23ನೇ ವಯಸ್ಸಿನಲ್ಲಿ ಕೊಲೆ ಮಾಡಿ ಪರಾರಿ : 42 ವರ್ಷಗಳ ಬಳಿಕ 65ನೇ ವಯಸ್ಸಿನಲ್ಲಿ ಈತ ಪೊಲೀಸರ ಬಲೆಗೆ ಬಿದ್ದಿದ್ದೇ ರೋಚಕ !

ನವದೆಹಲಿ : ಕೊಲೆ ಪ್ರಕರಣವೊಂದರಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ 65 ವರ್ಷದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 1984ರಲ್ಲಿ ಪಶ್ಚಿಮ ದೆಹಲಿಯ ಜನಕಪುರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದ ಆರೋಪಿ ನತ್ತು ಅಲಿಯಾಸ್ ನತ್ತೂಲಾಲ ಎಂಬ ಆರೋಪಿಯನ್ನು ಸೆಂಟ್ರಲ್ ರೇಂಜ್ ಕ್ರೈಂ ಬ್ರಾಂಚ್ ಹಲವು ತಿಂಗಳ ಸತತ ಕಾರ್ಯಾಚರಣೆಯ ಬಳಿಕ ಬಂಧಿಸಿದೆ.
ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ನಿವಾಸಿಯಾಗಿರುವ ನತ್ತು ಅಲಿಯಾಸ್ ನತ್ತೂಲಾಲ ವಿರುದ್ಧ ಮೇ 23, 1984ರಂದು ದೆಹಲಿಯ ಜನಕಪುರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಂಖ್ಯೆ 252/1984 ದಾಖಲಿಸಲಾಗಿತ್ತು. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ 42 ವರ್ಷಗಳ ಕಾಲ ತಲೆತಪ್ಪಿಸಿಕೊಂಡಿದ್ದ ಆತನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
1984ರ ಮೇ 22 ಮತ್ತು 23ರ ಮಧ್ಯರಾತ್ರಿ ವಿಕಾಸಪುರಿಯ ಜಿಲ್ಲಾ ಉದ್ಯಾನವನದಲ್ಲಿ ಹಲವು ಚಾಕು ಇರಿತದ ಗಾಯಗಳಿದ್ದ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ನಂತರ ಮೃತನನ್ನು ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ನಿವಾಸಿ ಅಶೋಕಕುಮಾರ ಎಂದು ಗುರುತಿಸಲಾಗಿತ್ತು.
ಆರಂಭಿಕ ತನಿಖೆಯಲ್ಲಿ ಈ ಕೊಲೆ ಪ್ರಕರಣದಲ್ಲಿ ಸೀತಾಪುರದ ನಿವಾಸಿ ಭಭೂತಿ ಪ್ರಸಾದ ಎಂಬಾತನ ಪಾತ್ರ ಬೆಳಕಿಗೆ ಬಂದಿತ್ತು. ಆತನನ್ನು ಪೊಲೀಸರು ಬಂಧಿಸಿ, ಕೊಲೆಗೆ ಬಳಸಲಾಗಿದೆ ಎಂದು ಹೇಳಲಾದ ಚಾಕುವನ್ನೂ ವಶಪಡಿಸಿಕೊಂಡಿದ್ದರು. ಆದರೆ ಈ ಪ್ರಕರಣದ ಸಹ ಆರೋಪಿ ನತ್ತು ಅಲಿಯಾಸ್ ನತ್ತೂಲಾಲ ಪೊಲೀಸರ ಕೈಗೆ ಸಿಗದೆ 42 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ.

ಹಳೆಯ ಕಡತ, ಸೀಮಿತ ಮಾಹಿತಿ; ಆದರೂ ಬಿಡದ ಪೊಲೀಸರು
42 ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರಿಂದ ಹಳೆಯ ಪ್ರಕರಣದ ಕಡತಗಳಲ್ಲಿ ಲಭ್ಯವಿದ್ದ ಮಾಹಿತಿ ಸೀಮಿತವಾಗಿತ್ತು. ಹೀಗಾಗಿ ಆರೋಪಿಯನ್ನು ಪತ್ತೆಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಆದರೆ ಇದನ್ನು ವಿಶೇಷ ಸವಾಲಾಗಿ ಸ್ವೀಕರಿಸಿದ ದೆಹಲಿ ಪೊಲೀಸ್‌ ಇಲಾಖೆ, ಆರೋಪಿಯನ್ನು ಪತ್ತೆಹಚ್ಚಲು ವಿಶೇಷ ತಂಡವೊಂದನ್ನು ರಚಿಸಿತು.
ಇನ್ಸ್‌ಪೆಕ್ಟರ್ ಸುನಿಲಕುಮಾರ ಕಲ್ಖಂಡೆ ನೇತೃತ್ವದ ತಂಡದಲ್ಲಿ ಎಸ್‌ಐ ದೇವೇಂದ್ರ ಅಂತಿಲ್ ಹಾಗೂ ಇತರ ಒಂಬತ್ತು ಸಿಬ್ಬಂದಿ ಇದ್ದರು.
ತಂಡವು ಹಳೆಯ ಪ್ರಕರಣದ ಕಡತಗಳಲ್ಲಿದ್ದ ಮಾಹಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಹೊಸ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಿತು. ಉತ್ತರ ಪ್ರದೇಶದ ಸೀತಾಪುರ ಮತ್ತು ಹರ್ದೋಯಿ ಜಿಲ್ಲೆಗಳಲ್ಲಿ ಹಲವು ತಿಂಗಳುಗಳ ಕಾಲ ಸ್ಥಳ ಪರಿಶೀಲನೆ ನಡೆಸಿ, ಆರೋಪಿಯ ಗುರುತು, ಚಲನವಲನ ಹಾಗೂ ಆತನ ಇರುವಿಕೆಯ ಬಗ್ಗೆ ಮಾಹಿತಿ ಕಲೆಹಾಕಿತು.

ಪ್ರಮುಖ ಸುದ್ದಿ :-   ಬಿಸಿಐ ಅಧ್ಯಕ್ಷ ಮನನ್‌ಕುಕುಮಾರ ಮಿಶ್ರಾ ರಾಜೀನಾಮೆಗೆ ಒತ್ತಾಯಿಸಿ ಪತ್ರ ಬರೆದ ಬಿಸಿಐ ಸಹ ಅಧ್ಯಕ್ಷ ವೈ.ಆರ್. ಸದಾಶಿವ ರೆಡ್ಡಿ

ಊರಿಗೆ ಬರುತ್ತಿರುವ ಬಗ್ಗೆ ಮಾಹಿತಿ…
ಹರ್ದೋಯಿ ಜಿಲ್ಲೆಯ ಪಾಲಿಯಲ್ಲಿ ನಡೆಸಿದ ಪರಿಶೀಲನೆಯ ವೇಳೆ ಆರೋಪಿಯು ಜೀವಂತವಾಗಿದ್ದು, ಕೆಲವೊಮ್ಮೆ ತನ್ನ ಸ್ವಗ್ರಾಮಕ್ಕೆ ಬರುತ್ತಿರುತ್ತಾನೆ ಎಂಬ ಮಾಹಿತಿ ಪೊಲೀಸ್‌ ತಂಡಕ್ಕೆ ಲಭಿಸಿತು. ಈ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಪೊಲೀಸರು ಸ್ಥಳೀಯವಾಗಿ ಪರಿಶೀಲನೆ ತೀವ್ರಗೊಳಿಸಿ, ಯಾರಿಗೂ ಗೊತ್ತಾಗದಂತೆ ನಿಗಾ ಇಟ್ಟಿದ್ದರು.
ಆಗಸ್ಟ್ 17ರಂದು ತಂಡ ರೂಪಿಸಿದ್ದ ಆರೋಪಿಯ ದೈಹಿಕ ವಿವರಗಳಿಗೆ ಹೊಂದಿಕೆಯಾಗುವ ಅನುಮಾನಾಸ್ಪದ ವ್ಯಕ್ತಿಯೊಬ್ಬ ಊರಿನಲ್ಲಿ ಕಾಣಿಸಿಕೊಂಡಿದ್ದಾನೆ ಎಂಬ ಮಾಹಿತಿ ತನಿಖಾಧಿಕಾರಿಗಳಿಗೆ ಸಿಕ್ಕಿತು. ಇದರ ಬೆನ್ನಲ್ಲೇ ಆರೋಪಿಯ ಮೇಲೆ ಮತ್ತಷ್ಟು ನಿಗಾ ಇಡಲಾಯಿತು.
ಅಂತಿಮವಾಗಿ ಆಗಸ್ಟ್ 18ರಂದು ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ಪೊಲೀಸ್‌ ತಂಡವು ನತ್ತೂಲಾಲನನ್ನು ಆತನ ಗ್ರಾಮದ ಸಮೀಪ ಪತ್ತೆಹಚ್ಚಿತು. ಆತ ಉತ್ತರ ಪ್ರದೇಶದ ಫರೂಖಾಬಾದ್ ಕಡೆಗೆ ಪ್ರಯಾಣಿಸುತ್ತಿದ್ದಾಗ ಪೊಲೀಸರು ಆತನನ್ನು ಬಂಧಿಸಿದರು.

ಕೊಲೆಯ ಹಿಂದಿತ್ತು ವೈಯಕ್ತಿಕ ವಿವಾದ?
ತನಿಖೆಯ ಪ್ರಕಾರ ಆರೋಪಿಗಳಾದ ನತ್ತುಲಾಲ ಮತ್ತು ಭಭೂತಿ ಪ್ರಸಾದ ಸ್ನೇಹಿತರಾಗಿದ್ದರು. ಅಶೋಕಕುಮಾರ ಮತ್ತು ಭಭೂತಿ ಪ್ರಸಾದ ಕೂಡ ಒಂದೇ ಗ್ರಾಮದವರಾಗಿದ್ದರು. ಮೃತ ಅಶೋಕಕುಮಾರ, ಆರೋಪಿ ಭಭೂತಿ ಪ್ರಸಾದನ ಪತ್ನಿ ಜೊತೆ ಸಂಬಂಧದ ಬೆಳೆಸುವ ಉದ್ದೇಶದಿಂದ ಸಲುಗೆ ಬೆಳೆಸಿಕೊಳ್ಳಲು ಮುಂದಾಗಿದ್ದನೆಂಬ ಆರೋಪವಿತ್ತು. ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ರಾತ್ರಿ ಇಬ್ಬರು ಆರೋಪಿಗಳು ಹಾಗೂ ಮೃತ ವ್ಯಕ್ತಿ ಉದ್ಯಾನವನದಲ್ಲಿ ಒಟ್ಟಿಗೆ ಮದ್ಯ ಸೇವಿಸಿದ್ದರು. ಬಳಿಕ ನತ್ತುಲಾಲ ಮತ್ತು ಭಭೂತಿ ಪ್ರಸಾದ ಸೇರಿ ಅಶೋಕಕುಮಾರನನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೀರ್ಘಕಾಲ ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ನತ್ತುಲಾಲ ಉತ್ತರ ಪ್ರದೇಶದ ವಿವಿಧ ಸ್ಥಳಗಳ ತರಕಾರಿ ಮಾರುಕಟ್ಟೆಗಳಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಪೊಲೀಸರ ಗಮನಕ್ಕೆ ಬಾರದಂತೆ ಲೋ ಪ್ರೊಫೈಲ್‌ನಲ್ಲಿ ಬದುಕುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಭಾರತ್‌ 6G ಟೆಸ್ಟ್‌ಬೆಡ್‌ನಲ್ಲಿ 6.39 Gbps ವೇಗದ ಡಾಟಾ ಟ್ರಾನ್ಸ್ಮಿಶನ್‌ : ಜಾಗತಿಕ 6G ತಂತ್ರಜ್ಞಾನದಲ್ಲಿ ಭಾರತದ ಮಹತ್ವದ ಸಾಧನೆ

ಮದುವೆಯಾಗಲಿಲ್ಲ….
ನತ್ತುಲಾಲ ಮದುವೆಯಾಗಲಿಲ್ಲ ಮತ್ತು ಒಂಟಿಯಾಗಿ ವಾಸಿಸುತ್ತಿದ್ದ, ಇದು ಅತನಿಗೆ ಹಲವು ದಶಕಗಳ ಕಾಲ ಯಾರ ಗಮನಕ್ಕೂ ಬಾರದಂತೆ ಇರಲು ಸುಲಭವಾಯಿತು ಎಂದು ತನಿಖಾಧಿಕಾರಿಗಳು ನಂಬುತ್ತಾರೆ.
ಆತನ ವಿರುದ್ಧ ಈ ಹಿಂದೆಯೂ ಮತ್ತೊಂದು ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಉತ್ತರ ಪ್ರದೇಶದ ಫರೂಖಾಬಾದ್‌ನ ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಂಖ್ಯೆ 1790/2005 ಅನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 364ರ ಅಡಿಯಲ್ಲಿ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
1984ರಲ್ಲಿ ನಡೆದ ಕೊಲೆ ಪ್ರಕರಣದ ಕಡತ, ನಾಲ್ಕು ದಶಕಗಳಷ್ಟು ಹಳೆಯ ಸುಳಿವುಗಳು, ಬದಲಾಗಿದ್ದ ವಿಳಾಸಗಳು ಮತ್ತು ಸೀಮಿತ ಮಾಹಿತಿಯ ನಡುವೆಯೂ ಆರೋಪಿಯ ಜಾಡು ಹಿಡಿದ ಕ್ರೈಂ ಬ್ರಾಂಚ್ ತಂಡದ ಸತತ ಪ್ರಯತ್ನದಿಂದ ಕೊನೆಗೂ ನತ್ತೂಲಾಲನ ಬಂಧನವಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement