮಂತರ್ ಪ್ರತಿಭಟನೆಯ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ವಿದ್ಯಾರ್ಥಿಗಳ ವಿರುದ್ಧ ಪೆಲೆಟ್ ಗನ್ ಬಳಸಿದ್ದಾರೆ ಎಂಬ ಆರೋಪವನ್ನು ದೆಹಲಿ ಪೊಲೀಸರು ಈ ಹಿಂದೆ ತಳ್ಳಿಹಾಕಿದ್ದರು.
ಆರೋಪದ ಬಗ್ಗೆ ತನಿಖೆ ಮುಂದುವರಿಕೆ
ಜುಲೈ 20ರ ಪ್ರತಿಭಟನೆಯ ವೇಳೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪವನ್ನು ದೆಹಲಿ ಪೊಲೀಸರು ನಿರಾಕರಿಸುತ್ತಿದ್ದರೂ, ಇದೀಗ ಲೋಚಬ್ ಅವರ ದೂರಿನ ಆಧಾರದ ಮೇಲೆ ಎಫ್‌ಐಆರ್ (FIR) ದಾಖಲಾಗಿದೆ. ಪ್ರತಿಭಟನಾಕಾರರ ವಿರುದ್ಧ ಅತಿಯಾದ ಮತ್ತು ಅಸಮರ್ಪಕ ಬಲಪ್ರಯೋಗ ನಡೆದಿದೆ ಎಂಬ ಆರೋಪಗಳನ್ನೂ ಪರಿಶೀಲಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ನೇಮಿಸಿರುವ ಉನ್ನತ ಮಟ್ಟದ ಸಮಿತಿಯೂ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಬಲಪ್ರಯೋಗದ ಆರೋಪಗಳನ್ನು ಪರಿಶೀಲಿಸುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ