ಲಾತೂರ್: ಅನುಮತಿ ಇಲ್ಲದೆ ಸರ್ಕಾರಿ ಶಾಲೆ ಪ್ರವೇಶಿಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವುದರ ಜೊತೆಗೆ ಶಿಕ್ಷಕರಿಗೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಚಾಲಕ ಅಭಿಜೀತ ದಿಪ್ಕೆ ಹಾಗೂ ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಲಾತೂರ್ ಜಿಲ್ಲೆಯ ಔಸಾ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಪರಿಷತ್ ಉರ್ದು ಶಾಲೆಯ ಶಿಕ್ಷಕಿ ಸಯ್ಯದ್ ಶಮ್ಶದ್‌ಬಾನೋ ಖೈರತಾಲಿ (53) ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ.
ಕೇಂದ್ರ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ಜನರ ಗಮನಕ್ಕೆ ತರುವ ಉದ್ದೇಶದಿಂದ ಸಿಜೆಪಿ ವತಿಯಿಂದ ನಡೆಯುತ್ತಿರುವ ‘ಸ್ಕೂಲ್ ಠೀಕ್ ಕರೋ’ (ಸರ್ಕಾರಿ ಶಾಲೆಗಳನ್ನು ಸುಧಾರಿಸಿ) ಅಭಿಯಾನದ ಭಾಗವಾಗಿ ಅಭಿಜೀತ ದಿಪ್ಕೆ ಅವರು ವಿವಿಧ ಶಾಲೆಗಳಿಗೆ ಭೇಟಿ ನೀಡುತ್ತಿದ್ದಾರೆ.
ದೂರಿನ ಪ್ರಕಾರ, ದಿಪ್ಕೆ ಹಾಗೂ ಅವರ ಸಹಚರರು ಔಸಾ ಸಮೀಪದ ಜವಳಿ ಗ್ರಾಮದ ಜಿಲ್ಲಾ ಪರಿಷತ್ ಉರ್ದು ಶಾಲೆಗೆ ಅನುಮತಿ ಪಡೆಯದೆ ಪ್ರವೇಶಿಸಿದ್ದಾರೆ. ಬಳಿಕ ವಿದ್ಯಾರ್ಥಿಗಳ ನಡುವೆ ಕುಳಿತು ಅವರಿಗೆ ವಿವಿಧ ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಿಂದ ಶೈಕ್ಷಣಿಕ ಚಟುವಟಿಕೆಗಳು ಹಾಗೂ ಸರ್ಕಾರಿ ಕರ್ತವ್ಯಗಳಿಗೆ ಅಡ್ಡಿಯುಂಟಾಯಿತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಶಾಲೆಯಲ್ಲಿನ ಘಟನೆಗಳನ್ನು ದಿಪ್ಕೆ ಅವರು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಲ್ಲದೆ, ತಮ್ಮ ಭೇಟಿಯ ಸಂದರ್ಭದಲ್ಲಿ ಮತ್ತೊಂದು ಶಾಲೆಯ ವಿದ್ಯಾರ್ಥಿಗಳನ್ನು ಕರೆತಂದು ತರಗತಿಗಳಲ್ಲಿ ಕೂರಿಸಲಾಗಿದೆ ಎಂದು ಆರೋಪಿಸುವ ಮೂಲಕ ಶಾಲೆಗೆ ಅಪಖ್ಯಾತಿ ಉಂಟುಮಾಡಿದ್ದಾರೆ ಹಾಗೂ ಶಿಕ್ಷಕರನ್ನು ಅಮಾನತುಗೊಳಿಸುವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ದೂರಿನಲ್ಲಿದೆ.
ಈ ಆರೋಪಗಳ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)ಯ ಸೆಕ್ಷನ್ 132 (ಸಾರ್ವಜನಿಕ ಸೇವಕರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವ ಉದ್ದೇಶದಿಂದ ಹಲ್ಲೆ ಅಥವಾ ಅಪರಾಧ ಬಲದ ಬಳಕೆ), 329(3) (ಮನೆ/ಆವರಣಕ್ಕೆ ಅಕ್ರಮ ಪ್ರವೇಶ), 351(2) (ಅಪರಾಧಾತ್ಮಕ ಬೆದರಿಕೆ) ಮತ್ತು 356(2) (ಅಪರಾಧಾತ್ಮಕ ಮಾನಹಾನಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾತೂರ್‌ನಲ್ಲಿನ ‘ಸ್ಕೂಲ್ ಠೀಕ್ ಕರೋ’ ಅಭಿಯಾನದ ವೇಳೆ ಸಿಜೆಪಿ ತಂಡದ ವಿರುದ್ಧ ಪ್ರಕರಣ ದಾಖಲಾಗಿರುವುದು ಇದೇ ಮೊದಲ ಘಟನೆಯಲ್ಲ. ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಜೈಪುರದಲ್ಲಿ ಸಿಜೆಪಿ ತಂಡದ ಮೇಲೆ ದಾಳಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಪರಸ್ಪರ ದೂರುಗಳ ಆಧಾರದ ಮೇಲೆ ಕ್ರಾಸ್-ಎಫ್‌ಐಆರ್‌ಗಳು ದಾಖಲಾಗಿದ್ದವು.


ನಿಮ್ಮ ಕಾಮೆಂಟ್ ಬರೆಯಿರಿ