ಕುಂದಾಪುರ : ಗಂಗೊಳ್ಳಿಯಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ ; 27 ಮೀನುಗಾರರ ರಕ್ಷಣೆ

ಉಡುಪಿ :ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೋಟೊಂದು ಬುಧವಾರ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಅಳಿವೆ ಪ್ರದೇಶದ ಸಮುದ್ರದಲ್ಲಿ ಮುಳುಗಡೆಯಾಗಿದೆ ಎಂದು ವರದಿಯಾಗಿದೆ. ಬೋಟಿನಲ್ಲಿದ್ದ 27 ಮಂದಿ ಮೀನುಗಾರರನ್ನು ಸಕಾಲದಲ್ಲಿ ರಕ್ಷಿಸಲಾಗಿದೆ.
ಭಟ್ಕಳ ಮುಂಡಳ್ಳಿ ಮೂಲದ ನಾಗರಾಜ ಮೊಗೇರ ಅವರಿಗೆ ಸೇರಿದ ‘ಶ್ರೀ ಬಾಲಾಂಜನೇಯ’ ಹೆಸರಿನ ಪರ್ಸಿನ್ ಬೋಟಿನಲ್ಲಿ 27 ಮಂದಿ ಮೀನುಗಾರರು ಬುಧವಾರ ಗಂಗೊಳ್ಳಿಯಿಂದ ಮೀನುಗಾರಿಕೆಗೆ ತೆರಳಿದ್ದರು. ಗಂಗೊಳ್ಳಿ ಬಂದರಿನಿಂದ ಸ್ವಲ್ಪ ದೂರದಲ್ಲಿರುವ ಅಳಿವೆ ಪ್ರದೇಶವನ್ನು ತಲುಪುತ್ತಿದ್ದಂತೆ ಭಾರಿ ಅಲೆಗಳ ಹೊಡೆತಕ್ಕೆ ಬೋಟಿನೊಳಗೆ ನೀರು ನುಗ್ಗಿದೆ. ನೀರು ತುಂಬಿ ಬೋಟ್ ಮುಳುಗುವ ಅಪಾಯದ ಮುನ್ಸೂಚನೆ ಅರಿತ ಮೀನುಗಾರರು ತಕ್ಷಣವೇ ಗಂಗೊಳ್ಳಿ ಬಂದರಿನಲ್ಲಿದ್ದ ಇತರ ಬೋಟ್‌ಗಳಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣವೇ ಸ್ಥಳೀಯ ಮೀನುಗಾರರು ಹಾಗೂ ಗಂಗೊಳ್ಳಿ ಕರಾವಳಿ ಕಾವಲು ಪಡೆಯವರು ಬೋಟ್‌ಗಳಲ್ಲಿ ಧಾವಿಸಿ ಬಂದು ಅಪಾಯದಲ್ಲಿದ್ದ ಎಲ್ಲಾ 27 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ.
ಅಲೆಗಳ ಅಬ್ಬರ ಹೆಚ್ಚಾಗಿದ್ದರಿಂದ ಬೋಟ್ ಮುಳುಗಡೆಯಾಗಿದ್ದು, ಅದರಲ್ಲಿದ್ದ ಬೆಲೆಬಾಳುವ ಬಲೆಗಳು ಹಾಗೂ ಮೀನುಗಾರಿಕಾ ಸಲಕರಣೆಗಳು ಸಮುದ್ರಪಾಲಾಗಿವೆ. ಮುಳುಗಡೆಯಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಭಾಗಶಃ ಮುಳುಗಿರುವ ಬೋಟನ್ನು ದಡಕ್ಕೆ ಎಳೆದು ತರಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಪ್ರಮುಖ ಸುದ್ದಿ :-   ಔಷಧಗಳಿಗೆ ಸವಾಲಾಗಿರುವ ಬ್ಯಾಕ್ಟೀರಿಯಾ ಸೋಂಕುಗಳ ವಿರುದ್ಧ ಹೋರಾಡುವ ʼಜೈವಿಕ ಅಸ್ತ್ರ’ ಹಸುವಿನ ಕರುಳಿನಲ್ಲಿ ತಯಾರಾಗುತ್ತೆ ; ಐಐಎಸ್‌ಸಿ ಅಧ್ಯಯನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement