ಉತ್ತರ ಕನ್ನಡದ ಮೆಡಿಕಲ್ ಕಾಲೇಜು, ಶ್ರೇಷ್ಠ ಪಂಚಾಯತ ಪ್ರಶಸ್ತಿಗೆ ರಾಮಕೃಷ್ಣ ಹೆಗಡೆ ಹೆಸರು ; ಸಿಎಂ ಶಿವಕುಮಾರ ಘೋಷಣೆ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೆಡಿಕಲ್ ಕಾಲೇಜಿಗೆ ಮತ್ತು ಬೆಂಗಳೂರಿನ ಮುಖ್ಯ ರಸ್ತೆಗೆ ರಾಮಕೃಷ್ಣ ಹೆಗಡೆ ಅವರ ಹೆಸರ‌ನ್ನು ಇಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪ್ರಕಟಿಸಿದ್ದಾರೆ.
 ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶನಿವಾರ ನಡೆದ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಜನ್ಮ ಶತಮಾನೋತ್ಸವ ಸಮಾರಂಭವನ್ನು ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಅವರೊಂದಿಗೆ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯ ವೈದ್ಯಕೀಯ  ಕಾಲೇಜಿಗೆ ಮತ್ತು ಬೆಂಗಳೂರಿನ ಮುಖ್ಯ ರಸ್ತೆಗೆ ರಾಮಕೃಷ್ಣ ಹೆಗಡೆ ಹೆಸರ‌ನ್ನು ಇಡಲು ತೀರ್ಮಾನಿಸಲಾಗಿದೆ. ಅಲ್ಲದೆ, ಗ್ರಾಮೀಣ ಆಡಳಿತಕ್ಕೆ ಹೆಗಡೆಯವರು ನೀಡಿದ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಅವರ ಜನ್ಮದಿನದಂದು ‘ರಾಮಕೃಷ್ಣ ಹೆಗಡೆ ಶ್ರೇಷ್ಠ ಪಂಚಾಯಿತಿ ಪ್ರಶಸ್ತಿ’ ನೀಡಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವರ ಜೊತೆ ಚರ್ಚಿಸಲಾಗಿದೆ.  ಹಾಗೂ ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯ ಪ್ರಮುಖ ರಸ್ತೆಯೊಂದಕ್ಕೆ ರಾಮಕೃಷ್ಣ ಹೆಗಡೆ ಅವರ ಹೆಸರಿಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ರಾಮಕೃಷ್ಣ ಹೆಗಡೆಯವರು ಕರ್ನಾಟಕದಲ್ಲಿ ಜಾರಿಗೆ ತಂದಿದ್ದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿನ ಪ್ರಯೋಗಗಳು ದೇಶಕ್ಕೆ ಮಾದರಿಯಾಗಿತ್ತು. ನಂತರ ರಾಜೀವ ಗಾಂಧಿಯವರ ಸರ್ಕಾರದ ಅವಧಿಯಲ್ಲಿ 73 ಮತ್ತು 74ನೇ ಸಂವಿಧಾನ ತಿದ್ದುಪಡಿಗಳಿಗೆ ಈ ಚಿಂತನೆಯೇ ಪ್ರೇರಣೆಯಾಯಿತು ಎಂದರು.
ರಾಮಕೃಷ್ಣ ಹೆಗಡೆಯವರು ಕೇವಲ ಅಧಿಕಾರ ಮಾತ್ರ ನಡೆಸಿದ ನಾಯಕನಲ್ಲ. ಪಂಚಾಯತದಿಂದ ಸಂಸತ್ತಿನವರೆಗೆ ಹೊಸ ನಾಯಕತ್ವವನ್ನು ಸೃಷ್ಟಿಸಿದ ನಾಯಕರಾಗಿದ್ದರು.  ಒಬ್ಬ ನಾಯಕನ ಕೆಲಸ ಕೇವಲ ಹಿಂಬಾಲಕರನ್ನು ಸೃಷ್ಟಿಸುವುದಲ್ಲ. ನಾಯಕರನ್ನು ಸೃಷ್ಟಿಸುವುದೇ ನಿಜವಾದ ನಾಯಕತ್ವ. ರಾಮಕೃಷ್ಣ ಹೆಗಡೆ ಅವರ ಮೂಲ ತತ್ವ ಇದೇ ಆಗಿತ್ತು ಎಂದು ಹೇಳಿದರು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement