ನವದೆಹಲಿ : ಶ್ರೀ ಶ್ರೀ ರವಿಶಂಕರ್ ನೇತೃತ್ವದ ‘ಆರ್ಟ್ ಆಫ್ ಲಿವಿಂಗ್’ (Art of Living) ಸಂಸ್ಥೆಗೆ ಸುಪ್ರೀಂ ಕೋರ್ಟ್‌ನಿಂದ ದೊಡ್ಡ ರಿಲೀಫ್ ಸಿಕ್ಕಿದ್ದು, 2016ರಲ್ಲಿ ದೆಹಲಿಯ ಯಮುನಾ ನದಿ ಪ್ರವಾಹ ಪ್ರದೇಶದಲ್ಲಿ ನಡೆದ ‘ವಿಶ್ವ ಸಂಸ್ಕೃತಿ ಉತ್ಸವ’ದಿಂದ ಪರಿಸರಕ್ಕೆ ಹಾನಿಯಾಗಿದೆ ಎಂದು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ನೀಡಿದ್ದ 2017ರ ಆದೇಶವನ್ನು ಸುಪ್ರೀಂ ಕೋರ್ಟ್ ಶನಿವಾರ ರದ್ದುಗೊಳಿಸಿದೆ. ಅಲ್ಲದೆ, ಫೌಂಡೇಶನ್ ₹5 ಕೋಟಿ ಪರಿಸರ ಪರಿಹಾರವಾಗಿ ಪಾವತಿಸಿದ್ದ ಮೊತ್ತವನ್ನು ಹಿಂದಿರುಗಿಸುವಂತೆ ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ (DDA) ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಸತೀಶಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಎನ್.ಕೆ. ಸಿಂಗ್ ಅವರನ್ನೊಳಗೊಂಡ ಪೀಠವು, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಅಡಿಯಲ್ಲಿ ನೋಂದಾಯಿತ ಸಾರ್ವಜನಿಕ ಧರ್ಮದರ್ಶಿ ಟ್ರಸ್ಟ್ ಆಗಿರುವ ‘ವ್ಯಕ್ತಿ ವಿಕಾಸ ಕೇಂದ್ರ’ ಪಾವತಿಸಿದ್ದ ದಂಡದ ಮೊತ್ತವನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರವು (DDA) ಮರಳಿ ನೀಡಬೇಕೆಂದು ಆದೇಶಿಸಿದೆ.
2016ರ ಮಾರ್ಚ್‌ನಲ್ಲಿ, ಮೂರು ದಿನಗಳ ವಿಶ್ವ ಸಂಸ್ಕೃತಿ ಉತ್ಸವ ಆರಂಭವಾಗುವ ಕೆಲವೇ ದಿನಗಳ ಮೊದಲು, ಎನ್‌ಜಿಟಿ (NGT) ಮಧ್ಯಂತರ ಆದೇಶ ನೀಡಿತ್ತು. ಉತ್ಸವ ನಡೆಸಲು ಅನುಮತಿ ನೀಡಿದ ನ್ಯಾಯಮಂಡಳಿ, ಪರಿಸರ ಪರಿಹಾರವಾಗಿ ₹5 ಕೋಟಿ ಠೇವಣಿ ಇಡುವಂತೆ ಫೌಂಡೇಶನ್‌ಗೆ ಸೂಚಿಸಿತ್ತು.ಅದೇ ವೇಳೆ, ಯಮುನಾ ಪ್ರವಾಹ ಪ್ರದೇಶಕ್ಕೆ ಉಂಟಾದ ಪರಿಸರ ಹಾನಿಯ ಪ್ರಮಾಣವನ್ನು ನಂತರದ ಮೌಲ್ಯಮಾಪನದ ಮೂಲಕ ನಿರ್ಧರಿಸಿ, ಅಂತಿಮವಾಗಿ ನಿಗದಿಯಾಗುವ ಪರಿಹಾರ ಮೊತ್ತಕ್ಕೆ ಈ ₹5 ಕೋಟಿಯನ್ನು ಹೊಂದಾಣಿಕೆ ಮಾಡಲಾಗುವುದು ಎಂದು ಹೇಳಿತ್ತು.
2016ರ ಮಾರ್ಚ್ 11ರಿಂದ 13ರವರೆಗೆ ದೆಹಲಿಯ ಯಮುನಾ ಪ್ರವಾಹ ಪ್ರದೇಶದಲ್ಲಿ ವಿಶ್ವ ಸಂಸ್ಕೃತಿ ಉತ್ಸವ ನಡೆದಿತ್ತು. ಉತ್ಸವಕ್ಕಾಗಿ ರಸ್ತೆಗಳು, ರ‍್ಯಾಂಪ್‌ಗಳು ಹಾಗೂ ಇತರ ಹಲವು ತಾತ್ಕಾಲಿಕ ರಚನೆಗಳನ್ನು ನಿರ್ಮಿಸಲಾಗಿತ್ತು. ಇದರಿಂದ ಪ್ರವಾಹ ಪ್ರದೇಶದ ಪರಿಸರಕ್ಕೆ ಹಾನಿಯಾಗಿರುವುದು, ಪ್ರದೇಶದ ಭೌಗೋಳಿಕ ಸ್ವರೂಪ ಬದಲಾಗಿರುವುದು ಹಾಗೂ ನೀರಿನ ನೈಸರ್ಗಿಕ ಹರಿವಿಗೆ ಅಡ್ಡಿಯುಂಟಾಗಿರುವುದು ಸೇರಿದಂತೆ ಹಲವು ಗಂಭೀರ ಪರಿಸರ ಸಂಬಂಧಿ ಆತಂಕಗಳು ವ್ಯಕ್ತವಾಗಿದ್ದವು.
2017ರ ಡಿಸೆಂಬರ್‌ನಲ್ಲಿ ನೀಡಿದ ಅಂತಿಮ ತೀರ್ಪಿನಲ್ಲಿ, ತಜ್ಞರ ಸಮಿತಿಯ ವರದಿಯನ್ನು ಆಧರಿಸಿ ಯಮುನಾ ಪ್ರವಾಹ ಪ್ರದೇಶಕ್ಕೆ ಉಂಟಾದ ಹಾನಿಗೆ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಹೊಣೆಗಾರ ಎಂದು ಎನ್‌ಜಿಟಿ ತೀರ್ಮಾನಿಸಿತ್ತು. ಆದರೆ, ಫೌಂಡೇಶನ್ ಮೇಲೆ ಹೆಚ್ಚುವರಿ ದಂಡವನ್ನು ವಿಧಿಸಿರಲಿಲ್ಲ. ಈಗಾಗಲೇ ಠೇವಣಿ ಮಾಡಲಾಗಿದ್ದ ₹5 ಕೋಟಿಯನ್ನು ಯಮುನಾ ಪ್ರವಾಹ ಪ್ರದೇಶದ ಪುನಃಸ್ಥಾಪನೆಗೆ ಡಿಡಿಎ ಬಳಸಬೇಕು ಎಂದು ನಿರ್ದೇಶಿಸಿತ್ತು. ಈ ತೀರ್ಪಿನ ವಿರುದ್ಧ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಫೌಂಡೇಶನ್‌ನ ವಾದವೇನು?
ಪ್ರಕರಣದಲ್ಲಿ ಫೌಂಡೇಶನ್ ಕಾರ್ಯಕ್ರಮ ನಡೆದ ಸ್ಥಳವನ್ನು ಅಧಿಕೃತವಾಗಿ ಪ್ರವಾಹ ಪ್ರದೇಶ (floodplain) ಎಂದು ಗುರುತಿಸಲಾಗಿರಲಿಲ್ಲ ಎಂದು ಅದು ವಾದಿಸಿತ್ತು.
ಇದಲ್ಲದೆ, ಉತ್ಸವದಿಂದ ನಿಖರವಾಗಿ ಎಷ್ಟು ಪರಿಸರ ಹಾನಿಯಾಗಿದೆ ಮತ್ತು ಆ ಹಾನಿಗೆ ಫೌಂಡೇಶನ್ ಎಷ್ಟರ ಮಟ್ಟಿಗೆ ಕಾರಣವಾಗಿದೆ ಎಂಬುದನ್ನು ತೋರಿಸುವ ವೈಜ್ಞಾನಿಕ ಮೌಲ್ಯಮಾಪನ ನಡೆದಿಲ್ಲ ಎಂದೂ ಫೌಂಡೇಶನ್ ಹೇಳಿತ್ತು. ಕಾರ್ಯಕ್ರಮಕ್ಕೆ ಅಗತ್ಯವಾದ ಅನುಮತಿಗಳನ್ನು ಡಿಡಿಎ (DDA) ಸೇರಿದಂತೆ ಸಂಬಂಧಿತ ಸರ್ಕಾರಿ ಸಂಸ್ಥೆಗಳು ನೀಡಿದ್ದರೂ, ಪರಿಸರ ಹಾನಿಯ ಜವಾಬ್ದಾರಿಯನ್ನು ಕೇವಲ ಫೌಂಡೇಶನ್ ಮೇಲೆ ಹೊರಿಸಿರುವುದು ಸರಿಯಲ್ಲ ಎಂಬುದು ಅದರ ಮತ್ತೊಂದು ವಾದವಾಗಿತ್ತು.
ಉತ್ಸವಕ್ಕೆ ಅನುಮತಿ ನೀಡುವ ಪ್ರಕ್ರಿಯೆಯಲ್ಲಿ ಡಿಡಿಎ ಮತ್ತು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (DPCC) ಕೂಡ ಲೋಪವೆಸಗಿವೆ ಎಂದು ಎನ್‌ಜಿಟಿ ಈ ಹಿಂದೆ ಟೀಕಿಸಿತ್ತು. ಈ ಸಂಸ್ಥೆಗಳ ಮೇಲೂ ಪ್ರತ್ಯೇಕ ಮೊತ್ತಗಳನ್ನು ವಿಧಿಸಿತ್ತು.
ಈ ಎಲ್ಲಾ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಶನಿವಾರ ವಿವಿಕೆಐ (VVKI) ಸಲ್ಲಿಸಿದ್ದ ಮೇಲ್ಮನವಿಯನ್ನು ಅಂಗೀಕರಿಸಿ ಎನ್‌ಜಿಟಿಯ 2017ರ ತೀರ್ಪನ್ನು ರದ್ದುಗೊಳಿಸಿದೆ. ಯಾವುದೇ ನೇರ ಸಾಕ್ಷ್ಯಗಳಿಲ್ಲದ ಕಾರಣ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದ್ದು, ಜೊತೆಗೆ, ಪರಿಸರ ಪರಿಹಾರವಾಗಿ ಫೌಂಡೇಶನ್ ಠೇವಣಿ ಮಾಡಿದ್ದ ₹5 ಕೋಟಿಯನ್ನು ಡಿಡಿಎ ವಾಪಸ್ ನೀಡಬೇಕು ಎಂದು ನಿರ್ದೇಶಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ