ನವದೆಹಲಿ: ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ನಿಯಮಗಳನ್ನು ಉಲ್ಲಂಘಿಸುವ ಆಹಾರ ಉದ್ಯಮಗಳ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಇತ್ತೀಚಿನ ದಿನಗಳಲ್ಲಿ ವಿವಿಧ ವಲಯಗಳ ಆಹಾರ ಉದ್ಯಮ ಸಂಸ್ಥೆಗಳ ವಿರುದ್ಧ ಮಹತ್ವದ ಜಾರಿ ಕ್ರಮ ಕೈಗೊಂಡಿರುವುದಾಗಿ ಎಫ್‌ಎಸ್‌ಎಸ್‌ಎಐ(FSSAI) ಶನಿವಾರ ತಿಳಿಸಿದೆ.
ಇದರ ಭಾಗವಾಗಿ ಆಹಾರ ಕಂಪನಿಗಳಿಗೆ 150ಕ್ಕೂ ಹೆಚ್ಚು ನೋಟಿಸ್‌ಗಳನ್ನು, ಪಂಚತಾರಾ ಹೋಟೆಲ್‌ಗಳಿಗೆ 20ಕ್ಕೂ ಹೆಚ್ಚು ಹಾಗೂ ರೆಸ್ಟೋರೆಂಟ್‌ಗಳು ಸೇರಿದಂತೆ ಆಹಾರ ಸೇವಾ ಸಂಸ್ಥೆಗಳಿಗೆ 30ಕ್ಕೂ ಹೆಚ್ಚು ನೋಟಿಸ್‌ಗಳನ್ನು ನೀಡಲಾಗಿದೆ. ಕೆಲವು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕೆಲವು ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆಎಂದು ತಿಳಿಸಿದೆ.
“ಪ್ರಮುಖ ಆಹಾರ ಬ್ರ್ಯಾಂಡ್‌ಗಳು, ರಿಟೇಲ್ ಸರಪಳಿಗಳು ಮತ್ತು ಐಷಾರಾಮಿ ಹೋಟೆಲ್‌ಗಳ ವಿರುದ್ಧ ಎಫ್‌ಎಸ್‌ಎಸ್‌ಎಐ(FSSAI) ಪ್ರಮುಖ ಜಾರಿ ಕ್ರಮ ಕೈಗೊಂಡಿದ್ದು, ನಿಯಮ ಪಾಲನೆಯಲ್ಲಿನ ಕೊರತೆಗಳನ್ನು ತಡೆದು ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವುದು ಇದರ ಉದ್ದೇಶ. ಆಹಾರ ಪೂರೈಕೆ ಸರಪಳಿಯಲ್ಲಿ ಪಾರದರ್ಶಕತೆ ಮತ್ತು ಸುರಕ್ಷತೆಯನ್ನು ಕಾಪಾಡಲು ನಿಯಂತ್ರಣ ಮಾನದಂಡಗಳ ಕಟ್ಟುನಿಟ್ಟಿನ ಪಾಲನೆ ಅತ್ಯಗತ್ಯ,” ಎಂದು ಎಫ್‌ಎಸ್‌ಎಸ್‌ಎಐ ತನ್ನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಿಳಿಸಿದೆ.
ಪ್ರಮುಖ ಆಹಾರ ಕಂಪನಿಗಳಿಗೆ 150 ನೋಟಿಸ್
ತಪ್ಪುದಾರಿಗೆಳೆಯುವ ಜಾಹೀರಾತುಗಳು, ಸುಳ್ಳು ಹೇಳಿಕೆಗಳು ಮತ್ತು ಲೇಬಲ್‌ನಲ್ಲಿನ ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ವಿವಿಧ ಆಹಾರ ಕಂಪನಿಗಳಿಗೆ 150 ನೋಟಿಸ್‌ಗಳನ್ನು ನೀಡಲಾಗಿದೆ. ನೆಸ್ಲೆ ಇಂಡಿಯಾ, ಮೋಂಡೆಲೆಜ್ ಇಂಡಿಯಾ, ಅಬ್ಬಾಟ್ ಇಂಡಿಯಾ, ಡ್ಯಾನೋನ್ ಇಂಡಿಯಾ, ಕೋಕಾ-ಕೋಲಾ ಇಂಡಿಯಾ, ಪೆಪ್ಸಿಕೋ ಇಂಡಿಯಾ, ಡಿಯಾಜಿಯೊ, ಪೆರ್ನೋಡ್ ರಿಕಾರ್ಡ್, ಫೆರ್ರೆರೊ ಇಂಡಿಯಾ, ಕೆನ್‌ವ್ಯೂ ಇಂಕ್, ರೆಡ್ ಬುಲ್ ಇಂಡಿಯಾ, ಹೆಲ್ ಎನರ್ಜಿ ಮತ್ತು ಮಾನ್ಸ್ಟರ್ ಎನರ್ಜಿ ಇಂಡಿಯಾ ಲಿಮಿಟೆಡ್ ಸೇರಿದಂತೆ ಹಲವು ಕಂಪನಿಗಳು ಈ ಕ್ರಮಕ್ಕೆ ಒಳಪಟ್ಟಿವೆ.
ಇದೇ ವೇಳೆ ಪೆಪ್ಸಿಕೋ, ರೆಡ್ ಬುಲ್ ಇಂಡಿಯಾ, ಕೆನ್‌ವ್ಯೂ, ಮಾನ್ಸ್ಟರ್ ಎನರ್ಜಿ ಇಂಡಿಯಾ, ಡಿಯಾಜಿಯೊ ಮತ್ತು ಪೆರ್ನೋಡ್ ರಿಕಾರ್ಡ್ ಸೇರಿದಂತೆ ಹಲವು ಕಂಪನಿಗಳ ಉತ್ಪನ್ನಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
‘ಎನರ್ಜಿ ಡ್ರಿಂಕ್’ ಪದ ಬಳಕೆಗೆ ಆಕ್ಷೇಪ
ಪಾನೀಯ ಕಂಪನಿಗಳು ತಮ್ಮ ಉತ್ಪನ್ನಗಳ ಲೇಬಲ್‌ಗಳಲ್ಲಿ ‘ಎನರ್ಜಿ ಡ್ರಿಂಕ್ಸ್’ ಎಂಬ ವಿವರಣೆಯನ್ನು ಬಳಸಿರುವ ವಿಚಾರವೂ ಎಫ್‌ಎಸ್‌ಎಸ್‌ಎಐ ಕ್ರಮಕ್ಕೆ ಕಾರಣವಾಗಿದೆ. ಇಂತಹ ಉತ್ಪನ್ನಗಳ ಲೇಬಲ್‌ಗಳಿಂದ ‘ಎನರ್ಜಿ ಡ್ರಿಂಕ್ಸ್’ ಎಂಬ ಪದವನ್ನು ತೆಗೆದುಹಾಕುವಂತೆ ಎಫ್‌ಎಸ್‌ಎಸ್‌ಎಐ ಪಾನೀಯ ತಯಾರಕರಿಗೆ ನಿರ್ದೇಶನ ನೀಡಿದೆ.
ಇದರ ಜೊತೆಗೆ ರಮ್ ಮತ್ತು ವಿಸ್ಕಿ ಸೇರಿದಂತೆ ಆಲ್ಕೋಹಾಲ್‌ಯುಕ್ತ ಪಾನೀಯಗಳಲ್ಲಿ ಹೆಚ್ಚುವರಿ ಫ್ಲೇವರ್‌ಗಳನ್ನು ಸೇರಿಸಿರುವ ಕುರಿತ ನಿಯಮ ಉಲ್ಲಂಘನೆಗಳಿಗೂ ಎಫ್‌ಎಸ್‌ಎಸ್‌ಎಐ ಆಲ್ಕೋಬೆವ್ ಕಂಪನಿಗಳನ್ನು ತರಾಟೆಗೆ ತೆಗೆದುಕೊಂಡಿದೆ.
ಕ್ವಿಕ್ ಕಾಮರ್ಸ್‌ಗೂ ನೋಟಿಸ್
ಕ್ವಿಕ್ ಕಾಮರ್ಸ್ ಕ್ಷೇತ್ರದಲ್ಲೂ ಎಫ್‌ಎಸ್‌ಎಸ್‌ಎಐ ಕ್ರಮ ಕೈಗೊಂಡಿದೆ. ಅಮೆಜಾನ್ ನೌ ಮತ್ತು ಫ್ಲಿಪ್‌ಕಾರ್ಟ್ ಮಿನಿಟ್ಸ್ ಸೇರಿದಂತೆ ಕ್ವಿಕ್ ಕಾಮರ್ಸ್ ವೇದಿಕೆಗಳಿಗೆ ಒಟ್ಟು 12 ನೋಟಿಸ್‌ಗಳನ್ನು ನೀಡಲಾಗಿದೆ. ಈ ಕ್ರಮದ ಪರಿಣಾಮವಾಗಿ ಅಮೆಜಾನ್‌ಗೆ ಸೇರಿದ ಒಂದು ಗೋದಾಮಿನ ಪರವಾನಗಿಯನ್ನು ರದ್ದುಪಡಿಸಲಾಗಿದೆ ಎಂದು ಎಫ್‌ಎಸ್‌ಎಸ್‌ಎಐ (FSSAI) ತಿಳಿಸಿದೆ.
ಪಂಚತಾರಾ ಹೋಟೆಲ್‌ಗಳಿಗೂ ಬಿಸಿ
ಆಹಾರದಲ್ಲಿನ ಕ್ಯಾಲೊರಿಗಳ ಘೋಷಣೆ ಮತ್ತು ಮೆನು ಲೇಬಲಿಂಗ್‌ಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಪಂಚತಾರಾ ಹೋಟೆಲ್‌ಗಳು ಹಾಗೂ ಆಹಾರ ಸೇವಾ ಸಂಸ್ಥೆಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಮ್ಯಾರಿಯಟ್, ಹಿಲ್ಟನ್, ಹಯಾಟ್, ರ್ಯಾಡಿಸನ್, ಫೋರ್ ಸೀಸನ್ಸ್ ಮತ್ತು ಶಾಂಗ್ರಿ-ಲಾ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಫ್ರಾಂಚೈಸಿ ಹೋಟೆಲ್‌ಗಳ ನಿರ್ವಾಹಕರಿಗೂ ನೋಟಿಸ್‌ಗಳನ್ನು ಜಾರಿ ಮಾಡಲಾಗಿದೆ.
ಕೆಎಫ್‌ಸಿ, ಡೊಮಿನೋಸ್, ಪಿಜ್ಜಾ ಹಟ್‌ಗೂ ನೋಟಿಸ್
ರೆಸ್ಟೋರೆಂಟ್ ಮತ್ತು ಆಹಾರ ಸೇವಾ ವಲಯದಲ್ಲೂ ಎಫ್‌ಎಸ್‌ಎಸ್‌ಎಐ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದೆ. ಕೆಎಫ್‌ಸಿ (KFC), ಡೊಮಿನೋಸ್, ಪಿಜ್ಜಾ ಹಟ್, ಮೆಕ್‌ಡೊನಾಲ್ಡ್ಸ್ ಮತ್ತು ಕೋಸ್ಟಾ ಕಾಫಿ ಸೇರಿದಂತೆ ಹಲವು ಆಹಾರ ಸೇವಾ ಸಂಸ್ಥೆಗಳಿಗೆ 30ಕ್ಕೂ ಹೆಚ್ಚು ನೋಟಿಸ್‌ಗಳನ್ನು ನೀಡಲಾಗಿದೆ. ಈ ಕ್ರಮದಲ್ಲಿ ಡೊಮಿನೋಸ್‌ನ ಐದು ಔಟ್‌ಲೆಟ್‌ಗಳ ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಎಫ್‌ಎಸ್‌ಎಸ್‌ಎಐ ಸ್ಪಷ್ಟಪಡಿಸಿದೆ.
58 ಆಮದು ಉತ್ಪನ್ನಗಳಿಗೂ ಕ್ರಮ
ಇದಲ್ಲದೆ, ಲೇಬಲಿಂಗ್ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ 58 ಆಮದು ಮಾಡಿಕೊಳ್ಳಲಾದ ಆಹಾರ ಉತ್ಪನ್ನಗಳ ವಿರುದ್ಧವೂ ನೋಟಿಸ್‌ಗಳನ್ನು ನೀಡಲಾಗಿದೆ.
ಒಟ್ಟಾರೆ, ಆಹಾರ ಉತ್ಪನ್ನಗಳ ಲೇಬಲಿಂಗ್, ಜಾಹೀರಾತು, ಆರೋಗ್ಯ ಮತ್ತು ಪೌಷ್ಟಿಕಾಂಶ ಕುರಿತ ಹೇಳಿಕೆಗಳು, ಮೆನುಗಳಲ್ಲಿ ಕ್ಯಾಲೊರಿ ಮಾಹಿತಿ ಹಾಗೂ ಇತರ ನಿಯಂತ್ರಣ ಮಾನದಂಡಗಳ ಪಾಲನೆಯ ಮೇಲೆ ಎಫ್‌ಎಸ್‌ಎಸ್‌ಎಐ ಕಟ್ಟುನಿಟ್ಟಿನ ನಿಗಾ ವಹಿಸಿದ್ದು, ನಿಯಮ ಉಲ್ಲಂಘಿಸುವ ಆಹಾರ ಉದ್ಯಮ ಸಂಸ್ಥೆಗಳ ವಿರುದ್ಧ ಜಾರಿ ಕ್ರಮ ಮುಂದುವರಿಯಲಿದೆ ಎಂದು ಅದು ತಿಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ