ಉದ್ಯಮಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು

ಉಡುಪಿ : ಉದ್ಯಮಿ ಹಾಗೂ ಕಾಂಗ್ರೆಸ್‌ ನಾಯಕ ಮುದರಂಗಡಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ಮುಂಬೈನ ಅನುಜ ಪಾಟೀಲ(35) ಪೊಲೀಸರು ಬಂಧಿಸಿದ್ದು, ಈ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.
ಪೊಲೀಸರು ಅನುಜ ಪಾಟೀಲ್‌ನನ್ನು ಬಂಧಿಸಿ ಹೆಬ್ರಿಗೆ ಕರೆದೊಯ್ಯುತ್ತಿದ್ದ ವೇಳೆ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ಆರೋಪಿ ಕೊಲ್ಲೂರು ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಬಳಿಯಿದ್ದ ಪಿಸ್ತೂಲು ಕಸಿದುಕೊಂಡು ಗುಂಡು ಹಾರಿಸಲು   ಪ್ರಯತ್ನಿಸಿದ್ದಾನೆ ಎಂದು ಹೇಳಲಾಗಿದೆ.ಪರಿಸ್ಥಿತಿಯನ್ನು ನಿಯಂತ್ರಿಸಲು ಕುಂದಾಪುರ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ನಂಜ ನಾಯಕ್ ಅವರು ಗುಂಡು ಹಾರಿಸಿದ್ದು, ಗುಂಡು ಅನುಲ ಪಾಟೀಲನ ಕಾಲಿಗೆ ತಗುಲಿದೆ. ಗಾಯಗೊಂಡ ಆರೋಪಿಯನ್ನು ತಕ್ಷಣ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂವರು ಶೂಟರ್‌ಗಳನ್ನು ಕಳುಹಿಸಿದ್ದ ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣದ ಪ್ರಮುಖ ಸೂತ್ರಧಾರ ಅನುಜ ಪಾಟೀಲನನ್ನು ಸೋಮವಾರ ಮುಂಜಾನೆ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕುಂದಾಪುರ ಪಿಎಸ್‌ಐ ನಂಜ ನಾಯಕ್ ಹಾಗೂ ಕೊಲ್ಲೂರು ಪಿಎಸ್‌ಐ ವಿನಯನೇತೃತ್ವದ ಪಡೆ ಬಂಧಿಸಿತು. ಆರೋಪಿಯನ್ನು ಕರೆತರುವಾಗ ಆತ ಕೊಲ್ಲೂರು ಪಿಎಸ್‌ಐ ವಿನಯ ಅವರ ಸರ್ವಿಸ್ ಪಿಸ್ತೂಲ್ ಕಸಿದುಕೊಂಡು ಪೊಲೀಸರತ್ತ ಗುಂಡು ಹಾರಿಸಿದ್ದಾನೆ.  ತಕ್ಷಣವೇ ಕಾರ್ಯಪ್ರವೃತ್ತರಾದ ಕುಂದಾಪುರ ಪಿಎಸ್‌ಐ ನಂಜ ನಾಯಕ್ ಅವರು  ಆತ್ಮರಕ್ಷಣೆಗಾಗಿ  ಆರೋಪಿ ಅನುಜ ಪಾಟೀಲ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಗ್ಯಾಂಗ್‌ಸ್ಟರ್‌ನನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
 ಡೇವಿಡ್ ಡಿಸೋಜಾ ಕೊಲೆ ಪ್ರಕರಣದಲ್ಲಿ ಅನುಜ ಪಾಟೀಲ ಶೂಟರ್‌ಗಳಾದ ರಾಜು ಹಾಗೂ ಆತನ ತಂಡವನ್ನು ಕಾಂಟ್ರಾಕ್ಟ್‌ ಹತ್ಯೆಗಾಗಿ ಕಳುಹಿಸುವ ಮೂಲಕ ಪ್ರಕರಣದ ಕಾರ್ಯಾಚರಣೆಗೆ ಅಗತ್ಯ ಲಾಜಿಸ್ಟಿಕ್ಸ್ ವ್ಯವಸ್ಥೆ ಮಾಡಿದ್ದಾನೆ ಎಂಬ ಆರೋಪವಿದೆ.
ಬಿಹಾರ ಮೂಲದ ಅನುಜ ಪಾಟೀಲ ಮುಂಬೈನಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎನ್ನಲಾಗಿದ್ದು, 2017ರಿಂದ ತಲೆಮರೆಸಿಕೊಂಡಿದ್ದ. ಸಂಘಟಿತ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಆತನ ವಿರುದ್ಧ ಮಹಾರಾಷ್ಟ್ರದಲ್ಲಿ ಸಂಘಟಿತ ಅಪರಾಧ ತಡೆ ಕಾಯ್ದೆ (MCOCA) ಅಡಿ ಪ್ರಕರಣ ದಾಖಲಿಸಲಾಗಿದೆ.
ಮಹಾರಾಷ್ಟ್ರ, ಗುಜರಾತ್,  ಕರ್ನಾಟಕ ಸೇರಿದಂತೆ ಹಲವಡೆ ಅನುಜ ಪಾಟೀಲ ವಿರುದ್ಧ ಒಟ್ಟು 11 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 10 ಪ್ರಕರಣಗಳು ಶಸ್ತ್ರಾಸ್ತ್ರ ಕಾಯ್ದೆಯಡಿ ದಾಖಲಾಗಿವೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement