ತುಮಕೂರು: ರೈತರೊಬ್ಬರ ಹೊಲದಲ್ಲಿ ಬೋರ್ವೆಲ್ ಮೋಟಾರ್ ಆನ್ ಮಾಡುತ್ತಿದ್ದಂತೆ ನಾಡ ಬಾಂಬ್ ಸ್ಫೋಟಗೊಂಡ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕನಿಕಲಬಂಡೆ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮತ್ತೊಂದು ಜೀವಂತ ನಾಡ ಬಾಂಬ್ ಸಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಶುಕ್ರವಾರ ನಡೆದಿದ್ದು, ರೈತ ಗಿರಿಯಪ್ಪ ಎಂಬವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ತಮ್ಮ ಜಮೀನಿನಲ್ಲಿರುವ ಬೋರ್ವೆಲ್ ಮೋಟಾರ್ ಅನ್ನು ಚಾಲನೆ ಮಾಡಲು ಗಿರಿಯಪ್ಪ ಅವರು ಸ್ವಿಚ್ ಆನ್ ಮಾಡಿದಾಗ ಸ್ಟಾರ್ಟರ್ನಲ್ಲಿ ಅಳವಡಿಸಲಾಗಿದ್ದ ಸ್ಫೋಟಕ ಸಿಡಿದಿದೆ. ಆದರೆ ಸ್ಫೋಟದ ತೀವ್ರತೆ ಕಡಿಮೆ ಇದ್ದ ಕಾರಣ ಗಿರಿಯಪ್ಪ ಅವರು ಯಾವುದೇ ಗಾಯಗಳಾಗದೆ ಪಾರಾಗಿದ್ದಾರೆ.
ಈ ಕೃತ್ಯದ ಹಿಂದೆ ವೆಂಕಟೇಶೆಂಬಾತ ಇದ್ದಾನೆ ಎಂದು ರೈತ ಗಿರಿಯಪ್ಪ ಆರೋಪಿಸಿದ್ದಾರೆ. ತನ್ನನ್ನು ಹಾಗೂ ತನ್ನ ಮಗನನ್ನು ಕೊಲೆ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಅವರು ದೂರಿದ್ದಾರೆ.
ವೆಂಕಟೇಶ ಎಂಬಾತ ಗ್ರಾಮಸ್ಥರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಾನೆ ಎಂದು ಗಿರಿಯಪ್ಪ ಆರೋಪಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಫೆಬ್ರವರಿ 6ರಂದು ಕನಿಕಲಬಂಡೆ ಗ್ರಾಮದಲ್ಲಿ ನಡೆದ ಘಟನೆ ಕುರಿತು ಪಾವಗಡ ಪೊಲೀಸರಿಗೆ ದೂರು ನೀಡಿದ್ದೆವು. ಈ ದ್ವೇಷದಿಂದಲೇ ತನ್ನ ಹಾಗೂ ಮಗನ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ವೆಂಕಟೇಶನನ್ನು ಬಂಧಿಸಿ ನಮಗೆ ರಕ್ಷಣೆ ನೀಡಬೇಕು ಎಂದು ಗಿರಿಯಪ್ಪ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಮಾಹಿತಿ ತಿಳಿದ ಬಳಿಕ, ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ, ಮಧುಗಿರಿ ಡಿಎಸ್ಪಿ ಮಂಜುನಾಥ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತ ಗಿರಿಯಪ್ಪ ಹಾಗೂ ಇತರರಿಂದ ಮಾಹಿತಿ ಪಡೆದುಕೊಂಡರು.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಫೋಟಕ ಅಳವಡಿಕೆಯ ಹಿಂದಿನ ಉದ್ದೇಶ, ಭೂ ವಿವಾದದ ಹಿನ್ನೆಲೆ ಹಾಗೂ ಆರೋಪಿಯ ಚಟುವಟಿಕೆಗಳ ಕುರಿತು ಸಮಗ್ರ ತನಿಖೆ ಕೈಗೊಂಡಿದ್ದಾರೆ. ವೆಂಕಟೇಶ ಪರಾರಿಯಾಗಿದ್ದಾನೆ ಎನ್ನಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ