ನೇಪಾಳ ಪ್ರವಾಹ ದುರಂತ: ಕರ್ನಾಟಕದ 8 ಮಂದಿ ಸೇರಿ ದಕ್ಷಿಣ ಭಾರತದ 168 ಜನರು ನಾಪತ್ತೆ

ನವದೆಹಲಿ: ಕೈಲಾಸ ಮಾನಸರೋವರ ಯಾತ್ರೆ ಸೇರಿದಂತೆ ವಿವಿಧ ಕಾರಣಕ್ಕೆ ನೇಪಾಳಕ್ಕೆ ತೆರಳಿದ್ದ ದಕ್ಷಿಣ ಭಾರತದ ಸುಮಾರು 168ಕ್ಕೂ ಹೆಚ್ಚು ಯಾತ್ರಿಕರು ಹಾಗೂ ಪ್ರವಾಸಿಗರು ಹಿಮ-ಬಂಡೆಗಳ ಕುಸಿತದಿಂದ ಉಂಟಾದ ಹಠಾತ್‌ ಭೀಕರ ಪ್ರವಾಹದ ಬಳಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವರು ಸಿಲುಕಿಕೊಂಡಿದ್ದು, ಕೆಲವರು ನಾಪತ್ತೆಯಾಗಿದ್ದಾರೆ ಹಾಗೂ ಇನ್ನೂ ಹಲವರ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯ ಮುಂದುವರಿದಿದೆ.
ನೇಪಾಳದ ರಸುವಾ ಜಿಲ್ಲೆ ಹಾಗೂ ಅದರ ಸುತ್ತಮುತ್ತಲಿನ ತಗ್ಗು ಪ್ರದೇಶಗಳನ್ನು ಪ್ರವಾಹ ತೀವ್ರವಾಗಿ ಬಾಧಿಸಿದ್ದು, ನೂರಾರು ಜನರು ಕಾಣೆಯಾಗಿದ್ದಾರೆ. ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ ಅವರ ಪ್ರಕಾರ, ನಾಪತ್ತೆಯಾದವರಲ್ಲಿ ಸುಮಾರು 300 ಭಾರತೀಯರೂ ಸೇರಿದ್ದಾರೆ.
ತಮಿಳುನಾಡಿನಿಂದ 103 ಮಂದಿ, ಕೇರಳದಿಂದ 53 ಮಂದಿ, ಕರ್ನಾಟಕದಿಂದ 8 ಮಂದಿ ಹಾಗೂ ಆಂಧ್ರಪ್ರದೇಶದಿಂದ 7 ಮಂದಿ ಯಾತ್ರಿಕರು ಅಥವಾ ಪ್ರವಾಸಿಗರು ನಾಪತ್ತೆಯಾಗಿದ್ದಾರೆ, ಸಿಲುಕಿಕೊಂಡಿದ್ದಾರೆ ಅಥವಾ ಶೋಧ ಕಾರ್ಯದ ವ್ಯಾಪ್ತಿಯಲ್ಲಿದ್ದಾರೆ.
ತಮಿಳುನಾಡು: 103 ಯಾತ್ರಿಕರ ಕುರಿತು ಆತಂಕ
ತಮಿಳುನಾಡು ಶಾಲಾ ಶಿಕ್ಷಣ ಸಚಿವ ರಾಜಾ ಮೋಹನ ಅವರ ಪ್ರಕಾರ, 103 ತಮಿಳುನಾಡು ನಿವಾಸಿಗಳು ವಿವಿಧ ತಂಡಗಳ ಮೂಲಕ ಕೈಲಾಸ ಯಾತ್ರೆಗೆ ನೇಪಾಳಕ್ಕೆ ತೆರಳಿದ್ದರು.
ತಂಜಾವೂರು ಜಿಲ್ಲೆಯ ಕುಂಭಕೋಣಂ ಮೂಲದ ಸೂಪರ್ ಯಾತ್ರಾ ಕುಂಭಕೋಣಂ ಸಂಸ್ಥೆ ನೇಪಾಳದ ಸಮ್ರಾಟ್ ಟೂರ್ಸ್ ಸಹಯೋಗದಲ್ಲಿ ಒಂದು ಯಾತ್ರೆಯನ್ನು ಆಯೋಜಿಸಿತ್ತು. ಈ ತಂಡದಲ್ಲಿ ತಮಿಳುನಾಡಿನ 10 ಜಿಲ್ಲೆಗಳ 54 ಯಾತ್ರಿಕರು ಹಾಗೂ ಪುದುಚೇರಿಯ 3 ಮಂದಿ ಸೇರಿ ಒಟ್ಟು 57 ಮಂದಿ ಇದ್ದರು.
ಈ ತಂಡವು ಮೂರು ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಸುವಾ ಜಿಲ್ಲೆಯಲ್ಲಿ ನದಿ ಏಕಾಏಕಿ ಉಕ್ಕಿ ಹರಿದ ಪರಿಣಾಮ ವಾಹನಗಳು ಸಿಲುಕಿಕೊಂಡಿವೆ. ಇದೇ ವೇಳೆ, ಚೆನ್ನೈ ಮೂಲದ ಮಹಾದೇವ ಕೈಲಾಸ ಯಾತ್ರಾ ಸಂಸ್ಥೆ ಮೂಲಕ ಮತ್ತೊಂದು 49 ಮಂದಿಯ ತಂಡ ನೇಪಾಳಕ್ಕೆ ತೆರಳಿತ್ತು. ಅವರಿರುವ ಸ್ಥಳ ಹಾಗೂ ಸುರಕ್ಷತೆ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಕೇರಳ: 53 ಮಂದಿ ಸಿಲುಕಿರುವ ಶಂಕೆ
ಕೇರಳ ಸರ್ಕಾರದ ಅನಿವಾಸಿ ಕೇರಳಿಗರ ಕಲ್ಯಾಣ ಇಲಾಖೆಯಾದ ನೋರ್ಕಾ-ರೂಟ್ಸ್ (NORKA-Roots) ಪ್ರಕಾರ, ಮಕ್ಕಳು, ಮಹಿಳೆಯರು ಹಾಗೂ ಕುಟುಂಬ ಸದಸ್ಯರು ಸೇರಿ ಸುಮಾರು 53 ಕೇರಳಿಗರು ನೇಪಾಳದಲ್ಲಿ ಸಿಲುಕಿರುವ ಸಾಧ್ಯತೆ ಇದೆ.
ಮುಖ್ಯಮಂತ್ರಿಗಳ ಕಚೇರಿ ಹಾಗೂ ಮುಖ್ಯ ಕಾರ್ಯದರ್ಶಿಗಳ ಕಚೇರಿಯಿಂದ ಬಂದ 17 ಪ್ರತ್ಯೇಕ ಮಾಹಿತಿಗಳನ್ನು ಗುರುವಾರ ಮುಂಜಾನೆ 3 ಗಂಟೆಯವರೆಗೆ ಸಂಗ್ರಹಿಸಲಾಗಿದೆ ಎಂದು ನೋರ್ಕಾ-ರೂಟ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ ಮಾಧವನ್ ತಿಳಿಸಿದ್ದಾರೆ. ಸಿಲುಕಿರುವವರ ಕೊನೆಯದಾಗಿ ತಿಳಿದಿರುವ ಸ್ಥಳಗಳನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದ್ದು, ಲಭ್ಯವಿರುವ ಮಾಹಿತಿಯನ್ನು ಸಂಬಂಧಿತ ಅಧಿಕಾರಿಗಳಿಗೆ ರವಾನಿಸಲಾಗಿದೆ.
ಕರ್ನಾಟಕ: ಎಂಟು ಜನ ನಾಪತ್ತೆ
ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರ ಪ್ರಕಾರ, ಬೆಂಗಳೂರಿನಿಂದ ಐವರು ಸೇರಿದಂತೆ ನೇಪಾಳಕ್ಕೆ ತೆರಳಿದ್ದ  ಕರ್ನಾಟಕ ಎಂಟು ಮಂದಿ ನಾಪತ್ತೆಯಾಗಿದ್ದಾರೆ. ಅವರನ್ನು ಸಂಪರ್ಕಿಸಲು ಪ್ರಯತ್ನಗಳು ಮುಂದುವರಿದಿವೆ. ಅಗತ್ಯವಿದ್ದಲ್ಲಿ ಹಿರಿಯ ಅಧಿಕಾರಿಯೊಬ್ಬರನ್ನು ಅಥವಾ ಸಚಿವರನ್ನು ಕಠ್ಮಂಡುವಿಗೆ ಕಳುಹಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳ ಮೇಲ್ವಿಚಾರಣೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಅವರು, “ನಮಗೆ ಬಂದಿರುವ ಮಾಹಿತಿಯ ಪ್ರಕಾರ, ಕರ್ನಾಟಕದ 8 ಜನರು ನೇಪಾಳ ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ. ಅವರ ವಿವರಗಳು ಮತ್ತು ಇತರ ಮಾಹಿತಿಯನ್ನು ನಾವು ಕಲೆ ಹಾಕುತ್ತಿದ್ದೇವೆ” ಎಂದು ಹೇಳಿದ್ದಾರೆ.
ಆಂಧ್ರಪ್ರದೇಶ: ಮೂವರು ನಾಪತ್ತೆ, ನಾಲ್ವರು ಸುರಕ್ಷಿತ
ಆಂಧ್ರಪ್ರದೇಶದ ಏಳು ನಿವಾಸಿಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಾಪತ್ತೆ ಅಥವಾ ಸಿಲುಕಿರುವುದಾಗಿ ಗುರುತಿಸಲಾಗಿದೆ.
ಇವರಲ್ಲಿ ನಾಲ್ವರನ್ನು ಸುರಕ್ಷಿತವಾಗಿ ಪತ್ತೆಹಚ್ಚಲಾಗಿದ್ದರೂ ಅವರು ಇನ್ನೂ ಸಿಲುಕಿಕೊಂಡಿದ್ದಾರೆ. ಉಳಿದ ಮೂವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
 ಈ ಮಾಹಿತಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ (MEA) ರವಾನಿಸಲಾಗುತ್ತಿದೆ. ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಿಲುಕಿರುವವರ ಪತ್ತೆ ಹಾಗೂ ಸುರಕ್ಷತೆ ಖಚಿತಪಡಿಸಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದೆ.
ಕುಟುಂಬಗಳಿಂದ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ಮುಂದುವರಿದಿದ್ದು, ವಿದೇಶಾಂಗ ಸಚಿವಾಲಯ ಹಾಗೂ ಭಾರತೀಯ ರಾಯಭಾರ ಕಚೇರಿಯ ಸಹಯೋಗದೊಂದಿಗೆ ರಕ್ಷಣಾ ಹಾಗೂ ಪತ್ತೆ ಕಾರ್ಯಗಳನ್ನು ವೇಗಗೊಳಿಸಲಾಗಿದೆ.
ಭೀಕರ ಪ್ರವಾಹದ ಬಳಿಕ ನೇಪಾಳದಲ್ಲಿ ನಾಪತ್ತೆಯಾದವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಯಾತ್ರಿಕರ ಸುರಕ್ಷಿತ ವಾಪಸಾತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement