ಈಗ ಲೋಕಸಭೆ ಚುನಾವಣೆ ನಡೆದ್ರೆ ಎನ್‌ಡಿಎ ಗೆಲ್ಲುತ್ತದೆಯೋ ಇಂಡಿಯಾ ಮೈತ್ರಿಕೂಟವೋ ? ʼಮೂಡ್ ಆಫ್ ದಿ ನೇಷನ್ʼ ಸಮೀಕ್ಷೆಯಲ್ಲಿ ಬಹಿರಂಗ

ನವದೆಹಲಿ: ಈಗ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಇಂಡಿಯಾ ಟುಡೇ–ಸಿ-ವೋಟರ್ ನಡೆಸಿದ ಇತ್ತೀಚಿನ ‘ಮೂಡ್ ಆಫ್ ದಿ ನೇಷನ್’ (MOTN) ಸಮೀಕ್ಷೆಯಲ್ಲಿ ಕಂಡುಬಂದಿದೆ. ಆದರೆ ಹಿಂದಿನ ಸಮೀಕ್ಷೆಗೆ ಹೋಲಿಸಿದರೆ ಎನ್‌ಡಿಎ ಮೈತ್ರಿಕೂಟದ ಜನಪ್ರಿಯತೆಯಲ್ಲಿ ಅಲ್ಪ ಕುಸಿತ ಕಂಡುಬಂದಿದೆ. ಈ ಸಮೀಕ್ಷೆಯ ಪ್ರಕಾರ, ಈಗ ಲೋಕಸಭೆ ಚುನಾವಣೆ ನಡೆದರೆ ಎನ್‌ಡಿಎ 326 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಜನವರಿ 2026ರ ‘ಮೂಡ್ ಆಫ್ ದಿ ನೇಷನ್’ (MOTN)  ಸಮೀಕ್ಷೆಯಲ್ಲಿ ಎನ್‌ಡಿಎಗೆ 352 ಸ್ಥಾನಗಳು ದೊರೆಯಬಹುದು ಎಂದು ಕಂಡುಬಂದಿತ್ತು.  ಅಂದರೆ ಆರು ತಿಂಗಳ ಅವಧಿಯಲ್ಲಿ ಎನ್‌ಡಿಎಗೆ 26 ಸ್ಥಾನಗಳ ಕುಸಿತ ಕಂಡುಬಂದಿದೆ. ಆದರೆ ಇದೇ ವೇಳೆ ಕಾಂಗ್ರೆಸ್ ನೇತೃತ್ವದ ಇಂಡಿಯಾ (INDIA) ಮೈತ್ರಿಕೂಟಕ್ಕೆ ಈ ಸಮೀಕ್ಷೆಯಲ್ಲಿ ದೊಡ್ಡ ಮಟ್ಟದ ಲಾಭ ಕಂಡುಬಂದಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರು 2024ರ ಚುನಾವಣೆಯ ವೇಳೆ ನೀಡಿದ್ದ ‘400 ಪಾರ್’ ಘೋಷಣೆಗೆ ಹೋಲಿಸಿದರೆ ಈ ಅಂಕಿಅಂಶಗಳು ದೂರದಲ್ಲಿದ್ದರೂ, ಮತದಾರರ ವಿಶ್ವಾಸ ಎನ್‌ಡಿಎ ಮೇಲೆಯೇ ಮುಂದುವರಿದಿದೆ ಎಂಬುದನ್ನು ಸಮೀಕ್ಷೆ ಸೂಚಿಸಿದೆ. ಆದರೆ 2029ರ ಚುನಾವಣೆಯತ್ತ ಸಾಗುವ ಸಂದರ್ಭದಲ್ಲಿ ಜನರೇಷನ್-ಝಡ್ (Gen Z) ಯುವ ಮತದಾರರ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಎನ್‌ಡಿಎಗೆ ಮುಖ್ಯವಾಗುತ್ತದೆ.
ಇಂಡಿಯಾ ಮೈತ್ರಿಕೂಟಕ್ಕೆ ಅಲ್ಪ ಲಾಭ
ಕಾಂಗ್ರೆಸ್ ನೇತೃತ್ವದ ಇಂಡಿಯಾ (INDIA) ಮೈತ್ರಿಕೂಟಕ್ಕೆ ಈ ಸಮೀಕ್ಷೆಯಲ್ಲಿ ದೊಡ್ಡ ಮಟ್ಟದ ಲಾಭ ಕಂಡುಬಂದಿಲ್ಲ. ಆಗಸ್ಟ್ 2026ರ ಸಮೀಕ್ಷೆಯಲ್ಲಿ ಮೈತ್ರಿಕೂಟಕ್ಕೆ 185 ಸ್ಥಾನಗಳು ದೊರೆಯಲಿವೆ ಎಂದು ಅಂದಾಜಿಸಲಾಗಿದ್ದು, ಜನವರಿ 2026ರ ಸಮೀಕ್ಷೆಯಲ್ಲಿ 182 ಸ್ಥಾನಗಳು ದೊರೆಯಬಹುದು ಎಂದು ಕಂಡುಬಂದಿತ್ತು.
 2024ರ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ 234 ಸ್ಥಾನಗಳನ್ನು ಗೆದ್ದಿತ್ತು. 2014ರ ಲೋಕಸಭೆ ಚುನಾವಣೆ ಬಳಿಕ ಎನ್‌ಡಿಎಗೆ ಅತ್ಯಂತ ದೊಡ್ಡ ಸವಾಲು ಎಸೆಯುವಷ್ಟು ಬಲವನ್ನು ವಿಪಕ್ಷಗಳು  2024ರ ಲೋಕಸಭೆ ಚುನಾವಣೆಯಲ್ಲಿ ತೋರಿಸಿದ್ದವು.  ಆದರೆ ಕಾಂಗ್ರೆಸ್ ನೇತೃತ್ವದ ಇಂಡಿಯಾ (INDIA) ಮೈತ್ರಿಕೂಟವು ಈಗ ಚುನಾವಣಾ ನಡೆದರೆ ತೋರಬಹುದಾದ ಸಾಧನೆಯು  2024ರ ಚುನಾವಣೆಯಲ್ಲಿ ತೋರಿದ ಸಾಧನೆಗಿಂತ ಗಮನಾರ್ಹ ಕುಸಿತವನ್ನೇ ಸೂಚಿಸುತ್ತದೆ.
ಸಮೀಕ್ಷೆ ಹೇಗೆ ನಡೆಸಲಾಯಿತು?
‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯ 2026ರ ಆಗಸ್ಟ್ ಆವೃತ್ತಿಯನ್ನು ಸಿ-ವೋಟರ್ ಸಂಸ್ಥೆ ನಡೆಸಿದ್ದು, ಜುಲೈ 1ರಿಂದ ಆಗಸ್ಟ್ 25ರವರೆಗೆ ದೇಶದಾದ್ಯಂತ 25,184 ಜನರನ್ನು ನೇರವಾಗಿ ಸಂದರ್ಶಿಸಲಾಗಿದೆ ಎಂದು ಅದು ಹೇಳಿದೆ.
ಇದರ ಜೊತೆಗೆ ಕಳೆದ ಆರು ತಿಂಗಳಲ್ಲಿ ಸಿ-ವೋಟರ್ ನಡೆಸಿದ ನಿಯಮಿತ ಟ್ರ್ಯಾಕಿಂಗ್ ಸಮೀಕ್ಷೆಗಳ ಭಾಗವಾಗಿ ಸಂಗ್ರಹಿಸಲಾದ 91,795 ಸಂದರ್ಶನಗಳ ಮಾಹಿತಿಯನ್ನೂ ಅಂತಿಮ ಫಲಿತಾಂಶ ರೂಪಿಸಲು ಬಳಸಲಾಗಿದೆ ಎಂದು ಹೇಳಿದೆ.
ಪಕ್ಷವಾರು ಅಂದಾಜುಗಳು  
ಆಗಸ್ಟ್ 2026ರ ‘ಮೂಡ್ ಆಫ್ ದಿ ನೇಷನ್’  ಸಮೀಕ್ಷೆಯ ಪ್ರಕಾರ, ಈಗ ಚುನಾವಣೆ ನಡೆದರೆ ಬಿಜೆಪಿ 261 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಜನವರಿ 2026ರ ಸಮೀಕ್ಷೆಯಲ್ಲಿ ಬಿಜೆಪಿಗೆ 287 ಸ್ಥಾನಗಳು ದೊರೆಯಬಹುದು ಎಂದು ಅಂದಾಜಿಸಲಾಗಿತ್ತು. ಅಂದರೆ ಆರು ತಿಂಗಳಲ್ಲಿ ಪಕ್ಷಕ್ಕೆ 26 ಸ್ಥಾನಗಳು ಕುಸಿತವಾಗಬಹುದು ಎಂಬುದು ಕಂಡುಬಂದಿದೆ. ಆದಾಗ್ಯೂ, ಈ ಅಂದಾಜು 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದ 240 ಸ್ಥಾನಗಳಿಗಿಂತ ಹೆಚ್ಚೇ ಆಗಿದೆ.
ಸಮೀಕ್ಷೆಯ ವಿಶ್ಲೇಷಣೆಯ ಪ್ರಕಾರ, ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ಜನ್‌ ಝಡ್‌ (Gen Z) ವರ್ಗ, ವ್ಯಕ್ತಪಡಿಸಿದ ಆಕ್ರೋಶ ಬಿಜೆಪಿಯ ಜನಪ್ರಿಯತೆಯ ಮೇಲೆ ಪರಿಣಾಮ ಬೀರಿರಬಹುದು. ಜುಲೈ ತಿಂಗಳಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ನಿರಂತರ ವಿದ್ಯಾರ್ಥಿ ಪ್ರತಿಭಟನೆಗಳು ಕೊನೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಿದ್ದರು.  ಮೋದಿ ಸರ್ಕಾರದ ಅವಧಿಯಲ್ಲಿ ಇದು ಅಪರೂಪದ ಬೆಳವಣಿಗೆಯೆಂದು ಪರಿಗಣಿಸಲಾಗಿದೆ.
ಇತ್ತ ಕಾಂಗ್ರೆಸ್‌ಗೆ ಸಮೀಕ್ಷೆಯ ಅಂಕಿಅಂಶಗಳು ಏರಿಕೆ ಕಂಡಿವೆ.  ಇತ್ತೀಚಿನ ಸಮೀಕ್ಷೆಯ ಪ್ರಕಾರ, ಈಗ ಚುನಾವಣೆ ನಡೆದರೆ ಕಾಂಗ್ರೆಸ್ 106 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂಬುದು ಕಂಡುಬಂದಿದೆ. ಜನವರಿ 2026ರ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ 80 ಸ್ಥಾನಗಳು ಸಿಗಲಿವೆ ಎಂದು ಅಂದಾಜಿಸಲಾಗಿತ್ತು. ಆಗಸ್ಟ್ 2025ರ ಸಮೀಕ್ಷೆಯಲ್ಲಿ ನೀಡಲಾಗಿದ್ದ 97 ಸ್ಥಾನಗಳ ಅಂದಾಜಿಗಿಂತಲೂ ಇದು ಹೆಚ್ಚಾಗಿದೆ.
ಮತ ಶೇಕಡಾವಾರು ಹೇಗಿದೆ?
ಮತ ಶೇಕಡಾವಾರು ವಿಚಾರದಲ್ಲಿಯೂ ಎನ್‌ಡಿಎಗೆ ಅಲ್ಪ ಹಿನ್ನಡೆ ಕಂಡುಬಂದಿದೆ. ಆಗಸ್ಟ್ 2026ರ ಸಮೀಕ್ಷೆಯ ಪ್ರಕಾರ ಎನ್‌ಡಿಎಗೆ 45.1 ಶೇಕಡಾ ಮತಗಳು ದೊರೆಯುವ ಸಾಧ್ಯತೆ ಇದೆ. ಜನವರಿ 2026ರ ಸಮೀಕ್ಷೆಯಲ್ಲಿ ಇದು 47 ಶೇಕಡಾ ಮತಗಳು ಸಿಗಬಹುದು ಎಂದು ಅಂದಾಜಿಸಲಾಗಿತ್ತು. ಆಗಸ್ಟ್ 2025ರ ಸಮೀಕ್ಷೆಯ ಬಳಿಕ ಎನ್‌ಡಿಎಗೆ ದಾಖಲಾಗಿರುವ ಅತಿ ಕಡಿಮೆ ಮತ ಶೇಕಡಾವಾರು ಇದಾಗಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 44 ಶೇಕಡಾ ಮತಗಳನ್ನು ಪಡೆದಿತ್ತು. ಇದು ಅದಕ್ಕಿಂತ ಹೆಚ್ಚಾಗಿದೆ.
ಇಂಡಿಯಾ ಮೈತ್ರಿಕೂಟದ ಮತ ಶೇಕಡಾವಾರು 39.1 ಶೇಕಡಾ ಎಂದು ಸಮೀಕ್ಷೆ ಅಂದಾಜಿಸಿದ್ದು, ಜನವರಿ 2026ರ ಸಮೀಕ್ಷೆಯ 39 ಶೇಕಡಾ ಅಂದಾಜಿನೊಂದಿಗೆ ಹೋಲಿಸಿದರೆ ಇದು ಅತ್ಯಲ್ಪ ಪ್ರಮಾಣದ ಏರಿಕೆಯಾಗಿದೆ.
ಸಮೀಕ್ಷೆಯ ಪ್ರಕಾರ, ಮುಂದಿನ ಪ್ರಧಾನಮಂತ್ರಿಯಾಗಿ ಯಾರನ್ನು ನೋಡಲು ಬಯಸುತ್ತೀರಿ ಎಂಬ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶೇ. 48.7 ಬೆಂಬಲ ದೊರೆತಿದ್ದು, ಅವರು ಮೊದಲ ಸ್ಥಾನದಲ್ಲಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶೇ. 27.1 ಬೆಂಬಲದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ ಶೇ. 9.2 ಬೆಂಬಲದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಉಳಿದಂತೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಶೇ. 2, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ ಯಾದವ್ ಅವರಿಗೆ ಶೇ. 1.7, ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಸಂಚಾಲಕ ಅಭಿಜಿತ್ ದಿಪ್ಕೆ ಅವರಿಗೆ ಶೇ. 1.3 ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರಿಗೆ ಶೇ. 1.2 ಬೆಂಬಲ ಮಾತ್ರ ದೊರೆತಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement